ಮಂಗಳೂರು: ಭಾರತೀಯರು ಗೋವಿಗೆ ನೀಡುವ ಗೌರವ ಅಪಾರ. ಮನುಷ್ಯನ ದೈನಂದಿನ ಜೀವನದಲ್ಲಿ ಗೋವಿನ ಪಾತ್ರ ಮಹತ್ವದ್ದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಗೋವನಿತಾಶ್ರಯ ಟ್ರಸ್ಟ್ ಮಂಗಳೂರು, ವಿಶ್ವ ಹಿಂದೂ ಪರಿಷತ್ ಸೇವಾ ಪ್ರಕಲ್ಪದ ವತಿಯಿಂದ ಟ್ರಸ್ಟ್‌ನ 20 ಸಂವತ್ಸರಗಳ ಸಾರ್ಥಕ ಗೋ ಸೇವೆಯ ಅಂಗವಾಗಿ ನಗರದ ಕೇಂದ್ರ ಮೈದಾನದಲ್ಲಿ ಎರಡು ದಿನ ಕಾಲ ನಡೆಯುವ ಬೃಹತ್ ಗೋಮಂಡಲ ಕಾರ್ಯಕ್ರಮವನ್ನು ಶನಿವಾರ ಉದ್ಘಾ ಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಎಲ್ಲ ವಸ್ತುಗಳಿಗೆ ಪರ್ಯಾಯವಾಗಿ ಹೊಸತನ್ನು ಸೃಷ್ಟಿ ಸಲಾಗಿದೆ. ಆದರೆ ಹಾಲಿಗೆ ಸಮಾನವಾದ ಇನ್ನೊಂದು ಹಾಲನ್ನು ಸೃಷ್ಟಿಸಲಾಗಿಲ್ಲ. ಗೋವಿನ ಹಾಲು ಶ್ರೇಷ್ಠ. ಅದರ ಉತ್ಪನ್ನಗಳೂ ಮನುಷ್ಯ ಜೀವನಕ್ಕೆ ಪ್ರತಿನಿತ್ಯ ಬೇಕಾಗು ವಂತಹದ್ದು. ಹಾಗಾಗಿ ಮನುಷ್ಯರ ಜೀವನದಲ್ಲಿ ಗೋವಿನ ಪಾತ್ರ ದೊಡ್ಡದು ಎಂದವರು ಹೇಳಿದರು.
ಹಾವೇರಿ ಜಿಲ್ಲೆಯ ಶ್ರೀ ಕ್ಷೇತ್ರ ಗುಡ್ಡದಮಲ್ಲಾಪುರದ ಶ್ರೀ ಮೂಕಪ್ಪ ಸ್ವಾಮೀಜಿಯವರ (ಬಸವರೂಪಿ ಸ್ವಾಮೀಜಿ) ಉಪಸ್ಥಿತಿ ಸಮಾರಂಭಕ್ಕೆ ಮೆರುಗು ತಂದಿತ್ತು. ಶಾಸಕ ಡಿ. ವೇದವ್ಯಾಸ ಕಾಮತ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವಿಹಿಂಪ ಗೋರಕ್ಷಾ ವಿಭಾಗದ ಕೇಂದ್ರೀಯ ಉಪಾಧ್ಯಕ್ಷ ಹುಕುಂಚಂದ್ ಸಾವಲಾಜೀ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪದ ಪ್ರಮುಖರಾದ ಕೇಶವ ಹೆಗಡೆ, ವಾಸುದೇವ ರಾಜ ಮೊದಲಾ ದವರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಡಾ| ಪಿ. ಅನಂತಕೃಷ್ಣ ಭಟ್ ಪ್ರಸ್ತಾವನೆಗೈದರು. ಅಧ್ಯಕ್ಷ ಎಂ.ಬಿ. ಪುರಾಣಿಕ್ ಸ್ವಾಗತಿಸಿ, ದಯಾನಂದ ಕಟೀಲು ನಿರೂಪಿಸಿದರು.ಕೊಟ್ಟಾರ ಭರತಾಂಜಲಿ ಸಂಸ್ಥೆಯ ಪ್ರತಿಮಾ ಶ್ರೀಧರ್ ಅವರ ಶಿಷ್ಯ ವರ್ಗ ದಿಂದ “ನೃತ್ಯಾಮೃತಂ’ ಭರತ ನಾಟ್ಯ ಜರಗಿತು. ಗೋ ಆರತಿ, ಗೋವುಗಳ ಮಧ್ಯೆ ಪುಟಾಣಿಗಳ ಶ್ರೀಕೃಷ್ಣ ಸ್ಪರ್ಧೆ ಸಹಿತ ವಿವಿಧ ಕಾರ್ಯಕ್ರಮಗಳು ನಡೆದವು. ರವಿವಾರವೂ ಕಾರ್ಯಕ್ರಮ ಮುಂದುವರಿಯಲಿದೆ.
ಭಾರತೀಯ ತಳಿ ಸರ್ವಶ್ರೇಷ್ಠ
ಆಶೀರ್ವಚನ ನೀಡಿದ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು, ವಿಶ್ವದಲ್ಲಿ ಗೋತಳಿಗಳನ್ನು ಎ1 ಮತ್ತು ಎ2 ಎಂಬುದಾಗಿ ವರ್ಗೀಕರಣ ಮಾಡಿದ್ದು, ಭಾರತೀಯ ತಳಿಗಳು ಎ2 ವರ್ಗಕ್ಕೆ ಸೇರುತ್ತವೆ. ಈ ತಳಿಗಳ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಸೇರಿದಂತೆ ಹಲವಾರು ಶಕ್ತಿಗಳ ಸಂಗಮ ಇರುವುದರಿಂದಲೇ ಭಾರತೀಯ ಗೋಪರಂಪರೆಗೆ ವಿಶಿಷ್ಟ ಸ್ಥಾನವಿದೆ ಎಂದರು.