ಸುಳ್ಯ ತಾಲೂಕಿನ ಜೀವನದಿ “ಪಯಸ್ವಿನಿ’ಯ ಒಡಲು ಮಲಿನವಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಒಟ್ಟು 87 ಕಿ.ಮೀ. ಹರಿಯುವ ನದಿ ತನ್ನೊಡಲಿನಲ್ಲಿ ತ್ಯಾಜ್ಯವನ್ನು ತುಂಬಿಕೊಂಡು ಸಂಕಟಪಡುತ್ತಿದೆ. ಈ ನದಿಯನ್ನು ಶುದ್ಧ ರೂಪದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉದಯವಾಣಿ ಸುದಿನ ಕಾಳಜಿ ಇದು. ಓದುಗರೂ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಬರೆದು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ನಮಗೆ ಕಳುಹಿಸಿ. ಆಯ್ದ ಅಭಿಪ್ರಾಯಗಳನ್ನು ಸುದಿನದಲ್ಲಿ ಪ್ರಕಟಿಸಲಾಗುವುದು.
ನಮ್ಮ ವಾಟ್ಸ್‌ಆ್ಯಪ್ ಸಂಖ್ಯೆ: 9108051452
ಕೆಲವು ವರ್ಷಗಳ ಹಿಂದೆ ಪಯಸ್ವಿನಿ ನದಿ ಹುಟ್ಟುವ ಸ್ಥಳ (ತಾಳತ್‌ಮನೆ) ದಿಂದ ತೊಡಿಕಾನ ಸೇತುವೆ ತನಕ ನಾನು ಮತ್ತು ಮೈಸೂರಿನ ಏಳೆಂಟು ಸ್ನೇಹಿತರು ನದಿಯಲ್ಲೇ ಎರಡು ದಿವಸ ಕಾಲ್ನಡಿಗೆ ಮೂಲಕ ಸಂಚರಿಸಿದ್ದೆವು. ಆ ವೇಳೆ ನಾವು ಕಂಡುಕೊಂಡ ಅಂಶಗಳು ಹಾಗೂ ನದಿ ಉಳಿವಿಗೆ ಆಗಬೇಕಾದ ಜಾಗೃತಿ ಕಾರ್ಯಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ನದಿ ಹುಟ್ಟುವ ತಾಳತ್‌ಮನೆಯಿಂದ ಕೊಯನಾಡು ತನಕ ಇಳಿಜಾರು ಪ್ರದೇಶ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶುದ್ಧ ರೂಪದಲ್ಲೇ ಇದೆ. ಕೊಯನಾಡಿನಿಂದ ಕೆಳಭಾಗಕ್ಕೆ ಎರಡು ಮುಖ್ಯ ಸಮಸ್ಯೆಗಳು ಕಾಡುತ್ತಿವೆ. ಒಂದೆಡೆ ಕಸ ಕಡ್ಡಿ, ಚರಂಡಿ, ಮಲೀನ ನೀರು ಹೀಗೆ ನಾನಾ ರೂಪದ ತ್ಯಾಜ್ಯ ನದಿಗೆ ಸೇರುತ್ತಿದೆ. ಮೇಲ್ಭಾಗದಲ್ಲಿ ಇದರ ಪ್ರಮಾಣ ಇಲ್ಲ ಅನ್ನುವುದಕ್ಕಿಂತ ಅತೀ ಕಡಿಮೆ ಎನ್ನಬಹುದು. ಈ ಸಮಸ್ಯೆಗಳ ನಿಯಂತ್ರಣಕ್ಕೆ ಕಾಯಿದೆಗಳ ಆವಶ್ಯಕತೆ ಇದೆ.
ಎರಡನೆಯದ್ದು, ನದಿ ಆಳದಿಂದ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನೀರೆತ್ತುವುದು. ಇದು ಗಂಭೀರ ಸಮಸ್ಯೆ. ಪಯಸ್ವಿನಿ ಕೊಯನಾಡಿನಿಂದ ಸಮುದ್ರ ಸೇರುವ ತನಕ ಸಾವಿರಾರು ಪಂಪ್‌ಸೆಟ್‌ಗಳು ನದಿ ನೀರು ಹೀರಿಕೊಳ್ಳುತಿವೆ. ಇದು ಅವೈಜ್ಞಾನಿಕವೂ ಹೌದು. ಹೆಚ್ಚೆಂದರೆ ಕೃಷಿ ಭೂಮಿಗೆ ದಿನದ 1 ಗಂಟೆ ನೀರು ಸಾಕು. ಅದಾಗ್ಯೂ ಇಲ್ಲಿ ಅಟೋ ಸ್ಟಾರ್ಟರ್ ಬಳಸಿ ವಿದ್ಯುತ್ ಇರುವಷ್ಟು ಹೊತ್ತು ನದಿಯಿಂದ ನೀರೆಳೆದು ಪುನಃ ನದಿಗೆ ಬರುವಷ್ಟು ಬಳಸಲಾಗುತ್ತಿದೆ. ಇದು ನಮ್ಮ ಬೇಜವಾಬ್ದಾರಿ. ಪರಿಸ್ಥಿತಿ ಹೇಗಿದೆ ಎಂದರೆ, ನದಿ ಹರಿಯುವ ಕಾಡಿನೊಳಗೆ ಕೆಡಿಸುವ ಪ್ರಮಾಣ ಕಡಿಮೆ, ಬಳಕೆ ಪ್ರಮಾಣ ಹೆಚ್ಚು, ಆದರೆ ಸಮತಟ್ಟು ಜಾಗದಲ್ಲಿ ಬಳಸುವುದಕ್ಕಿಂತ ಕೆಡಿಸುವ ಪ್ರಮಾಣ ಅತ್ಯಧಿಕ. ಹೀಗಾಗಿ ನದಿ ನೀರನ್ನು ಅವಶ್ಯಕ್ಕಿಂತ ಹೆಚ್ಚು ಹೀರಿಕೊಳ್ಳುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಕಾಯ್ದೆ, ನಿಯಮಗಳ ಜಾರಿ ಆವಶ್ಯಕ.
ನದಿ ತನ್ನ ಸಹಜ ಆಳದಲ್ಲಿ ಹರಿಯಬೇಕು. ಅಗತ್ಯಕ್ಕಿಂತ ಹೆಚ್ಚು ಮರಳು ತುಂಬಿದರೆ ಅಥವಾ ಆಳ ಉಂಟಾದರೆ ಇದರಿಂದ ಸಮಸ್ಯೆಗಳೇ ಹೆಚ್ಚು. ಹೀಗಾಗಿ ಹೆಚ್ಚುವರಿ ಮರಳು ತೆಗೆಯುವುದರಿಂದ ಯಾವುದೇ ತೊಂದರೆ ಉಂಟಾಗದು. ಆದರೆ ಸಕ್ಕಿಂಗ್ ಯಂತ್ರ ಬಳಸಿ ಮರಳುಗಾರಿಕೆ ಮಾಡುವುದರಿಂದ ನದಿ ಒಯಿಲಿಗೂ ಅಪಾಯ ಉಂಟಾಗುತ್ತದೆ. ನದಿ ಪ್ರಕೃತಿದತ್ತವಾಗಿ ಹರಿಯುವ ಆಳ, ಸಮತಟ್ಟು ಹೊಂದದೆ ಇದ್ದರೆ ನೆರೆ ಹಾವಳಿ ಮೊದಲಾದ ಅವಘಡಗಳೇ ಕಂಡು ಬರುತ್ತವೆ. ಇದಕ್ಕಾಗಿ ವಿಶೇಷವಾಗಿ ದಕ್ಷಿಣ ಭಾರತದ ನದಿಗಳ ಉಳಿವಿನ ದೃಷಿಯಲ್ಲಿ ಆಡಳಿತ ವ್ಯವಸ್ಥೆಗಳು ವಿಶೇಷ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಬೇಕಿದೆ.
ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕು. ಅಂದಾಜು 4 ಮೀ. ಎತ್ತರದ ಕಟ್ಟ ನಿರ್ಮಿಸಬೇಕು. ಇದರಿಂದ ನದಿ ಪಾತ್ರದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿರಲು ಸಾಧ್ಯವಿದೆ. ಈ ಕಿಂಡಿ ಅಣೆಕಟ್ಟಿನಲ್ಲಿ ಅಲ್ಲಲ್ಲಿ ಸಂಗ್ರಹವಾಗಿ ಮರಳನ್ನು ಎತ್ತಲು ಅನುಕೂಲವಿದೆ.
ನದಿ ತಟದ ಜಾಗ ಫಾರೆಸ್ಟ್ ಬಫರ್ ಎಂದು ಗುರುತಿಸಲಾಗುತ್ತದೆ. ಅಂದರೆ ಗಿಡ, ಮರಗಳು ತುಂಬಿರುವುದು ಎಂದರ್ಥ. ಇದರಿಂದ ಭೂ ಸವಳಿಕೆ ನಿಯಂತ್ರಣಕ್ಕೆ ಬರುತ್ತದೆ. ನದಿ ಇಕ್ಕೆಲಗಳಲ್ಲಿ ಬೃಹತ್ ಮರಗಳು ಇರುವ ಕಡೆ ನದಿ ಅಗಲ ಕಿರಿದಾಗಿ ಹಾಗೂ ಆಳವಾಗಿ ಹರಿಯುವುದು ಅದಕ್ಕೆ ಉದಾಹರಣೆ. ನದಿಯನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನದಿ ಪಾತ್ರದಲ್ಲಿ ಬದುಕುವವರ ಕರ್ತವ್ಯ. ಅದಕ್ಕಾಗಿ ವಿಶೇಷ ಕಾಯ್ದೆ, ಹೊಸ ನಿಯಮ ತರಬೇಕು ಹಾಗೂ ಜಾಗೃತಿ ಮೂಡಿಸಬೇಕು. ನದಿಗಳ ಉಳಿವು ಇರುವುದು ಅದರ ಇಕ್ಕೆಲಗಳಲ್ಲಿ ಇರುವ ಜನರ ಕೈಯಲ್ಲಿ ಅನ್ನುವುದೂ ಅಷ್ಟೇ ಸತ್ಯ.
ಏನು ಮಾಡಬಹುದು?
ನದಿ ಪಾತ್ರದ ಜನರು ಅಥವಾ ನಿವಾಸಿಗಳು ನದಿಯನ್ನು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀತಿ ನಿಯಮ ಜಾರಿ ಮಾಡುವುದು.
ಪಂಪ್‌ಸೆಟ್ ಬಳಸಿ ಬೇಕಾಬಿಟ್ಟಿ ನೀರು ಹೀರುವುದಕ್ಕೆ ಕಾಯಿದೆ ಅಥವಾ ನಿಯಮಗಳ ಮೂಲಕ ನಿಯಂತ್ರಣ ಹೇರುವುದು.
ಭೂ ಸವಳಿಕೆ ತಡೆಗೆ ನದಿ ಪಾತ್ರದಲ್ಲಿ ಅರಣ್ಯàಕರಣಕ್ಕೆ ಆದ್ಯತೆ ನೀಡುವುದು.
ಅಲ್ಲಲ್ಲಿ ಕಿರು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವುದು.
-ಡಾ| ಸುಂದರ ಕೇನಾಜೆ, ಲೇಖಕ, ಸುಳ್ಯ