ವಿಜಯಪುರ: ಪ್ರಕೃತಿ ಸಂರಕ್ಷಣೆಯಲ್ಲಿ ಹಸಿರು ಸೈನಿಕರಾಗಿ ಶ್ರಮಿಸುವ ಅರಣ್ಯ ಇಲಾಖೆಯ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ. ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗೆ ಹಗಲಿರುಳು ದುಡಿಯುವ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಯ ಸೇವೆ ವಿಶ್ವದ ಪರಿಸರ ಸಂರಕ್ಷಣೆಗೆ ಸಹಕಾರಿ ಎಂದು ಎಸ್ ಪಿಪಿಎ (ಸೋಸೈಟಿ ಫಾರ್ ಪ್ರೊಟೆಕ್ಷನ್ ಪ್ಲಾಂಟ್ಸ್ ಆ್ಯಂಡ್ ಎನಿಮಲ್ಸ್) ಸಂಸ್ಥಾಪಕ ಅಧ್ಯಕ್ಷ ಧ್ರುವ ಪಾಟೀಲ ಬಣ್ಣಿಸಿದರು.
ನಗರದ ಬಿಎಲ್‌ಡಿಇ ವೈದ್ಯಕೀಯ ಆಸ್ಪತ್ರೆಯಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಎಲ್ಲ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಕೋಟಿ ವೃಕ್ಷ ಅಭಿಯಾನ ಯಶಸ್ಸಿನಲ್ಲಿ ಅರಣ್ಯ ಇಲಾಖೆಯ ಪಾತ್ರ ಪ್ರಮುಖ ಹಾಗೂ ಸ್ಮರಣೀಯವಾಗಿದೆ ಎಂದು ಶ್ಲಾಘಿಸಿದರು.
ಈ ಅಭಿಯಾನ ಮುಂದುವರಿಸಲು ಅರಣ್ಯ ಇಲಾಖೆಯ ಸಿಬ್ಬಂದಿಯ ಆರೋಗ್ಯವೂ ಪ್ರಮುಖವಾಗಿದೆ. ಪರಿಸರದ ಸಂರಕ್ಷಣೆಗಾಗಿ ಸೇವೆ ಸಲ್ಲಿಸುವ ಈ ಸಿಬ್ಬಂದಿಯ ಸದೃಢ ಆರೋಗ್ಯಕ್ಕೆ ಪೂರಕವಾಗಿ ವೃಕ್ಷ ಅಭಿಯಾನ ಪ್ರತಿಷ್ಠಾನ ಮತ್ತು ಎಸ್‌ಪಿಪಿಎ ಜಂಟಿಯಾಗಿ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿವೆ. ಈ ಮೂಲಕ ಪರಿಸಕ್ಕೆ ಪೂರವಾಗಿ ಕೆಲಸ ಮಾಡುವವರಿಗೆ ಅಳಿಲು ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಅರವಿಂದ ಪಾಟೀಲ, ಭವಿಷ್ಯದಲ್ಲಿ ಪ್ರತಿ ವರ್ಷ ಗ್ರೀನ್ ವಾರಿಯರ್ಸ್‌ಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದ ಕುರಿತು ಮಾತನಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಈರಣ್ಣ ಮುತ್ತಗಿ, ತಾವು ಕಳೆದ ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಇದೇ ಮೊದಲ ಬಾರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿರುವುದು ನೆಮ್ಮದಿ ಮೂಡಿಸಿದೆ ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ಮಹಾಂತೇಶ ಹಾದಿಮನಿ ಮಾತನಾಡಿ, ಖಾಸಗಿಯಾಗಿ ಆರೊಗ್ಯ ತಪಾಸಣೆಗೆ ಹೋದಲ್ಲಿ ಹತ್ತಾರು ಸಾವಿರ ರೂ. ಖರ್ಚಾಗುತ್ತದೆ. ಈ ಆರೋಗ್ಯ ಶಿಬಿರದಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗದ ಕಾಯಿಲೆಯ ಇಸಿಜಿ ಸೇರಿದಂತೆ ಇತರೆ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಸುಮಾರು 200 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ| ರಾಜೇಶ ಹೊನ್ನುಟಗಿ, ಜಿಲ್ಲಾ ವಲಯ ಅರಣ್ಯಾಧಿಕಾರಿ ಡಾ| ಪಿ.ಕೆ.ಎಂ. ಪ್ರಶಾಂತ, ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಸೇರಿದಂತೆ ಇತರರು ಇದ್ದರು.