Advertisement

ದೇಶಾಭಿವೃದ್ಧಿಗೆ ಶಿಕ್ಷಣದ ಪಾತ್ರ ಅಪಾರ; ಯಡಿಯೂರಪ್ಪ

06:09 PM Sep 08, 2022 | Nagendra Trasi |

ಶಿಕಾರಿಪುರ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ವ್ಯವಸ್ಥೆ ಪ್ರಮುಖವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಲಹೆ ನೀಡಿದರು.

Advertisement

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ 2ನೇ ರಾಷ್ಟ್ರಪತಿ ಡಾ| ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾರ್ಶನಿಕರು ಹೇಳಿದ್ದಾರೆ. ಗುರುವಿನ ಶ್ರೀರಕ್ಷೆ ಇದ್ದಾಗ ಮಾತ್ರ ಜೀವನಕ್ಕೆ ಮುಕ್ತಿ ದೊರೆಯುತ್ತದೆ.

ಮಕ್ಕಳು ಮನೆಗಿಂತ ಹೆಚ್ಚು ಸಮಯ ಶಾಲಾ ಕಾಲೇಜುಗಳಲ್ಲಿ ಕಳೆಯುವುದರಿಂದ ಮಕ್ಕಳನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ವಿದೇಶದ ದೊಡ್ಡ ಕಂಪನಿಗಳಲ್ಲಿ ಸಿಇಒಗಳಾಗಿ ದೇಶದ ವಿದ್ಯಾವಂತ ಪ್ರಜೆಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ವಿಶ್ವ ಗುರು ಆಗಲು ಮುಂದಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಶಿಕ್ಷಕರು ಈ ಶಿಕ್ಷಣ ನೀತಿ ಬಗ್ಗೆ ತರಬೇತಿ ಪಡೆದು ಪಾಠ ಮಾಡಬೇಕು. ಬಿಸಿಯೂಟ ಯೋಜನೆ ತರುವಲ್ಲಿ ಶಿಕ್ಷಕರ ಸಹಕಾರ ಮುಖ್ಯವಾಗಿದೆ.

ಸರ್ಕಾರದ ವಿವಿಧ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಶಿಕ್ಷಕರು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದ ಅವರು, ಶಿಕ್ಷಕರ ಬೇಡಿಕೆ ಈಡೇರಿಸಲು ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು. ಸಂಸದ ಬಿ.ವೈ. ರಾಘವೇಂದ್ರ, ದೇಶದ ಸತ್ಪ್ರಜೆಗಳನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದ್ಯತೆ ನೀಡಿದ್ದಾರೆ. ವಿಮಾನ ನಿಲ್ದಾಣ, ಹೊಸ ರೈಲ್ವೆ ಮಾರ್ಗ ನಿರ್ಮಾಣ ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅನುದಾನ ನೀಡಿದ್ದಾರೆ ಎಂದು ಶ್ಲಾಘಿಸಿದರು.

Advertisement

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್‌. ಗುರುಮೂರ್ತಿ, ನಾವು ಈ ಉನ್ನತ ಹಂತಕ್ಕೆ ಬೆಳೆಯಲು ನಮ್ಮ ಗುರುಗಳು ಶ್ರೀಧರ ಅವಧಾನಿಗಳು ಕಾರಣರಾಗಿದ್ದಾರೆ. ಮಕ್ಕಳಿಗೆ ವಿದ್ಯೆ ಜತೆ ಸಂಸ್ಕಾರ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಜ್ಞಾನವಂತ, ಗುಣವಂತ, ಸಂಸ್ಕಾರವಂತ ಯುವಕ ಯುವತಿಯರು ದೇಶದ ಆಸ್ತಿಯಾಗಿದ್ದಾರೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಿ ನೌಕರರ ಹಾಗೂ ಶಿಕ್ಷಕರ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್‌ ನಲ್ಲಿ 7ನೇ ವೇತನ ಆಯೋಗ ಜಾರಿ ಮಾಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೌಕರರ ಸಮಸ್ಯೆ ಪರಿಹರಿಸುವಲ್ಲಿ ಯಡಿಯೂರಪ್ಪ ಪಾತ್ರವಿದೆ ಎಂದು ಶ್ಲಾಘಿಸಿದರು.

ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುಸಿಂಗ್‌, ಮಾಜಿ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ, ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾ ಧಿಕಾರಿ ಜಿ.ಎಸ್‌. ಶಶಿಧರ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಡಿ. ಮಧುಕೇಶ್ವರ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದ ಬಸಪ್ಪ, ರಾಜ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿವಾಕರ್‌, ಶಿಕ್ಷಕರ ಸಂಘದ ಪದಾ ಧಿಕಾರಿಗಳಾದ ಬಿ.ಪಾಪಯ್ಯ, ಬಿ.ಆರ್‌. ಮಂಜಪ್ಪ, ಎಂ.ಜಿ. ಪ್ರಕಾಶ್‌, ನಾಗರಾಜನಾಯ್ಕ, ಅಂಜನಪ್ಪ, ವಿರೂಪಾಕ್ಷಪ್ಪ, ಆರ್‌. ಎಂ. ಘಾಸಿ, ಬಸವನಗೌಡ ಕೊಣಿ¤, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

ಸಚಿವ ಉಮೇಶ್‌ ಕತ್ತಿ ನಿಧನಕ್ಕೆ ಸಂತಾಪ
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಚಿವ ಉಮೇಶ್‌ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಉಮೇಶ್‌ ಕತ್ತಿ ನಮ್ಮ ಆತ್ಮೀಯ ಒಡನಾಡಿ ಆಗಿದ್ದರು. ಹಾಗೂ ಸರಳ ಸಜ್ಜನಿಕೆ ರಾಜಕಾರಣಿಯಾಗಿದ್ದರು. ಅವರ ನಿಧನ ನಮಗೆ ಆಘಾತ ಹಾಗೂ ದುಃಖ ತಂದಿದೆ. ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಕಿರಿಯ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿ ಒಂಬತ್ತು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ ಸೇವೆ ಸಲ್ಲಿಸಿ ಅಪಾರ ಜನರ ಪ್ರೀತಿ ಗಳಿಸಿದ್ದರು. ಹಿರಿಯ ನಾಯಕ ಉಮೇಶ್‌ ಕತ್ತಿ ನಿಧನ ರಾಜ್ಯ ಹಾಗೂ ನಮ್ಮ ಪಕ್ಷಕ್ಕೆ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next