Advertisement

ಬಂಡೆ ಉರುಳಿ ರೈಲು ಸಂಚಾರ ಮತ್ತೆ ಸ್ಥಗಿತ

11:49 AM Jul 04, 2018 | |

ಸಕಲೇಶಪುರ/ ಸುಬ್ರಹ್ಮಣ್ಯ: ಮಂಗಳೂರು-ಹಾಸನ ರೈಲು ಮಾರ್ಗದ ಎಡಕುಮೇರಿ-ಕಡಗರಹಳ್ಳಿ ನಿಲ್ದಾಣದ ನಡುವೆ ಎಡಕುಮೇರಿ ಬಳಿ ಮಂಗಳವಾರ ಗುಡ್ಡ ಕುಸಿದು ಬಂಡೆಕಲ್ಲು, ಮಣ್ಣು, ಮರಗಳು ಹಳಿಗಳ ಮೇಲೆ ಬಿದ್ದಿವೆ. ಪರಿಣಾಮ ಸುಬ್ರಹ್ಮಣ್ಯ ರಸ್ತೆ – ಸಕಲೇಶಪುರ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಸಂಚರಿಸಬೇಕಿದ್ದ ಮಂಗಳೂರು-ಬೆಂಗಳೂರು ರೈಲನ್ನು ಎಡಕುಮೇರಿ ನಿಲ್ದಾಣದಿಂದ ವಾಪಸು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ.

Advertisement

ಪುತ್ತೂರಿನಿಂದ ಮಧ್ಯಾಹ್ನ 1.20ಕ್ಕೆ ಹೊರಟ ರೈಲು ಸಂಜೆ 5.30ಕ್ಕೆ ಪುತ್ತೂರಿಗೆ ಮರಳಿದೆ. ಸುಮಾರು 8 ಗಂಟೆವರೆಗೆ ಪ್ರಯಾಣಿಕರು ರೈಲು ನಿಲ್ದಾಣದ ಆವರಣದಲ್ಲೇ ಕುಳಿತಿದ್ದರು. ಮಕ್ಕಳ ಅಳು, ದೊಡ್ಡವರ ಜಗಳ, ಕೆಲಸಕ್ಕೆಂದು ಹೊರಟು ನಿಂತವರ ತೊಳಲಾಟ ಕಂಡುಬಂತು. ಬಳಿಕ 9 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳಿಹಿಸಲಾಯಿತು. ಕೆಲವು ಪ್ರಯಾಣಿಕರು ಟಿಕೆಟ್‌ ಹಣ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ರೈಲು ಘಾಟಿ ಏರಲಿರುವುದರಿಂದ ಸುಬ್ರಹ್ಮಣ್ಯದಲ್ಲಿ ಹಿಂಬದಿಗೂ ಎಂಜಿನ್‌ ಒಂದನ್ನು ಜೋಡಿಸಲಾಗುತ್ತದೆ. ಆ ಕಾರಣದಿಂದಾಗಿ ರೈಲು ಎಡಕುಮೇರಿ ತಲುಪಿದ್ದರೂ ಹಿಂದಕ್ಕೆ ಮರಳಿ ಬರಲು ಸಾಧ್ಯವಾಯಿತು.

ಪಾರಾದ ರೈಲು: ಯಶವಂತಪುರ-ಮಂಗಳೂರು ರೈಲು ಪೂರ್ವಾಹ್ನ 11.30ಕ್ಕೆ ಸಕಲೇಶಪುರ ನಿಲ್ದಾಣದಿಂದ ಹೊರಟಿದ್ದು, ಸಿರಿಬಾಗಿಲನ್ನು ದಾಟಿ 20 ನಿಮಿಷಗಳಲ್ಲಿ ಭೂ ಕುಸಿತ ಸಂಭವಿಸಿದೆ. ಕಳೆದ ಜೂನ್‌ ತಿಂಗಳಲ್ಲಿ ಈ ಭಾಗದಲ್ಲಿ ದಾಖಲೆ ಪ್ರಮಾಣದ ಮಳೆ ಬಿದ್ದ ಪರಿಣಾಮ ಎರಡು ಬಾರಿ ಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೂಮ್ಮೆ ಈ ರೀತಿಯ ಘಟನೆ ನಡೆದಿರುವುದು ಆತಂಕಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next