Advertisement
ಬೆಳಗ್ಗೆ ಕಾಲು ಮುರಿದುಕೊಂಡು ಓಡಾಡಲಾಗದ ಸ್ಥಿತಿಯಲ್ಲಿ ರಸ್ತೆಯ ಪಕ್ಕದಲ್ಲಿ ಕಡವೆ ಪತ್ತೆಯಾದ ವಿಚಾರವನ್ನು ಸ್ಥಳೀಯರು ಅರಣ್ಯ ಇಲಾಖಾ ಸಿಬಂದಿಗೆ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಆರ್. ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ರವಿಪ್ರಕಾಶ್, ಅರಣ್ಯ ರಕ್ಷಕರಾದ ರವಿಕುಮಾರ್, ರವಿಚಂದ್ರ ಪಡುಬೆಟ್ಟು, ಕೆ.ಸುಬ್ರಹ್ಮಣ್ಯ ಅವರು ಕಡವೆಯನ್ನು ಕಡಬ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಗಾಗಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಕಳುಹಿಸಿಕೊಡಲಾಯಿತು.
ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಕುಂತೂರು ಪದವು-ಬಲ್ಯದ ನಡುವೆ ಕಳೆದ ಕೆಲ ವರ್ಷಗಳಿಂದ ಬೇಸಗೆ ಸಮಯದಲ್ಲಿ ಕುಡಿಯುವ ನೀರನ್ನು ಹುಡುಕುತ್ತಾ ಕಾಡುಪ್ರಾಣಿಗಳು ರಸ್ತೆಗೆ ಬಂದು ಅಪಘಾತಗಳು ಸಂಭಸುತ್ತಿವೆ. ಈ ಹಿಂದೆ ಪ್ರತ್ಯೇಕ ಘಟನೆಗಳಲ್ಲಿ 2 ಕಡವೆಗಳು ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದವು. ಎರಡು ವರ್ಷಗಳ ಹಿಂದೆ ಬೆಳಗಿನ ಜಾವ ಬಲ್ಯ ಸಮೀಪ ಕಾಡುಪ್ರಾಣಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕಿನಲ್ಲಿ ಹಿಂಬದಿ ಸವಾರೆಯಾಗಿದ್ದ ಕೊಂಬಾರು ಮೂಲದ ಮಹಿಳೆಯೋರ್ವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಎಚ್ಚರಿಕೆ ಫಲಕ ಅಳವಡಿಕೆ
ಈ ಘಟನೆಗಳ ಬಳಿಕ ಅರಣ್ಯ ಇಲಾಖೆಯು ಆ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಸಂಚರಿಸುವ ಪ್ರದೇಶ, ವಾಹನ ಸವಾರರು ನಿಧಾನವಾಗಿ ಜಾಗರೂಕತೆಯಿಂದ ಚಲಿಸುವಂತೆ ರಸ್ತೆ ಪಕ್ಕದಲ್ಲಿ ಎಚ್ಚರಿಕೆಯ ಫಲಕವನ್ನು ಅಳವಡಿಸಲಾಗಿದೆ.