ಶಿರಸಿ: ಕೆಲವು ಕಡೆ ಅಭ್ಯರ್ಥಿಗಳು ಚುನಾವಣೆ ನಡೆಸಿದರೆ, ಉತ್ತರ ಕನ್ನಡದಲ್ಲಿ ಕಾರ್ಯಕರ್ತರು ಚುನಾವಣೆ ನಡೆಸುತ್ತಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸದೇ ಬಿಜೆಪಿ ಗೆಲುವಿಗೆ ರಹದಾರಿ ಮಾಡಿಕೊಟಿದೆ ಎಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ನಗರದ ರೋಟರಿ ಸೆಂಟರ್‌ನಲ್ಲಿ ಸೋಮವಾರ ನಡೆದ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಹಾಕದೇ ಜೆಡಿಎಸ್‌ಗೆ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿದ್ದು ಸುಲಭದಲ್ಲಿ ಆಗಿಲ್ಲ. ತೆರೆಯ ಹಿಂದೆ ಸಾಕಷ್ಟು ಕೆಲಸಗಳಾಗಿವೆ. ರಾಜಕಾರಣದಲ್ಲಿ ಯಾವುದೂ ಆಕಸ್ಮಿಕವಲ್ಲ. ತೆರೆಯ ಹಿಂದೆ ಹಾಗೂ ಮುಂದೆ ಸಾಕಷ್ಟು ಬೆಳವಣಿಗೆಗಳು ನಡೆದಿರುತ್ತವೆ ಎಂದ ಅವರು, ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸದೇ ಜೆಡಿಎಸ್ ಬಿಟ್ಟುಕೊಡುತ್ತದೆ ಎಂದು ಆರು ತಿಂಗಳ ಮೊದಲೇ ಹೇಳಿದ್ದೆ. ಅದರಂತೆ ಆಗಿದೆ. ಗೆಲುವಿಗೆ ಒನ್‌ವೇ ಮಾಡಿಕೊಟ್ಟಿದ್ದಾರೆ. ಇದಕ್ಕೆ ಕಾರಣರಾದವರಿಗೆ ಅಭಿನಂದಿಸುತ್ತೇನೆ ಎಂದೂ ಹೇಳಿದರು.
ಪಕ್ಷ ತನ್ನನ್ನು ನಿಲ್ಲಿಸಿದೆ. ನನಗೆ ಓಟು ಕೊಡಿ, ಗೆಲ್ಲಿಸಿ ಎಂದು ಈವರೆಗೂ ಕೇಳಿಲ್ಲ. ರಾಜಕಾರಣದಲ್ಲಿ ಇರುವವರೆಗೂ ಹೀಗೆ ಕೇಳಲ್ಲ. ನಮ್ಮ ಗುರಿ ಏನಿದ್ದರೂ ಭಗವಾ ಧ್ವಜಕ್ಕೆ ದೇಶದಲ್ಲಷ್ಟೇ ಅಲ್ಲದೇ ಜಗತ್ತಿನ ಮೂಲೆಮೂಲೆಯಲ್ಲೂ ಗೌರವ ಸಿಗಬೇಕು ಎಂಬುದು ಎಂದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ನಡೆಸಿದ ಬಿರುಸಿನ ಪ್ರಚಾರದಂತೆ ಈ ಚುನಾವಣೆಯಲ್ಲೂ ಕೈಗೊಂಡಿದ್ದರೆ ನಮ್ಮ ಎದುರಾಳಿ ಅಭ್ಯರ್ಥಿ ಇಡಗಂಟು ದೊರೆಯುವುದು ಅನುಮಾನವಿತ್ತು. ಆದರೆ ಒಂದಾನುವೇಳೆ ಈ ಬಾರಿ ಆ ಅಭ್ಯರ್ಥಿಗೆ ಇಡಗಂಟು ಸಿಕ್ಕಿದರೆ ಅದು ನಮ್ಮ ಅತಿಯಾದ ಆತ್ಮವಿಶ್ವಾಸ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ಪ್ರಮುಖರಾದ ಗಣೇಶ ಸಣ್ಣಲಿಂಗಣ್ಣನವರ, ರೇಖಾ ಹೆಗಡೆ, ನಂದನ ಸಾಗರ, ಉಷಾ ಹೆಗಡೆ, ಕೃಷ್ಣ ಎಸಳೆ, ಚಂದ್ರು ಎಸಳೆ, ಆರ್.ವಿ. ಹೆಗಡೆ, ಗಣಪತಿ ನಾಯ್ಕ, ರಿತೇಶ, ರಮಾಕಾಂತ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು.