ಬದಿಯಡ್ಕ: ವಾಹನ ಸಂಚಾರ ಅಸಾಧ್ಯವಾದ ಬದಿಯಡ್ಕ-ಏತಡ್ಕ-ಕಿನ್ನಿಂಗಾರ್ ರಸ್ತೆಯ ಶೋಚನೀಯಾವಸ್ಥೆಗೆ ಪರಿಹಾರ ಕಾಣದ ಅಧಿಕಾರಿಗಳ ನಿಲುವು ಪ್ರತಿಭಟಿಸಿ ಜನಪರ ಆಂದೋಲನ ತೀವ್ರಗೊಳ್ಳುತ್ತಿದೆ. ರಸ್ತೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ನೇರಪ್ಪಾಡಿಯಲ್ಲಿ ಮಹಿಳೆಯರ ಸಹಿತ ಸ್ಥಳೀಯರು ರಸ್ತೆ ತಡೆ ಸೃಷ್ಟಿಸಿದರು.
ಶಾಸಕ, ಜಿಲ್ಲಾಧಿಕಾರಿ, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ನೀಡಿಯೂ ಫಲವಿಲ್ಲದ ಹಿನ್ನೆಲೆಯಲ್ಲಿ ಮಹಿಳೆಯರು ಸ್ವತಃ ಮುಷ್ಕರ ರಂಗಕ್ಕಿಳಿದಿದ್ದಾರೆ, ಹಲವು ವರ್ಷಗಳಿಂದ ಈ ರಸ್ತೆ ಶೋಚನೀಯಾವಸ್ಥೆಯಲ್ಲಿದ್ದರೂ ಈಗ ಸಂಚಾರವೇ ಅಸಾಧ್ಯವಾದ ಸ್ಥಿತಿಗೆ ತಲುಪಿದೆ. ಮಕ್ಕಳಿಗೆ ಶಾಲೆಗೆ ತೆರಳಲು, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಸ್ಥಿತಿಯಿದೆ. ಇತ್ತೀಚೆಗೆ ಹಾವು ಕಡಿದ ಬಾಲಕ ಮೃತಪಡಲು ಕಾರಣ ಈತನನ್ನು ಆಸ್ಪತ್ರೆಗೆ ತಕ್ಷಣ ತಲುಪಿಸಲು ಸಾಧ್ಯವಾಗದಿರುವುದಾಗಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.
ಸಂಪೂರ್ಣ ಹೊಂಡಗಳಿಂದ ತುಂಬಿದ ಏತಡ್ಕ- ಕಿನ್ನಿಂಗಾರ್ ರಸ್ತೆಯಲ್ಲಿ ಈಗ ನೀರು ತುಂಬಿ ಕೆಸರುಗದ್ದೆ ಯಂತಾಗಿದೆ. ದೊಡ್ಡ ವಾಹನಗಳು ಸಂಚರಿಸುವಾಗ ಸಣ್ಣ ವಾಹನಗಳು ಹೊಂಡಕ್ಕೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಮೀಪದ ಕೋರೆಯಿಂದ ದಿನಂಪ್ರತಿ ಹಲವುಬಾರಿ ಕಾನೂನು ಉಲ್ಲಂಘಿಸಿ ಅಪರಿಮಿತ ಭಾರ ಹೇರಿಕೊಂಡು ಟಿಪ್ಪರ್ ಲಾರಿಗಳು ಸಂಚರಿಸುತ್ತಿರುವುದೇ ರಸ್ತೆಯು ಈ ಸ್ಥಿತಿಗೆ ತಲುಪಲು ಕಾರಣವೆಂದು ಸ್ಥಳೀಯರು ದೂರುತ್ತಾರೆ.
ಈಗ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸು ಸಂಚಾರ ಮೊಟಕುಗೊಳಿಸಿದೆ. ಶೀಘ್ರ ಪರಿಹಾರ ಉಂಟಾಗದಿದ್ದರೆ ಮುಂದೆ ಪಿಡಬ್ಲ್ಯೂಡಿ ಕಚೇರಿ ಸೇರಿದಂತೆ ದಿಗ್ಬಂಧನ ಚಳವಳಿ ನಡೆಸುವ ನಿರ್ಧಾರ ಮುಷ್ಕರ ಸಮಿತಿ ತಳೆದಿದೆ.
ಮುಷ್ಕರದಲ್ಲಿ ಎಣ್ಮಕಜೆ ಪಂಚಾಯತ್ ಸದಸ್ಯೆ ವೈ. ಶಶಿಕಲಾ, ಎ.ಸಿ. ಸ್ವರ್ಣಲತಾ, ಲತಾಕುಮಾರಿ, ಲಾವಣ್ಯಾ, ನಬೀಸಾ ಮೊದಲಾದವರು ಭಾಗವಹಿಸಿದರು.