Advertisement

ವಾಹನಗಳಿಗೆ ಧಕ್ಕೆ ಆಗುತ್ತಿದ್ದರೂ ರಸ್ತೆ ದುರಸ್ತಿಯಾಗ್ತಿಲ್ಲ!

07:44 AM Jan 21, 2019 | Team Udayavani |

ಹರಿಹರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಇನ್‌ ಮತ್ತು ಔಟ್‌ ರಸ್ತೆಗಳು ಸುಮಾರು 3 ಅಡಿ ಕೆಳಗೆ ಇರುವ ಹಳೆ ಪಿಬಿ ರಸ್ತೆಗೆ ಕೂಡುವ ಜಾಗದಲ್ಲಿ ಕಡಿದಾದ ಇಳಿಜಾರಾಗಿರುವ ಪರಿಣಾಮ ಬಸ್‌ಗಳು ಸೇರಿದಂತೆ ನಿತ್ಯ ಸಾವಿರಾರು ವಾಹನಗಳಿಗೆ ಧಕ್ಕೆ ಆಗುತ್ತಿದ್ದರೂ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Advertisement

ನಿಲ್ದಾಣದ ಒಳ ಬರುವ ಮತ್ತು ಹೊರ ಹೋಗುವ ಬಸ್‌ಗಳ ಹಿಂಭಾಗದ ಬಂಪರ್‌ ರಸ್ತೆಯ ಅಂಚಿಗೆ ತಾಗಿ ಬೆಂಡಾಗುವುದು, ಆಟೋ, ಕಾರ್‌ಗಳು ಕಡಿದಾದ ರಸ್ತೆ ಏರಲು, ಇಳಿಯಲು ಹರಸಾಹಸ ಪಡುವುದು, ದ್ವಿಚಕ್ರ ವಾಹನಗಳು ಬೀಳುವ ಘಟನೆಗಳು ನಿತ್ಯ ನಡೆಯುತ್ತಿದ್ದರೂ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಿಲ್ಲ. ಎರಡೂ ರಸ್ತೆಗಳು ಕೂಡುವ ಈ ಜಾಗದಲ್ಲಿ ಡ್ರೈನೇಜ್‌ ನಿರ್ಮಿಸಲೆಂದು ಸುಮಾರು 15 ಅಡಿಯಷ್ಟು ಸಿಮೆಂಟ್‌ ರಸ್ತೆ ಮಾಡದ ಕಾರಣ ವಾಹನಗಳು ಸಂಚರಿಸುವಾಗ ಧೂಳು ಏಳುತ್ತಿದ್ದು, ಸುತ್ತಮತ್ತಲ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ.

ಸಮಸ್ಯೆ ಉಟಾಗಿದ್ದು ಹೇಗೆ: ಬಸ್‌ಸ್ಟ್ಯಾಂಡ್‌ ರಸ್ತೆಗಳನ್ನು ನಿರ್ಮಿಸುವಾಗ ಪಿ.ಬಿ. ರಸ್ತೆಯ ಮಟ್ಟವನ್ನು ಗಮನಿಸಿ ಸ್ವಲ್ಪ ದೂರದಿಂದ ಇಳಿಜಾರು ಮಾಡದೆ ತುದಿವರೆಗೆ ಒಂದೆ ಮಟ್ಟದಲ್ಲಿ ನಿರ್ಮಿಸಲಾಗಿದೆ. ನಂತರದಲ್ಲಿ ಹಳೆ ಪಿಬಿ ರಸ್ತೆ ನಿರ್ಮಿಸುವಾಗ ಮುಂಚೆ ಇದ್ದ ಡಾಂಬರು ಕಿತ್ತು, ಅದೆ ಮಟ್ಟದಲ್ಲಿ ಕಾಂಕ್ರೀಟೀಕರಣ ಮಾಡಿದ ಪರಿಣಾಮ ಎರಡೂ ರಸ್ತೆಗಳ ಎತ್ತರದಲ್ಲಿ ಅಂತರ ಉಂಟಾಗಿದೆ. ಸಾರಿಗೆ ಹಾಗೂ ಪಿಡಬ್ಲ್ಯೂಡಿ ಇಲಾಖೆಗಳ ನಡುವಿನ ಸಮನ್ವಯ ಕೊರತೆ ಸಮಸ್ಯೆಗೆ ಕಾರಣವಾಗಿದೆ.

ಹೆದ್ದಾರಿ ನಿರ್ಮಿಸಿದ ನಂತರ ಇಲ್ಲಿ ಡ್ರೈನೇಜ್‌ ನಿರ್ಮಿಸಿಬೇಕಿದ್ದ ನಗರಸಭೆ ಹತ್ತಾರು ತಿಂಗಳಾದರೂ ಕಾಮಗಾರಿ ನಡೆಸಿಲ್ಲ. ಡ್ರೈನೇಜ್‌ ನಿರ್ಮಿಸಿದ ನಂತರ ಸುಮಾರು 15 ಅಡಿಗಳ ರಸ್ತೆಯನ್ನು ಇಳಿಜಾರು ಮಾಡಿದರೂ ಸಮಸ್ಯೆಯ ತೀವ್ರತೆ ಕಡಿಮೆಯಾಗಲಿದೆ. ಡ್ರೈನೇಜ್‌ ಕಾಮಗಾರಿ ಮಾಡುವಾಗ ಮತ್ತೆ ಸಿಮೆಂಟ್‌ ಕಿತ್ತುತ್ತಾರೆಂಬ ಕಾರಣಕ್ಕೆ ಲೋಕೋಪಯೋಗಿ ಇಲಾಖೆ ಅಲ್ಲಿ ಕಾಮಗಾರಿ ಮಾಡುತ್ತಿಲ್ಲ.

ಇಲ್ಲಿನ ನಿಲ್ದಾಣಕ್ಕೆ ನಿತ್ಯ 1500ಕ್ಕೂ ಅಧಿಕ ಬಸ್‌ಗಳು ಬಂದು ಹೋಗುತ್ತವೆ. ತಮ್ಮ ಬಸ್‌ಗಳಿಗೆ ಧಕ್ಕೆ ಆಗುವುದನ್ನು ತಡೆಯಲು ಸಾರಿಗೆ ಸಂಸ್ಥೆಯವರು ತಾತ್ಕಾಲಿಕವಾಗಿಯಾದರೂ ಡಾಂಬರೀಕರಣ ಮಾಡುವ ಬದಲು ಪಿಡಬ್ಲ್ಯೂಡಿ ಕಡೆಗೆ ಕೈ ಮಾಡಿ ತೋರಿಸುತ್ತಾರೆ. ಪಿಡಬ್ಲ್ಯೂಡಿಯವರು ನಗರಸಭೆಯತ್ತ ಬೆರಳು ತೋರಿಸುತಿದ್ದಾರೆ.

Advertisement

ನಗರಸಭೆಯವರು ಇನ್ನೂ ಅನುದಾನ ಬಂದಿಲ್ಲವೆಂದು ಗೊಣಗಾಡುತ್ತಿದ್ದಾರೆ. ಈ ಮೂರೂ ಇಲಾಖೆಯವರ ನಡುವೆ ಸಾರ್ವಜನಿಕರು ಬಸವಳಿದಿದ್ದಾರೆ. ಇನ್ನು ಜನಪ್ರತಿನಿಧಿಗಳಾದರೂ ಸಮಸ್ಯೆ ಪರಿಹರಿಸಲು ಮುಂದಾಗಲಿ ಎಂಬುದು ಜನರ ಆಗ್ರಹವಾಗಿದೆ. ನಿಗದಿತ ಮಟ್ಟದಲ್ಲಿ, ಅಳತೆಗೆ ತಕ್ಕಂತೆ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಆದರೆ ಡ್ರೈನೇಜ್‌ ಮಾಡಬೇಕಾದ ಜಾಗದಲ್ಲಿ ರಸ್ತೆಯನ್ನು ಮತ್ತೆ ಕೀತ್ತಲಾಗುತ್ತದೆ ಎಂದು ಇನ್‌, ಔಟ್‌ ಜಾಗದಲ್ಲಿ ಅಭಿವೃದ್ಧಿ ಕೈಗೊಂಡಿಲ್ಲ. ಕೆಎಸ್‌ ಆರ್‌ಟಿಸಿಯವರು ಅಳತೆಗೆ ತಕ್ಕಂತೆ ಚರಂಡಿಗೆ ಜಾಗ ಬಿಟ್ಟು ಡಕ್‌ ಸ್ಲ್ಯಾಬ್‌ ನಿರ್ಮಿಸಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ.
∙ಈಶ್ವರಪ್ಪ, ಎಇಇ, ಪಿಡಬ್ಲ್ಯೂಡಿ.

ಹೆದ್ದಾರಿ ಅಭಿವೃದ್ಧಿಪಡಿಸುವಾಗ ರಸ್ತೆ ಮಟ್ಟ ಎತ್ತರಿಸಲಾಗುತ್ತದೆ ಎಂದು ನಿರೀಕ್ಷಿಸಿ ನಾವು ದೂರದಿಂದ ಇಳಿಜಾರು ಮಾಡಿರಲಿಲ್ಲ. ಆದರೆ ಹೆದ್ದಾರಿ ನಿರ್ಮಿಸುವವರು ಹಳೆ ಡಾಂಬರು ಕಿತ್ತು ಮುಂಚಿನ ಮಟ್ಟದಲ್ಲೇ ರಸ್ತೆ ನಿರ್ಮಿಸಿದ್ದು ಸಮಸ್ಯೆಗೆ ಕಾರಣವಾಗಿದೆ.
 .ಡಿಪೋ ಮ್ಯಾನೇಜರ್‌  

Advertisement

Udayavani is now on Telegram. Click here to join our channel and stay updated with the latest news.

Next