ಬಂಗಾರಪೇಟೆ: ಪ್ರತಿ ದಿನ ಸಾವಿರಾರು ವಾಹನಗಳು, ಸಾರ್ವಜನಿಕರು ಹೆಚ್ಚಾಗಿ ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದು ವರ್ಷ ಕಳೆದರೂ ದುರಸ್ತಿ ಭಾಗ್ಯ ಇಲ್ಲ. ಅನುದಾನ ಬಿಡುಗಡೆಯಾಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಪಟ್ಟಣದಿಂದ ಎರಡು ಕಿ.ಮೀ. ದೂರದ ದಿನ್ನಕೊತ್ತೂರು ಗ್ರಾಮದ ಮಧ್ಯೆ ಹಾದುಹೋಗುವ ಕಾಮಸಮುದ್ರ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿ ಬಿದ್ದು ವರ್ಷವೇ ಕಳೆದಿದೆ. ನಿತ್ಯ ಈ ರಸ್ತೆಯಲ್ಲೇ ಓಡಾಡುವ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಗುಂಡಿಗಳನ್ನು ನೋಡಿಯೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.
ಬಂಗಾರಪೇಟೆಯಿಂದ ಕಾಮಸಮುದ್ರ ಹೋಬಳಿಗೆ ಹೋಗಿ ಬರುವ ಈ ಪ್ರಮುಖ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಬಂಗಾರಪೇಟೆ ದೇಶಿಹಳ್ಳಿಯಿಂದ ಕಾಮಸಮುದ್ರದವರೆಗೂ ಲೋಕೋಪಯೋಗಿ ಇಲಾಖೆಯಿಂದ ಉತ್ತಮ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆ ಮಾಡದ ಕಾರಣ ದಿನ್ನಕೊತ್ತೂರು ಗ್ರಾಮದ ಬಳಿ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನಗಳ ಸವಾರರು ಜೀವ ಕೈಯಲ್ಲಿಡಿದು ಓಡಾಡಬೇಕಿದೆ.
ರಾತ್ರಿವೇಳೆ ಯಾವುದಾದ್ರೂ ವಾಹನ ವೇಗವಾಗಿ ಬಂದರೆ ಗುಂಡಿಯಲ್ಲಿ ಬಿದ್ದು ಗಾಯಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ. ದಿನ್ನಕೊತ್ತೂರು ಗ್ರಾಮದ ಬಳಿ ಗುಂಡಿಗಳನ್ನು ತಪ್ಪಿಸಲು ಹೋಗಿ ನಾಯಿ, ಕುರಿ ಸೇರಿ ಇತರೆ ಪ್ರಾಣಿಗಳ ಮೇಲೆ ವಾಹನಗಳು ಹರಿದು ಸಾವನ್ನಪ್ಪುವುದು ಸರ್ವೆ ಸಾಮಾನ್ಯವಾಗಿದೆ. ಇದರ ಜೊತೆಗೆ ಮಕ್ಕಳೂ ಅಪಘಾತಕ್ಕೆ ಒಳಗಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ವರ್ಷದ ಹಿಂದೆ ಕಾಮಸಮುದ್ರ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದರೂ ದಿನ್ನಕೊತ್ತೂರು ಗ್ರಾಮದ ಬಳಿ ಕಿರಿದಾದ ಗುಂಡಿ ಬಿದ್ದಿತ್ತು. ಇದರಿಂದ ಎಚ್ಚೆತ್ತುಕೊಳ್ಳದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ನಿರ್ಲಕ್ಷ್ಯವಹಿಸಿದ್ದರಿಂದ ಪ್ರಸ್ತುತ ದೊಡ್ಡ ಗುಂಡಿಯಾಗಿ ಹಾಗೂ ರಸ್ತೆಯೂ ಕಿತ್ತುಹೋಗಿ ದೊಡ್ಡ ಪ್ರಮಾಣದಲ್ಲಿ ರಸ್ತೆಯು ದುರಸ್ತಿಗೊಂಡಿದೆ.
● ಎಂ.ಸಿ.ಮಂಜುನಾಥ್