Advertisement
ಪಾಣೆಮಂಗಳೂರು ಆಲಡ್ಕ ಪ್ರದೇಶದಲ್ಲಿ ಬಹುತೇಕ ಮನೆಗಳು ಪ್ರವಾಹದ ನೀರಿನಲ್ಲಿ ಜಲಾವೃತವಾದವು. ಪ್ರವಾಹದ ನೀರು ಏರಿಕೆಯಾದ ಪರಿಣಾಮ ಜಕ್ರಿಬೆಟ್ಟು, ಕಂಚಿಗಾರ ಪೇಟೆ, ಆಲಡ್ಕ, ಅಜಿಲಮೊಗರು, ಸರಪಾಡಿ ಕೂಟೇಲು ಮೊದಲಾದ ಪ್ರದೇಶಗಳಲ್ಲಿ ರಸ್ತೆಗೆ ನೀರು ಬಂದು ಸಂಪರ್ಕ ಕಡಿತಗೊಂಡಿತ್ತು.
ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಅಪಾಯ ಸಂಭವಿಸದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಜತೆಗೆ ಪ್ರತಿಯೊಂದೆಡೆಯೂ ಪೊಲೀಸರನ್ನು ನಿಯೋಜಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿತ್ತು. ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿ ಪುರಸಭಾ ವಾಣಿಜ್ಯ ಸಂಕೀರ್ಣ ತಳಭಾಗಕ್ಕೆ ನೀರು ಬಂದು ಕೆಲವು ಅಂಗಡಿ ಮುಗ್ಗಟ್ಟುಗಳಿಗೆ ತೊಂದರೆಯಾಯಿತು. ಮಣಿನಾಲ್ಕೂರು, ಸರಪಾಡಿ, ಬರಿಮಾರು, ಕಡೇಶಿವಾಲಯ, ನಾವೂರು, ನರಿಕೊಂಬು, ತುಂಬೆ ಮೊದಲಾದ ಗ್ರಾಮಗಳಲ್ಲಿ ಕೃಷಿ ತೋಟಗಳಿಗೆ ನೀರು ನುಗ್ಗಿತ್ತು. ಸಂಜೆವರೆಗೂ ನೆರೆ ನೀರು ಕಡಿಮೆಯಾಗದೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಘಟ್ಟ ಪ್ರದೇಶದಿಂದ ಅಧಿಕ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಯಿತು.