Advertisement
ಬರಪೀಡಿತ ಜಿಲ್ಲೆಯ ಪಾಲಿಗೆ ಮಹತ್ವದ್ದಾಗಿರುವ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾದ ನದಿ ಜೋಡಣೆ ಯೋಜನೆಗೆ ಕೇಂದ್ರ ಶ್ರೀಕಾರ ಹಾಡುತ್ತಾ ಎಂಬುದನ್ನು ಚಾತಕ ಪಕ್ಷಿಗಳಂತೆ ಎದುರು ನೋಡುವಂತಾಗಿದೆ.
Related Articles
Advertisement
ಮುಖ್ಯವಾಗಿ ನೆರೆಯ ಆಂಧ್ರಪ್ರದೇಶಕ್ಕೆ ಬಂದಿರುವ ಕೃಷ್ಣ ನದಿ ನೀರನ್ನು ಕೂಗಳತೆಯ ದೂರದಲ್ಲಿರುವ ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಕಾರ್ಯವನ್ನು ಕೇಂದ್ರ ಕೈಗೆತ್ತಿಕೊಂಡರೆ ಈ ಭಾಗದ ರೈತರಿಗೆ ಹೆಚ್ಚಿನ ಲಾಭವಾಗಿ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲಿದೆ.
ನೀರಾವರಿ ಯೋಜನೆಗಳಿಗೆ ಬೇಕಿದೆ ನೆರವು: ಜಿಲ್ಲೆಗೆ ರಾಜ್ಯ ಸರ್ಕಾರ ರೂಪಿಸಿರುವ ಎತ್ತಿನಹೊಳೆ ಯೋಜನೆ, ಹೆಚ್.ಎನ್ ವ್ಯಾಲಿ ಯೋಜನೆಗಳು ಕುಂಟುತ್ತಾ ಸಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ರೂಪಿಸಿರುವ ನೀರಾವರಿ ಯೋಜನೆಗಳಿಗೆ ಹಣಕಾಸಿನ ನೆರವು ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಈ ಭಾಗದ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡ, ಜಿಲ್ಲೆಗೆ ರೂಪಿಸಿರುವ ಎತ್ತಿನಹೊಳೆ ಮತ್ತಿತರ ಯೋಜನೆ ಗಳಿಗೆ ಕೇಂದ್ರದಿಂದ ಹಣಕಾಸು ನೆರವು ಕಲ್ಪಿಸಲಾಗುವುದು ಎಂದು ಹೇಳಿದ್ದರು.
ಬೆಳೆ ಸಂಸ್ಕರಣ ಘಟಕ: ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಜೊತೆಗೆ ರೈತರ ಬೆಳೆಗಳನ್ನು ಸಂಸ್ಕ ರಣೆ ಮಾಡಲು ಅಗತ್ಯ ಸಂಸ್ಕರಣ ಘಟಕ, ವೈನ್ ಪಾರ್ಕ್ ಸ್ಥಾಪನೆ ಹಾಗೂ ಹೂವು, ಹಣ್ಣು, ತರಕಾರಿ, ರೇಷ್ಮೆ, ಹಾಲು ಉತ್ಪಾದಿಸುವ ಜಿಲ್ಲೆಯಲ್ಲಿ ಹೆದ್ದಾರಿ ಪಕ್ಕದಲ್ಲಿದ್ದು, ಅಂತಾ ರಾಷ್ಟ್ರೀಯ ಮಾರುಕಟ್ಟೆ ಸ್ಥಾಪಿಸಿದರೆ ಹೆಚ್ಚು ಅನುಕೂಲ ಎಂಬ ಮಾತು ಅನ್ನದಾತರು ವ್ಯಕ್ತಪಡಿಸುತ್ತಿ ದ್ದಾರೆ.
ಸಾಲ ಮನ್ನಾ ನಿರೀಕ್ಷೆ: ಕಳೆದ ಬಾರಿ ರೈತರ ಸಾಲ ಮನ್ನಾ ಮಾಡಲಿಲ್ಲ ಎಂಬ ಆರೋಪ ಎನ್‌ಡಿಎ ಸರ್ಕಾರದ ಮೇಲಿದೆ. ಆದರೆ ಈ ಬಾರಿಯೂ ಪೂರ್ಣ ಪ್ರಮಾಣ ದಲ್ಲಿ ಹೊಸ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಆಗಬಹುದು ಎನ್ನುವ ನಿರೀಕ್ಷೆ ರೈತರು ಹೊಂದಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೈತರು ಇದ್ದು, ರಾಜ್ಯ ಸರ್ಕಾರದ ಹಲವು ಷರತ್ತುಗಳು ಬಹಳಷ್ಟು ರೈತರಿಗೆ ಸಾಲ ಮನ್ನಾ ಯೋಜನೆ ಲಾಭವಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬಹುದು ಎನ್ನುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.
ವಿಶೇಷವಾಗಿ ಬೆಳೆ ವಿಮಾ ಕಳೆದ ವರ್ಷದ ಹಣ ಕೈ ಸೇರದ ಬಗ್ಗೆ ರೈತರು ಆಕ್ರೋಶಗೊಂಡಿದ್ದು, ಅದರ ಹಣ ಕೂಡ ಈ ಬಜೆಟ್‌ನಲ್ಲಿ ಬಿಡುಗಡೆ ಆಗಬಹುದೆಂದು ನಿರೀಕ್ಷಿಸಿದ್ದಾರೆ. ಉಳಿದಂತೆ ಜಿಲ್ಲೆಯ ವಿಶ್ವ ವಿಖ್ಯಾತ ನಂದಿ ಬೆಟ್ಟದ ಅಭಿವೃದ್ಧಿ, ಸಂಸದರ ಆದರ್ಶ ಗ್ರಾಮಕ್ಕೆ ಹೆಚ್ಚಿನ ಅನುದಾನ, ಗ್ರಾಮೀಣ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ.
● ಕಾಗತಿ ನಾಗರಾಜಪ್ಪ