ಇಂದು ಬಹುತೇಕ ಮಹಾನಗರಗಳಲ್ಲಿ ಹರೆಯದ ಹುಡುಗರು ಗಾಂಜಾ, ಡ್ರಗ್ಸ್, ಮದ್ಯಗಳಿಗೆ ವ್ಯಸನಿಗಳಾಗುವುದು ಕೊನೆಗೆ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಂಡು ಹೆತ್ತವರನ್ನು ದುಃಖದ ಮಡುವಿನಲ್ಲಿ ತಳ್ಳುವುದು. ಈ ಥರದ ಘಟನೆಗಳನ್ನು ಆಗಾಗ್ಗೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿರುತ್ತೀರಿ. ಈಗ ಇದೇ ವಿಷಯವನ್ನು ಇಟ್ಟುಕೊಂಡು, ಇಲ್ಲೊಂದು ಹೊಸಬರ ತಂಡ ಅದನ್ನು ಸಿನಿಮಾವಾಗಿ ತೆರೆಮೇಲೆ ತರಲು ಹೊರಟಿದೆ.
ಅಂದಹಾಗೆ, ಬಹುತೇಕ ಹೊಸಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ ಈ ಚಿತ್ರದ ಹೆಸರು “ವಾರುಣಿ’. ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಇತ್ತೀಚೆಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಮೊದಲಿಗೆ “ವಾರುಣಿ’ಯ ಪೋಸ್ಟರ್ ಮತ್ತು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ, “ಆರಂಭದಲ್ಲೇ ನಮ್ಮ ಸಿನಿಮಾ ಹಾಗಿದೆ-ಹೀಗಿದೆ ಎನ್ನುವುದರ ಬದಲು, ಸಿನಿಮಾ ಮಾಡಿ ಮುಗಿಸಿ, ಆ ನಂತರ ಮಾತನಾಡೋಣ ಅಂಥ ಇಷ್ಟು ದಿನ ಸುಮ್ಮನಿದ್ದೆವು. ಅದೇ ಕಾರಣದಿಂದ, ಇಲ್ಲಿಯವರೆಗೆ ಚಿತ್ರದ ಬಗ್ಗೆ ಎಲ್ಲಿಯೂ, ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇನ್ನೇನು ಕೆಲ ದಿನಗಳಲ್ಲೆ ಚಿತ್ರದ ಫಸ್ಟ್ ಕಾಪಿ ಬರುತ್ತಿದೆ. ಹಾಗಾಗಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡುತ್ತಿದ್ದೇವೆ’ ಎನ್ನುತ್ತ ಮಾತಿಗಿಳಿಯಿತು.
ನವ ನಿರ್ದೇಶಕ ಶ್ರೀನಿವಾಸ್ ಎಂ “ವಾರುಣಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು “ಇಡೀ ಕತೆಯು ನಶೆಯ ಸುತ್ತ ಸಾಗುತ್ತದೆ. ಸಮುದ್ರ ಮಂಥನ ಆಗುವಾಗ ಕುಂಬ-ಕಳಸ ಉತ್ಪತ್ತಿಯಾಗುತ್ತದೆ. ಅದರ ಹೆಸರೇ ನಮ್ಮ ಚಿತ್ರದ ಶೀರ್ಷಿಕೆಯಾಗಿದೆ. “ವಾರುಣಿ’ ಅಂದರೆ ನಶೆ. ಸಿನಿಮಾದಲ್ಲಿ ನಾಯಕನ ಪಾತ್ರವು ಅದರಂತೆ ಇರುವ ಕಾರಣ ಟೈಟಲ್ ಆಯ್ಕೆ ಮಾಡಿಕೊಳ್ಳಲಾಗಿದೆ. “ವಾರುಣಿ’ಗೆ ವಾಣಿ ಅಂತಲೂ ಕರೆಯಬಹುದು. ಪ್ರಸಕ್ತ ಯುವ ಜನಾಂಗ 16,20,25 ವಯಸ್ಸಿನವರು ಗಾಂಜಾ, ಡ್ರಗ್ಸ್‌ಗೆ ಮಾರುಹೋಗಿ ವ್ಯಸನಿಗಳಾಗುತ್ತಿದ್ದಾರೆ. ಮನೆಯಲ್ಲಿ ತಂದೆ-ತಾಯಿ ವ್ಯಥೆ ಪಡುತ್ತಿದ್ದಾರೆ. ಇದರಿಂದ ಮುಕ್ತರಾಗಲು ಏನು ಮಾಡಬೇಕು. ಸದರಿ ವಿಷಯಕ್ಕೆ ಕುರಿತಂತೆ ಮಹತ್ವದ ಸಂದೇಶ ಇರುವುದರಿಂದ ಪ್ರತಿಯೊಂದು ಕುಟುಂಬವು ನೋಡಬೇಕಾಗಿದೆ. ಅಲ್ಲದೆ ಎಚ್ಚರಿಕೆಯಿಂದ ಜಾಗೃತರಾಗಬಹುದೆಂದು ಸನ್ನಿವೇಶಗಳ ಮೂಲಕ ಹೇಳುವ ಪ್ರಯತ್ನ ಮಾಡಿದೆ’ ಎಂದು ವಿವರಣೆ ನೀಡಿದರು.
“ಪ್ರಾರಂಭದಲ್ಲಿ ಮುಗ್ದ ಹುಡುಗ, ಕೆಟ್ಟ ಚಾಳಿಗೆ ದಾಸನಾಗುವುದು, ನಶೆಗೆ ಹೋಗುವುದು ಹಾಗೂ ಪುನರ್ವಸತಿ ಕೇಂದ್ರದಲ್ಲಿ ಬದಲಾವಣೆಗೊಳ್ಳುವ ನಾಲ್ಕು ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ನಾಯಕ ನಟ ರಾಹುಲ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.
“ಸಿಲಿಕಾನ್ ಸಿಟಿಯು ನಶೆಯಲ್ಲಿ ಹೋಗುತ್ತಿದ್ದು, ಹಲವರು ತೊಂದರೆಯಿಂದ ಬಳಲುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡಿ ವಿದ್ಯಾರ್ಥಿಗಳು, ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ನಿರ್ಮಾಣ ಮಾಡಿದ್ದೇವೆ’ ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ಪ್ರಕಾಶ್ ಕುಮಾರ್. ಚಿತ್ರಕ್ಕೆ ಮೋಹನ್. ಎಲ್, ಚಂದ್ರಶೇಖರ್, ಫಣೀಂದರ್ ಕುಮಾರ್ ಛಾಯಾಗ್ರಹಣ ಹಾಗೂ ಚಂದ್ರಶೇಖರ್ ಸಂಕಲನ ಕಾರ್ಯವಿದೆ. ಚಿತ್ರಕ್ಕೆ ನಂದಿನಿ ನಾಜಪ್ಪ ಮತ್ತು ಹರೀಶ್ ಶೃಂಗ ಸಂಭಾಷಣೆಯಿದೆ. ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿರುವ ಸಂತೋಷ್ ರಾಜೇನಹಳ್ಳಿ ಚಿತ್ರದ ನಾಲ್ಕು ಹಾಡುಗಳಿಗೆ ಸಾಹಿತ್ಯವನ್ನು ರಚಿಸಿ, ವಾಕ್ಯಾಲೆಬ್ ಜೊತೆ ಸೇರಿಕೊಂಡು ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಬೆಂಗಳೂರು ಸುತ್ತಮುತ್ತ “ವಾರುಣಿ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಉಗ್ರಂ ಸುರೇಶ್ ಮತ್ತು ಕಿರುತೆರೆಯ ಹಲವು ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರ ಸೆನ್ಸಾರ್ ಮುಂದೆ ಹೋಗಲು ರೆಡಿಯಾಗಿದ್ದು, ಮುಂದಿನ ಮೂರು ತಿಂಗಳಲ್ಲಿ “ವಾರುಣಿ’ ಯನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ ಎಂದಿದೆ ಚಿತ್ರತಂಡ.