ಆಳಂದ: ಕಲುಷಿತ ವಾತಾವರಣ ಧರ್ಮದಿಂದಲೇ ತಿಳಿಯಾಗಲು ಸಾಧ್ಯ. ಹೀಗಾಗಿ ಜನ್ಮ ಸಾರ್ಥಕತೆಗೆ ಕಾಯಕದ ಹಣದಲ್ಲಿ ದಾನ, ಧರ್ಮ, ಪರೋಪಕಾರ ಮನೋಭಾವ ಮೈಗೂಡಿಸಿಕೊಳ್ಳಬೇಕು. ಧರ್ಮ ದಿಂದಲೇ ಬಾಳಿನ ಉನ್ನತಿ ಸಾಧ್ಯ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಭಗವತ್ಪಾದರು ನುಡಿದರು.
ತಾಲೂಕಿನ ವಿ.ಕೆ. ಸಲಗರ ಗ್ರಾಮದ ತಪೋನಿಧಿ ಸಾಂಬ ಶಿವಯೋಗಿಗಳ 78ನೇ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸಾಂಬ ಸೇನೆ ಉದ್ಘಾಟನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಗಾಳಿ, ನೀರಿನಷ್ಟೆ ಧರ್ಮ ಅವಶ್ಯಕವಾಗಿದೆ. ಹೀಗಾಗಿ ಜೀವನದಲ್ಲಿ ಬರೀ ಸ್ವಾರ್ಥಕ್ಕೆ ಬೆನ್ನುಹತ್ತಿದರೆ ಸಾಲದು. ಸಂತರ, ಮಹಾಂತರು, ತಪಸ್ವಿಗಳ ಮಹಿಮೆ, ತತ್ವಾದರ್ಶಗಳನ್ನು ಆಲಿಸಬೇಕು. ಹಾಗೂ ಅವುಗಳನ್ನು ಪಾಲಿಸಬೇಕು. ಅದಕ್ಕಾಗಿ ಇಷ್ಟಲಿಂಗ ಪೂಜೆ ಸೇರಿದಂತೆ ನಾಡಿನ ರೈತರು, ಹಿರಿಯರು, ಯುವಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸಾಂಬ ಸೇನೆ ಆರಂಭಿಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಪೀಠಾಧಿಪತಿ ಶ್ರೀ ಸಾಂಬ ಶಿವಾಚಾರ್ಯರು ಮಾತನಾಡಿ, ಸಾಂಬ ಸೇನೆಯನ್ನು ಗ್ರಾಮ, ತಾಂಡಾಗಳಲ್ಲಿ ತೆರೆದು ಜನಕಲ್ಯಾಣ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಆಲೂರಿನ ಕೆಂಚವೃಷಭೇಂದ್ರ ಶಿವಾಚಾರ್ಯರು, ಜಮಖಂಡಿಯ ಗೌರಿಶಂಕರ ಶಿವಾಚಾರ್ಯರು, ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪಾ, ಕಲಬುರಗಿ ವಿಭಾಗ ರಾಷ್ಟ್ರೋತ್ಥಾನ ಭೌದ್ಧಿಕ ಪ್ರಮುಖ ಕೃಷ್ಣಾ ಜ್ಯೋಶಿ, ಜಾತ್ರಾ ಸ್ವಾಗತ ಸಮಿತಿ ಅಧ್ಯಕ್ಷ ಸುಭಾಷ ಬಿರಾದಾರ, ಹಿತ್ತಲಶಿರೂರಿನ ಶರಣಕುಮಾರ ಶಾಸ್ತ್ರೀ ಮಾತನಾಡಿದರು.
ತಾಪಂ ಸದಸ್ಯ ದೀಪಕ್ ಖೇಡ್ಲ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಮಗಿ ಹಾಗೂ ಮತ್ತಿತರರು ಇದ್ದರು.