Advertisement

ಡಿಟಿಎಚ್‌ ಗ್ರಾಹಕರಿಗೆ ಆಯ್ಕೆಯ ಹಕ್ಕು: ಜನ ಹಿತದ ನಿರ್ಧಾರ

12:30 AM Jan 16, 2019 | |

ಕೇಬಲ್‌ ಮತ್ತು ಡಿಟಿಎಚ್‌ ದರ ನಿಯಂತ್ರಿಸಿ ಅದನ್ನು ಏಕರೂಪಗೊಳಿಸುವ ನಿಯಮ ಫೆ.1ರಿಂದ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಇದುವರೆಗೆ ಇದ್ದ ಗೊಂದಲಗಳನ್ನು ನಿವಾರಿಸಿ ಕ್ರಮ ಕೈಗೊಂಡದ್ದು ಸರಿಯಾಗಿಯೇ ಇದೆ. ಸದ್ಯ ಹಲವು ಚಾನೆಲ್‌ಗ‌ಳು ಅಗತ್ಯವಿದ್ದರೂ, ಇಲ್ಲದೇ ಇದ್ದರೂ ಎಲ್ಲರ ಮನೆಗಳ ಪ್ರವೇಶ ಮಾಡುತ್ತಿದೆ. ಒಬ್ಬ ಮನೆಯ ಯಜಮಾನನಿಗೆ ತನ್ನ ಕುಟುಂಬ ಸದಸ್ಯರು ಅಥವಾ ಗ್ರಾಹಕನಿಗೆ ಯಾವ ಚಾನೆಲ್‌ ಬೇಕು ಬೇಡ ಎಂಬುದರ ಆಯ್ಕೆಯ ಆಯ್ಕೆಯನ್ನು ಮಾಡಿಕೊಳ್ಳುವುದು ಇದರಿಂದ ಸುಲಭವಾಗಲಿದೆ. ಅದಕ್ಕಾಗಿ ಜ.31ರ ಒಳಗೆ ಮನೆಯ ಮುಖ್ಯಸ್ಥ ಅಥವಾ ಗ್ರಾಹಕ ಯಾವ ಚಾನೆಲ್‌ ಬೇಕು ಎಂಬುದನ್ನು ನಿರ್ಧರಿಸಬೇಕು. ಈಗಾಗಲೇ ನಿರ್ಧರಿಸಿದ್ದರೆ ಫೆ.1ರಿಂದ ಜಾರಿಯಾಗಲಿರುವ ನಿಯಮದ ಬಗ್ಗೆ ಗೊಂದಲ ಎದುರಿಸಬೇಕಾದ ಅಗತ್ಯವಿಲ್ಲ. ಹೀಗಾಗಿ, ಕೇಬಲ್‌ ಅಥವಾ ಡಿಟಿಎಚ್‌ ಗ್ರಾಹಕರು ಟ್ರಾಯ್‌ ಜಾರಿಗೆ ತಂದಿರುವ ನಿಯಮಗಳನ್ನು ಅನುಸರಿಸಬೇಕಾಗಿದೆ.

Advertisement

100 ಉಚಿತ ಅಥವಾ ಪೇ ಚಾನೆಲ್‌ಗ‌ಳ ಜತೆಗೆ ಅಗತ್ಯವಿರುವ ಚಾನೆಲ್‌ಗ‌ಳಿಗೆ ಮಾತ್ರ ಮುಂದಿನ ದಿನಗಳಲ್ಲಿ ಶುಲ್ಕ ನೀಡಿದರೆ ಸಾಕು. ಫೆ.1ರ ಬಳಿಕ ಕೇಬಲ್‌ ಅಥವಾ ಡಿಟಿಎಚ್‌ ಬಿಲ್‌ಗ‌ಳಲ್ಲಿ ಗ್ರಾಹಕರು ಆಯ್ಕೆ ಮಾಡಿಕೊಂಡಿರುವ ಚಾನೆಲ್‌ಗ‌ಳ ಪಟ್ಟಿಯ ಪೈಕಿ ಹೆಚ್ಚುವರಿಯಾಗಿ ಖರೀದಿಸಿರುವ ಚಾನೆಲ್‌ ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕದ ವಿವರಗಳು ಇರಲಿವೆ. ಇದರಿಂದಾಗಿ ಒಟ್ಟಾರೆ ವ್ಯವಸ್ಥೆ ಪಾರದರ್ಶಕ ವಾಗಿರಲಿದೆ. ವಿವಿಧ ಕಂಪನಿಗಳು ಡೈರೆಕ್ಟ್ ಟು ಹೋಂ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಮೊತ್ತವನ್ನು ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಯ್ದೆ ಜಾರಿಯಾಗಿದ್ದರೂ, ದರ ನಿಯಂತ್ರಣದ ನಿಟ್ಟಿನಲ್ಲಿ ಇಷ್ಟೊಂದು ಕ್ರಮಬದ್ಧವಾಗಿರುವ ನಿಯಮ ಅನುಷ್ಠಾನಗೊಂಡಿರಲಿಲ್ಲ. 

ಹೊಸ ಪಾವತಿ ವ್ಯವಸ್ಥೆಯಲ್ಲಿ ಚಾನೆಲ್‌ಗ‌ಳ ಗುತ್ಛ (ಸೌತ್‌ ಪ್ಯಾಕ್‌, ಕನ್ನಡ ಅಥವಾ ಇನ್ನು ಯಾವುದೇ ಭಾಷೆ ಮುಖ್ಯವಾಗಿ ಒಳಗೊಂಡ ಚಾನೆಲ್‌ಗ‌ಳ ಗುಂಪು) ವ್ಯವಸ್ಥೆ ಇರುವುದಿಲ್ಲ. ಯಾವ ವಾಹಿನಿಯನ್ನು ನೋಡಬೇಕು ಅದನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. 

ಇದರಿಂದಾಗಿ  ಪ್ರತಿ ತಿಂಗಳು ಕೇಬಲ್‌ ಅಥವಾ ಡಿಟಿಎಚ್‌ ಬಿಲ್‌ ಮೊತ್ತ 153 ರೂ.ಗೆ ಮಿತಿಗೊಳ್ಳಲಿದೆ. ಅದೂ ಜಿಎಸ್‌ಟಿ ಸೇರಿಕೊಂಡು ಎಂದರೆ ಶ್ಲಾಘನೀಯ ವಿಚಾರ. ಏಕೆಂದರೆ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದವರಿಗೆ ಕೊಂಚವಾದರೂ ಲಾಭ ಎನ್ನುವುದು ಬೇಕಲ್ಲವೇ? ಹೊಸ ವ್ಯವಸ್ಥೆಯಲ್ಲಿ ಉಚಿತ ಚಾನೆಲ್‌ಗ‌ಳು ಅಂದರೆ ದೂರದರ್ಶನ ಒದಗಿಸುವ ಚಾನೆಲ್‌ಗ‌ಳು ಮತ್ತು ಇತರ ಖಾಸಗಿ ಸಂಸ್ಥೆಗಳು  ನೀಡುವ ಎಸ್‌ಡಿ ಮತ್ತು ಎಚ್‌ಡಿ ಚಾನೆಲ್‌ಗ‌ಳು ಬರುತ್ತವೆ. 

ಹೊಸ ನಿಯಮಗಳ ಪ್ರಕಾರ, ಡಿಟಿಎಚ್‌ ಸಂಪರ್ಕ ಹೊಂದಿರುವ ಗ್ರಾಹಕರು ಸೆಟ್‌ ಟಾಪ್‌ ಬಾಕ್ಸ್‌ ಅನ್ನು ಖರೀದಿಯೇ ಮಾಡಬೇಕು ಎಂದೇನಿಲ್ಲ. ಅದನ್ನು ತಮ್ಮ ಡಿಟಿಎಟ್‌ ಸೇವಾದಾರರ ಮೂಲಕ ಅಥವಾ ಕೇಬಲ್‌ನವರ ಮೂಲಕ ಬಾಡಿಗೆಗೂ ಪಡೆಯಬಹುದು. ಟ್ರಾಯ್‌ನ ಹೊಸ ಸೇವೆಯ ಬಗ್ಗೆ ಕೆಲ ಸ್ಥಳಗಳಲ್ಲಿ ಗೊಂದಲ ಕೂಡ ಉಂಟಾಗಿದೆ. ಈ ಅದಕ್ಕೆ ಟ್ರಾಯ್‌ ಕೂಡ ಸ್ಪಷ್ಟನೆ ನೀಡಿದ್ದು, ಹೊಸ ಮಾದರಿಯ ದರ ವ್ಯವಸ್ಥೆ ಜಾರಿಯ ಬಗ್ಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಆದೇಶದ ಪ್ರತಿ ನಿಜವಾದದ್ದೇ ಎಂದೂ ಹೇಳಿದೆ. 

Advertisement

40 ಟಿವಿ ಪ್ರಸಾರಕರ ಪೈಕಿ 17 ಸಂಸ್ಥೆಗಳು ಈಗಾಗಲೇ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರಿಗೆ ಎಸ್‌ಎಂಎಸ್‌ ಮತ್ತು ಇತರ ಮಾಧ್ಯಮಗಳ ಮೂಲಕ ಸಂದೇಶ ಕಳುಹಿಸಲಾರಂಭಿಸಿವೆ. ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವೇ ನೀಡಿದ ಮಾಹಿತಿ ಪ್ರಕಾರ 100ಕ್ಕಿಂತ ಹೆಚ್ಚು ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯೇ. ಒಟ್ಟಾರೆ ಮಾರುಕಟ್ಟೆ ವ್ಯವಸ್ಥೆಯ ಶೇ.10-15 ಇರಬಹುದು. ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ ಇಂಡಿಯಾ (ಬಿಎಆರ್‌ಸಿ) ಪ್ರಕಾರ ಕೂಡ ದೇಶದ ಜನರು 40ಕ್ಕಿಂತ ಹೆಚ್ಚು ಚಾನೆಲ್‌ಗ‌ಳನ್ನು ಬದಲಿಸುವುದೂ ಇಲ್ಲ. ಹೀಗಾಗಿ, ಸದ್ಯ ಜಾರಿಗೆ ಬಂದಿರುವ ಆದೇಶ ಸ್ತುತ್ಯರ್ಹವಾಗಿಯೇ ಇದೆ. ಉದ್ಯಮದಲ್ಲಿ ಬಂಡವಾಳ ಹೂಡಿ ಲಾಭ ಮಾಡುವುದು ಸಮರ್ಥನೀಯವಾದರೂ, ಅದು ನ್ಯಾಯಯುತ ಭಾಗವಾಗಿರಬೇಕು ಎನ್ನುವುದಷ್ಟೇ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next