Advertisement
ಪ್ರಧಾನಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್ ವಿರುದ್ಧದ ಹೋರಾಟದಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದ್ದಾರೆ. ದಶಕಗಳಿಂದ ಪ್ಲಾಸ್ಟಿಕ್ ಕೃಷಿ ಭೂಮಿ, ಆಹಾರ ಪದಾರ್ಥಗಳು, ನದಿಗಳು, ಕೆರೆಗಳು, ಪ್ರವಾಸಿ ತಾಣಗಳು, ಯಾತ್ರಾಸ್ಥಳ ಮತ್ತು ಸಾಗರಗಳನ್ನು ಹಾನಿಗೊಳಿಸುವುದರ ಮೂಲಕ ಅಪಾರ ಆರ್ಥಿಕ ನಷ್ಟವನ್ನುಂಟುಮಾಡುತ್ತಿದೆ.
ಬ್ರಿಟಿಷ್ ಮತ್ತು ಅಮೆರಿಕ ಸಂಶೋಧಕರು ಪ್ಲಾಸ್ಟಿಕ್‌ನಲ್ಲಿ ಬಿಸೆ#ನಾಲ್(ಬಿಪಿಎ) ಎಂಬ ರಾಸಾಯನಿಕವನ್ನು ಬಳಸುವುದರಿಂದ ಅದನ್ನು ಬಳಸುವವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ. ಸಕ್ಕರೆ ಕಾಯಿಲೆ ಮತ್ತು ಲಿವರ್ ಕಾಯಿಲೆಯೂ ಬರುವ ಸಾಧ್ಯತೆಗಳಿವೆ. ಪ್ಲಾಸ್ಟಿಕ್‌ನ್ನು ಸುಟ್ಟಾಗ ಅದರಿಂದ ಸುಮಾರು 55-60 ವಿವಿಧ ರಾಸಾಯನಿಕಗಳು ಬಿಡುಗಡೆಗೊಳ್ಳುತ್ತವೆ. ಪ್ಲಾಸ್ಟಿಕ್ ಕಂಟೈನರಿನಲ್ಲಿ ಬಿಸಿ ಮಾಡಿದಾಗ ಅಥವಾ ಪ್ಲಾಸ್ಟಿಕ್ ತಟ್ಟೆಯಲ್ಲಿ ಬಿಸಿ ಪದಾರ್ಥಗಳನ್ನು ಬಡಿಸುವಾಗ ವಿವಿಧ ರಾಸಾಯನಿಕಗಳು ನಮ್ಮ ಆಹಾರದಲ್ಲಿ ಸೇರುತ್ತವೆ. ಪರಿಣಾಮ ಸೇವಿಸುವವರಲ್ಲಿ ಹಾರ್ಮೋನುಗಳ ಅಸಮತೋಲನವುಂಟಾಗಿ ಅನೇಕ ಕಾಯಿಲೆಗಳಿಗೆ ನಾಂದಿಯಾಗುತ್ತದೆ. ಭ್ರೂಣ ಸಮಸ್ಯೆ, ಸ್ತನ ಕ್ಯಾನ್ಸರ್, ಕೊಲೊನ್ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರ್ ಇತ್ಯಾದಿ.
Related Articles
Advertisement
ಭಾರತವು ಬಯೊಡಿಗ್ರೇಡೆಬಲ್ ಕೈಕಸುಬು ಪದಾರ್ಥಗಳ ಭಂಡಾರವೆ ಆಗಿದೆ. ಬಯೊಡಿಗ್ರೇಡೆಬಲ್ ವಸ್ತುಗಳು ನಮ್ಮ ಮನೆಯ ಪ್ಲಾಸ್ಟಿಕ್ ಪರಿಕರಗಳಿಗೆ ಸೂಕ್ತ ಬದಲಿಯಾಗಬಹುದು. ಗುಜರಾತಿನ ಆವೆಮಣ್ಣಿನ ಮಡಕೆ ಹೈದರಾಬಾದಿನಲ್ಲಿ ಬಹಳ ಜನಪ್ರಿಯವಾಗಿವೆ. ಮಣ್ಣಿನ ಮಡಕೆಯಲ್ಲಿ ಬೆಂದ ಪದಾರ್ಥ ರುಚಿಯಾಗಿರುತ್ತದೆ. ಜನರು ಮಣ್ಣಿನ ಮತ್ತು ಮರದ ಪಾತ್ರೆಯನ್ನ ಬಳಸಿದರೆ ಲಕ್ಷಗಟ್ಟಲೆ ಕಸುಬುಗಾರರು, ಕುಂಬಾರರಿಗೆ ಉದ್ಯೋಗವನ್ನು ಒದಗಿಸಬಹುದು.
ಅಸ್ಸಾಮಿನ ಉದ್ಯಮಿಯೋರ್ವರು ಬಿದಿರಿನ ಬಾಟಲಿಗಳನ್ನು ಯಶಸ್ವಿಯಾಗಿ ಮಾರುತ್ತಿದ್ದಾರೆ. ಅದಕ್ಕೆ ಉತ್ತಮ ಸ್ಥಳೀಯ ಬೇಡಿಕೆ ಮತ್ತು ರಫ್ತು ಬೇಡಿಕೆಯೂ ಇದೆ. ತೆಂಗಿನ ನಾರು, ಗೋಣಿ ನಾರಿನ ಬಟ್ಟೆ ಮತ್ತು ಕಾಗದದ ಚೀಲಗಳು ಪ್ಲಾಸ್ಟಿಕ್ ಚೀಲಕ್ಕೆ ಉತ್ತಮ ಬದಲಿಯಾಗಬಹುದು. ತೆಂಗಿನ ನಾರು ಮತ್ತು ಗೋಣಿ ನಾರು ಉತ್ಪನ್ನಗಳ ಬಳಕೆಯು ದೇಶದಲ್ಲಿ ತೆಂಗಿನ ನಾರು ಮತ್ತು ಗೋಣಿ ನಾರಿನ ತೋಟಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಕೇರಳದಲ್ಲಿ ಸಾವಿರಾರು ತೆಂಗಿನ ಮರ ಕೃಷಿಯು ಸಮರ್ಥ ನಿರ್ವಹಣೆಯಿಲ್ಲದೆ ಮತ್ತು ಮಾರಾಟ ವ್ಯವಸ್ಥೆಯಿಲ್ಲದೆ ಸೊರಗುತ್ತಿದೆ. ಒರಿಸ್ಸಾದಲ್ಲಿ ಬೇಡಿಕೆ ಕುಸಿದಿದ್ದರಿಂದ ರೈತರು ಸೆಣಬು ಕೃಷಿಯನ್ನು ತೊರೆದಿದ್ದಾರೆ. ಅಂಗಡಿಗಳು, ಮಾಲ್‌ಗಳು, ಹೊಟೇಲುಗಳಲ್ಲಿ ಪ್ಲಾಸ್ಟಿಕ್ ಚೀಲದ ಬದಲಿಗೆ ಬಯೊಡಿಗ್ರೇಡೆಬಲ್ ತೆಂಗು ಮತ್ತು ಗೋಣಿ ನಾರಿನ ಚೀಲಗಳನ್ನು ಮಾರಬಹುದು.
ಅಸ್ಸಾಂ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಟನ್ ಕಚ್ಚಾ ಬಿದಿರನ್ನು ಆಸ್ಟ್ರೇಲಿಯಾಕ್ಕೆ ಸರಬರಾಜು ಮಾಡುತ್ತದೆ. ಆಸ್ಟ್ರೇಲಿಯಾದಲ್ಲಿ ಬಿದಿರಿನಿಂದ ಅನೇಕ ಬಳಕೆಯೋಗ್ಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಭಾರತವು ತನ್ನ ಬಯೊಡಿಗ್ರೇಡೆಬಲ್ ಕೈಕಸುಬಿನ ಉತ್ಪನ್ನಗಳೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕದ ತಟ್ಟಬಹುದು. ಕೈಕುಶಲ ಮತ್ತು ಅಲಂಕಾರಿಕ ಉತ್ಪನ್ನಗಳ ಉಪಯೋಗ ಮತ್ತು ಜಾಗೃತಿಯಿಂದಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿ, ಅಪಾರ ಪ್ರಮಾಣದ ವಿದೇಶಿ ಹಣ ದೇಶಕ್ಕೆ ಹರಿದು ಬರುತ್ತದೆ. ಉದ್ಯೋಗ ಸೃಷ್ಟಿಯಿಂದಾಗಿ ಜನರಲ್ಲಿ ಆತ್ಮಗೌರವ ಹೆಚ್ಚಿ ಸರಕಾರಿ ಸಬ್ಸಿಡಿಯಿಲ್ಲದೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಆತ್ಮವಿಶ್ವಾಸ ಬೆಳೆಯುತ್ತದೆ. ಸರಕಾರವು ಸಿನಿಮಾ ನಟರು, ಕ್ರೀಡಾಪಟುಗಳ ಮೂಲಕ ಕೈಕಸುಬು ಮತ್ತು ಕೈಮಗ್ಗದ ಉತ್ಪನ್ನಗಳ ಜನಪ್ರಿಯತೆಯನ್ನು ಹೆಚ್ಚಿಸಬಹುದು. ಪ್ರಧಾನಿಯವರ ಸ್ಕಿಲ್ ಇಂಡಿಯಾ ಯೋಜನೆಯಡಿ ಇಂತಹ ಹ್ಯಾಂಡಿಕ್ರಾಫ್ಟ್ ಮತ್ತು ಹ್ಯಾಂಡ್‌ಲೂಮ್ ಉದ್ಯಮವನ್ನು ಬೆಳೆಸಬಹುದು.
– ಜಲಂಚಾರು ರಘುಪತಿ ತಂತ್ರಿ