ರಾಯಚೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ರಾಯಚೂರು ಜಿಲ್ಲೆ ಕಳೆದ ಬಾರಿ ಪಡೆದಿದ್ದ 26ನೇ ಸ್ಥಾನಕ್ಕೆ ಅಂಟಿಕೊಂಡಿದೆ. ಆದರೆ, ಫಲಿತಾಂಶದಲ್ಲಿ ತುಸು ಚೇತರಿಕೆ ಕಂಡಿರುವುದು ಸಮಾಧಾನ ತಂದಿದೆ. ಜಿಲ್ಲೆ ಕಳೆದ ಬಾರಿ ಶೇ.49.56 ಫಲಿತಾಂಶ ಪಡೆದಿತ್ತು. ಆದರೆ, ಈ ಬಾರಿ ಶೇ.56.22 ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.9ರಷ್ಟು ಹೆಚ್ಚಳ ಕಂಡಿದೆಯಾದರೂ, ರಾಜ್ಯದ ಇತರೆ ಜಿಲ್ಲೆಗಳಿಗೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ. ಕಳೆದ ಬಾರಿ ಒಟ್ಟು 13,182 ವಿದ್ಯಾರ್ಥಿಗಳ ಪೈಕಿ 6,188 ವಿದ್ಯಾರ್ಥಿಗಳು ಪಾಸಾಗಿದ್ದರು. ಪ್ರಥಮ ಬಾರಿಗೆ ಪರೀಕ್ಷೆ ಬರೆದವರ ಫಲಿತಾಂಶ ಕೇವಲ ಶೇ. 39.29 ಆಗಿತ್ತು. ಆದರೆ, ಈ ಬಾರಿ ಎಷ್ಟು ಜನ ಉತ್ತೀರ್ಣರಾಗಿದ್ದಾರೆ ಎಂದು ಮಂಗಳವಾರ ತಿಳಿದು ಬರಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೀಮಾ ಸಾಧನೆ: ನಗರದ ವಿದ್ಯಾನಿಧಿ ಕಾಲೇಜಿನ ಸೀಮಾ ವಿಜ್ಞಾನ ವಿಭಾಗದಲ್ಲಿ 584 (ಶೇ.97.3) ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕೃಷಿ ಕ್ಷೇತ್ರ ಪರಿಪಾಲಕ ದುಂಡಪ್ಪ ಹುಲಗಬಳೆ ಅವರ ಮಗಳಾಗಿರುವ ಸೀಮಾ ನಿತ್ಯ ಸಾಕಷ್ಟು ಓದುತ್ತಿದ್ದರು. ತಮ್ಮ ಸಾಧನೆ ಬಗ್ಗೆ ಅವರೇ ಹೇಳಿದಂತೆ, ನಾನು ವೇಳಾಪಟ್ಟಿ ರೂಪಿಸಿ ಓದುತ್ತಿರಲಿಲ್ಲ. ತರಗತಿಯಲ್ಲಿ ಹೆಚ್ಚು ಗಮನವಿಟ್ಟು ಆಲಿಸಿ ಅದನ್ನೇ ಮನೆಯಲ್ಲಿ ಮನನ ಮಾಡುತ್ತಿದ್ದೆ. ಶಿಕ್ಷಕರು, ಸ್ನೇಹಿತರ ಸಹಕಾರದಿಂದ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಅವರು.
ಶ್ರೇಯಾ ಲೋಯಾ: ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಶ್ರೇಯಾ ಲೋಯಾ ಅವರು 576 (ಶೇ. 97) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಕಾಲೇಜಿನಲ್ಲಿ ಎಂಟು ಗಂಟೆ ಕೇಳುತ್ತಿದ್ದ ಪಾಠ ಪ್ರವಚನ ಹಾಗೂ ಮನೆಯಲ್ಲಿ ನಾಲ್ಕು ತಾಸು ಓದಿರುವುದು ಗರಿಷ್ಠ ಅಂಕ ಪಡೆಯುವುದಕ್ಕೆ ಸಾಧ್ಯವಾಯಿತು ಎನ್ನುವುದು ಶ್ರೇಯಾ ಮಾತು.
“ಅಂಕ ಪಡೆಯುವುದಕ್ಕಾಗಿ ಕಠಿಣ ಅಧ್ಯಯನ ಮಾಡಿಲ್ಲ; ಸಹಜವಾಗಿ ಓದಿಕೊಂಡು ಬಂದಿದ್ದು ಉತ್ತಮ ಫಲಿತಾಂಶಕ್ಕೆ ದಾರಿ ಆಗಿದೆ. ಓದಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಮುಂದಿನ ಪಾಠ ಓದುತ್ತಿರಲಿಲ್ಲ. ಅವಳ ಈ ಸಾಧನೆಗೆ ಕಾಲೇಜಿನ ಗುಣಮಟ್ಟದ ಪಾಠ ಕೂಡ ಕಾರಣ’ ಎಂದು ಶ್ರೇಯಾ ಅವರ ತಂದೆ ಲಕ್ಷ್ಮೀಕಾಂತ ಲೋಯಾ ತಿಳಿಸಿದರು. ಮಗಳ ಆಸಕ್ತಿಯಂತೆ ವೈದ್ಯಕೀಯ ಓದಿಸುತ್ತೇವೆ ಎನ್ನುತ್ತಾರೆ ತಂದೆ.
ಶ್ರೀನಿತ್ಯಾ ಸಾಧನೆ: ಇನ್ನು ಪ್ರಮಾಣ ಕಾಲೇಜಿನ ಎನ್.ಆರ್. ಶ್ರೀನಿತ್ಯಾ ವಿಜ್ಞಾನ ವಿಭಾಗದಲ್ಲಿ 576 (ಶೇ.96) ಅಂಕ ಪಡೆದಿದ್ದಾರೆ. ಎಸ್‌ಆರ್‌ಪಿಎಸ್ ಕಾಲೇಜಿನ ಶ್ರೇಯಾ ಕೂಡ ಶೇ.97 ಅಂಕ ಪಡೆದಿದ್ದಾರೆ. ಸಿಂಧನೂರಿನ ದುದ್ದುಪುಡಿ ಕಾಲೇಜಿನ ವಾಣಿಜ್ಯ ವಿಭಾಗದ ಅಖೀಲಾ 592 (ಶೇ.98.6) ಅಂಕ ಪಡೆಯುವ ಮೂಲಕ ಗಣನೀಯ ಸಾಧನೆ ಮಾಡಿದ್ದಾರೆ.