Advertisement

ಕನಸಾಗೇ ಉಳಿದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ

10:59 AM Aug 19, 2018 | |

ಬೀದರ: ಶರಣರ ಕರ್ಮ ಭೂಮಿ ಬಸವಕಲ್ಯಾಣವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಒಂದೂವರೆ ದಶಕದಿಂದ ಆರಂಭಗೊಂಡ ವಿವಿಧ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯಗಳು ಇಂದಿಗೂ ಅಪೂರ್ಣವಾಗಿವೆ.

Advertisement

ದಶಕದ ಹಿಂದೆ ಸ್ಥಾಪನೆಯಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ(ಬಿಕೆಡಿಬಿ) ಅಡಿಯಲ್ಲಿ ಶರಣರಿಗೆ ಸಂಬಂಧಿ ಸಿದ ಒಟ್ಟು 29 ಸ್ಮಾರಕಗಳನ್ನು ಸರ್ಕಾರ ಗುರುತಿಸಿ, ಅವುಗಳ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿತ್ತು. ಸದ್ಯ 14 ಸ್ಮಾರಕಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಉಳಿದ ಸ್ಮಾರಕಗಳ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿವೆ.

ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳು ಬಸವಣ್ಣನ ತತ್ವಾದರ್ಶಗಳ ಮೇಲೆ ನಂಬಿಕೆ ಇಟ್ಟುಕೊಂಡು ಆಡಳಿತ ನಡೆಸುತ್ತಿರುವುದಾಗಿ ಪದೇ ಪದೇ ಹೇಳುತ್ತಾರೆ. ಬರೀ ಹೇಳಿಕೆಗಳಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ ಎಂಬುದನ್ನು ಜನಪ್ರತಿನಿಧಿಗಳು ಬಹುಶಃ ಮರೆತಂತಿದೆ. ಕಲ್ಯಾಣ ಕ್ರಾಂತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ನಾಯಕರು ಕಲ್ಯಾಣ ಅಭಿವೃದ್ಧಿಗೆ ಮಾತ್ರ ಮುಂದಾಗುತ್ತಿಲ್ಲ.

ಶರಣರ ಆದರ್ಶಗಳ ಬಗ್ಗೆ ಗುಣಗಾನ ಮಾಡಲಾಗುತ್ತದೆ. ವಿಶ್ವ ಪ್ರಸಿದ್ಧ ತಾಣವಾಗಿಸುವ ಪರಿಕಲ್ಪನೆಯನ್ನೂ ಹೇಳಲಾಗುತ್ತದೆ. ಆದರೆ, 2005-06 ರಿಂದ 2017-18ನೇ ಸಾಲಿನ ವರೆಗೆ ಸುಮಾರು 76.78 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಈ ಪೈಕಿ 71.98 ಕೋಟಿ ಖರ್ಚು ಮಾಡಲಾಗಿದೆ. ಸದ್ಯ 4.79 ಕೋಟಿ ಅನುದಾನದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ನಿರ್ವಹಿಸಲಾಗುತ್ತಿದ್ದು, ಇನ್ನುಳಿದ ಸ್ಮಾರಕಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಎದುರಾಗಿದ್ದು, ಸರ್ಕಾರ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಬಸವ ಭಕ್ತರದಾಗಿದೆ. 

ಸದ್ಯ ಅಸ್ತಿತ್ವದಲ್ಲಿರುವ ಸ್ಮಾರಕಗಳು, ಬಸವೇಶ್ವರ ದೇವಸ್ಥಾನ, ಅನುಭವ ಮಂಟಪ, 108 ಅಡಿ ಎತ್ತರದ ಬಸವೇಶ್ವರ ಪ್ರತಿಮೆ ಸೇರಿದಂತೆ ನೂರಾರು ಪ್ರೇಕ್ಷಣೀಯ ಸ್ಥಳಗಳಿವೆ. ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಸ್ಥಳಗಳನ್ನು ತೋರಿಸಲು ಗೈಡ್‌
ಗಳೂ ಇಲ್ಲ, ವಾಹನದ ಸೌಕರ್ಯ ಕೂಡ ಇಲ್ಲ. ಪ್ರವಾಸಿಗರು ಆಟೋಗಳಿಗೆ ನೂರಾರು ರೂಪಾಯಿ ಕೊಡದೇ ಅನ್ಯ ಮಾರ್ಗವೂ ಇಲ್ಲದಂತಾಗಿದೆ.

Advertisement

ಪ್ರಥಮ ಹಂತದಲ್ಲಿ ಬಿಕೆಡಿಬಿಯಿಂದ ಕೈಗೆತ್ತಿಕೊಳ್ಳಲಾದ 29 ಶರಣ ಸ್ಮಾರಕಗಳ ಪೈಕಿ ಇದುವರೆಗೆ ಪೂರ್ಣಗೊಂಡಿದ್ದು 14 ಸ್ಮಾರಕಗಳು ಮಾತ್ರ. ಅಂಬಿಗರ ಚೌಡಯ್ಯ, ನೂಲಿ ಚಂದಯ್ನಾ, ಅಕ್ಕ ನಾಗಮ್ಮ, ಹರಳಯ್ಯ, ಅಲ್ಲಮಪ್ರಭು ದೇವರ ಗದ್ದುಗೆ ಮಠ, ಮಡಿವಾಳ ಮಾಚಿದೇವರ ಸ್ಮಾರಕ
ಮತ್ತು ಹೊಂಡ, ಕಂಬಳಿ ನಾಗಿದೇವರ ಮಠ, ಜೇಡರ ದಾಸಿಮಯ್ಯ, ಉರಿಲಿಂಗ ಪೆದ್ದಿ ಮಠ ಸೇರಿದಂತೆ ಸ್ಮಾರಕಗಳ ಜತೆಗೆ ಸಸ್ತಾಪುರ ಬಂಗ್ಲಾ ಬಳಿ 108 ಅಡಿ ಎತ್ತರದ ಮಹಾದ್ವಾರ, ಬಂಗ್ಲಾದಿಂದ ಬಸವಕಲ್ಯಾಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಚತುಷ್ಪಥ ಮಾಡುವುದು, ಬಸವೇಶ್ವರ ದೇವಸ್ಥಾನ ಬಳಿ ದಾಸೋಹ ಭವನ, ಕೋಟೆ ಬಳಿ ಪ್ರಾಚ್ಯ ವಸ್ತು ಸಂಗ್ರಹಾಲಯ, ಶರಣ ಸಾಹಿತ್ಯ ಗ್ರಂಥಾಲಯ, ಶಾಲಾ ಕಟ್ಟಡ ಮತ್ತು ರಥ ಮೈದಾನದಲ್ಲಿ ಸುಮಾರು 6000 ಆಸನಗಳ ಕ್ಷಮತೆಯುಳ್ಳ ಸಭಾಭವನ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ.

ಇನ್ನೂ ಅನೇಕ ಶರಣರ ತಾಣಗಳಾದ ಪರುಷ ಕಟ್ಟೆ, ಬಸವಕಲ್ಯಾಣ ಕೋಟೆ, ವಿಜ್ಞಾನೇಶ್ವರ ಗವಿ, ಪಂಚ ಸೂತ್ರ ಗವಿ, ಅನುಭವ ಮಂಟಪ, ಶಿವಪುರ ಶಿವಾಲಯ, ನಾರಾಯಣಪುರ ಶಿವಾಲಯ, ಕಿನ್ನರಿ ಬೊಮ್ಮಯ್ಯ ಗುಡಿ, ಮೊಳಿಗೆ ಮಾರಯ್ನಾ ಗುಡಿ, ಸದಾನಂದ ಮಠ, ಬಸವೇಶ್ವರ ಮಹಾಮನೆ ಇದ್ದ ಸ್ಥಳ ಅರಿವಿನ ಮನೆ, ಯಳೆಹೊಟ್ಟಿ ಶಿಕ್ಷೆ ಅನುಭವಿಸಿದ ಶರಣರ ಸ್ಥಳಗಳ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿವೆ. ಒಂದೂವರೆ ವರ್ಷಗಳ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಬಸವಕಲ್ಯಾಣ ಅಭಿವೃದ್ಧಿಗೆ ಬುನಾದಿ ಹಾಕಿದ್ದು, ಇದೀಗ ಮತ್ತೆ ರಾಜ್ಯದಲ್ಲಿ ಅದೇ ಮೈತ್ರಿ ಸರ್ಕಾರ ಅಧಿ ಕಾರದಲ್ಲಿದೆ. ಬಸವಕಲ್ಯಾಣದ ಅಭಿವೃದ್ಧಿಗೆ ಪೂರಕ ಅನುದಾನ ನೀಡುತ್ತಾರೆಯೇ ಎಂಬ ಪ್ರಶ್ನೆ ಜನ ಸಮಾನ್ಯರದಾಗಿದೆ.

ಅನುಭವ ಮಂಟಪ: ಅನುಭವ ಮಂಟಪ ಪುನರ್‌ ನಿರ್ಮಾಣಕ್ಕಾಗಿ ಗೋ. ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ರಚಿಸಿದ ತಜ್ಞರ ಸಮಿತಿಯ ವರದಿ ಒಪ್ಪಿಕೊಂಡು 600 ಕೋಟಿ ರೂ.ಗಳ ಕ್ರಿಯಾಯೋಜನೆ  ಕೂಡ ತಯಾರಿಸಲಾಗಿತ್ತು. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ನೂರು ಕೋಟಿ ಅನುದಾನ ನೀಡುವ ಭರವಸೆ ಕೂಡ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನನೆಗುದಿಗೆ ಬಿದ್ದ ಸ್ಮಾರಕಗಳ ಕಾರ್ಯಗಳು ಕೂಡ ಹೆಚ್ಚು ಕಡಿಮೆ ಸ್ಥಗಿತಗೊಂಡಿವೆ. ಇರುವ ಅಲ್ಪ ಅನುದಾನದಲ್ಲಿ ಸಣ್ಣ ಪುಟ್ಟ ಕಾರ್ಯಗಳು ನಡೆಯುತ್ತಿರುವುದನ್ನು ನೋಡಿದರೆ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸುವುದು ಹಗಲುಗನಸು ಎಂಬಂತಾಗಿದೆ.  

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next