ಬಾಳಪ್ಪ ವೀರಮರಣ ಅಪ್ಪಿದ ದಿನ ಡಿ.4. ಇಂದು ಅಮಟೂರಿನ ಪುಟ್ಟ ಶಾಲೆಯ ಬಾಗಿಲಲ್ಲಿ ಸಣ್ಣ ಮೂರ್ತಿಯಾಗಿ ನಿಂತಿರುವ ಆತನನ್ನು ಈ ನಾಡು ಮರೆತಿದೆ…
ರಾಜಮೌಳಿ ನಿರ್ದೇಶನದ “ಬಾಹುಬಲಿ’ ಚಿತ್ರದಲ್ಲಿ ವೀರಸೇನಾನಿ ಕಟ್ಟಪ್ಪನ ನಿಷ್ಠೆ ಕಣ್ಣಿಗೆ ಕಟ್ಟುವಂಥದ್ದು. ಮೈನವಿರೇಳಿಸುವಂಥ ಪಾತ್ರ. ಆದರೆ, ಒಂದು ವಿಚಾರ ಗೊತ್ತೇ? ಆ ಕಾಲ್ಪನಿಕ ಪಾತ್ರಗಳನ್ನೂ ಮೀರಿಸುವಂಥ ವೀರರನ್ನು ರಾಜಮಾತೆ ಚನ್ನಮ್ಮ ತನ್ನ ಕಾವಲಿಗೆ, ಕಿತ್ತೂರಿನ ರಕ್ಷಣೆಗೆ ಇಟ್ಟುಕೊಂಡಿದ್ದಳು!
ಹೌದು, ಅಂದು ಬೈಲಹೊಂಗಲದಲ್ಲಿ ನಿಂತು ಒಂದು ಕಲ್ಲು ಎಸೆದರೆ, ಅದು ಯಾವುದಾದರೂ ಒಬ್ಬ ಶೂರನ ಮನೆಗೆ ಬೀಳುತ್ತಿತ್ತು. ಅಲ್ಲಿ ಅಷ್ಟು ವೀರರಿದ್ದರು. 176 ವರ್ಷಗಳ ಹಿಂದೆ ಈ ವೀರರಾಣಿಯ ಸುತ್ತ, ವೀರರ ಪಡೆಯೇ ಕಾವಲಿತ್ತು. ಸ್ವಾಮಿನಿಷ್ಠೆಗೆ ಹೆಸರಾದ ಇವರು ಶತ್ರುಗಳನ್ನು ಬಲಿ ತೆಗೆದುಕೊಳ್ಳಲು ಹಸಿದ ಹೆಬ್ಬುಲಿಯಂತೆ ಕಾತರಿಸುತ್ತಿದ್ದರು. ಸಂಗೊಳ್ಳಿ ರಾಯಣ್ಣ ಸಿಡಿಲಿನಂತಿದ್ದ. ಅಮಟೂರ ವೀರಕೇಸರಿ ಬಾಳಪ್ಪ ಹುಲಿಯಂತೆ ಗರ್ಜಿಸುತ್ತಿದ್ದ.
ಬಿಚ್ಚುಗತ್ತಿ ಚನ್ನಬಸಪ್ಪ ತನ್ನ ಖಡ್ಗವನ್ನು ಸದಾ ಬಿಚ್ಚಿಕೊಂಡೇ ತಿರುಗಾಡುತ್ತಿದ್ದ… ಅಮಟೂರ ವೀರಕೇಸರಿ ಬಾಳಪ್ಪ, ಯಾಕೋ ಇಂದು ನೆನಪಿಗೆ ಬರುತ್ತಿದ್ದಾನೆ. ನಿಯತ್ತಿಗೆ ಹೆಸರಾದ ಬಾಳಪ್ಪ ಇಲ್ಲದೇ ಇರುತ್ತಿದ್ದರೆ, 1824 ಅ.23ರಲ್ಲಿ ನಡೆದ ಮೊದಲ ಯುದ್ಧದಲ್ಲೇ ಬ್ರಿಟಿಷರ ಆಕ್ರಮಣಕ್ಕೆ ಕಿತ್ತೂರು ಬಲಿಯಾಗುತ್ತಿತ್ತು. ಬಾಳಪ್ಪ ತನ್ನ ಜೀವವನ್ನು ಒತ್ತೆಯಿಟ್ಟು, ರಾಣಿ ಚನ್ನಮ್ಮನನ್ನು ರಕ್ಷಿಸಿದ್ದ!
ಬಾಳಪ್ಪ ಬಾಲ್ಯದಿಂದಲೇ ಖಡ್ಗ ಝಳಪಿಸುವುದರಲ್ಲಿ ಪ್ರವೀಣ, ಬಂದೂಕಿನಿಂದ ಗುರಿ ಇಡುವುದರಲ್ಲಿ ನಿಸ್ಸೀಮನಾಗಿದ್ದ. ಧಾರವಾಡ ಕಲೆಕ್ಟರ್, 1824ರಲ್ಲಿ ಕಿತ್ತೂರಿನ ಮೇಲೆ ದಾಳಿ ಮಾಡಿದಾಗ ತಾಯಿಯ ಆಜ್ಞೆಯಂತೆ, ಬಂದೂಕಿನಿಂದ ಥ್ಯಾಕರೆಯನ್ನು ನೆಲಕ್ಕುರುಳಿಸಿದ.
ಬ್ರಿಟಿಷ್ ಅಧಿಕಾರಿ ಚಾಪ್ಲಿನ್ ಎರಡನೇ ಬಾರಿಗೆ (1824 ಡಿ.3) ಕಿತ್ತೂರಿನ ಮೇಲೆ ದಾಳಿ ಮಾಡಿ, ವೀರರಾಣಿ ಚನ್ನಮ್ಮನಿಗೆ ಇನ್ನೇನು ಗುಂಡು ತಗುಲಿತು ಎನ್ನುವಷ್ಟರಲ್ಲಿ, ಅಂಗರಕ್ಷಕನಾದ ಬಾಳಪ್ಪ ತನ್ನ ಜೀವವನ್ನು ಒತ್ತೆಯಿಟ್ಟು, ತಾಯಿಯನ್ನು ರಕ್ಷಿಸಿದ. ಬಾಳಪ್ಪ ವೀರಮರಣ ಅಪ್ಪಿದ ದಿನ ಡಿ.4. ಇಂದು ಅಮಟೂರಿನ ಪುಟ್ಟ ಶಾಲೆಯ ಬಾಗಿಲಲ್ಲಿ ಸಣ್ಣ ಮೂರ್ತಿಯಾಗಿ ನಿಂತಿರುವ ಆತನನ್ನು ಈ ನಾಡು ಮರೆತಿದೆ.
* ಕಮಲಾ. ಬಿ. ಬಾಳಿಕಾಯಿ