Advertisement

ಬೇಡಿಕೆಯಾಗಿಯೇ ಉಳಿದ ಪಾರಂಪಳ್ಳಿ ಸೇತುವೆ

10:51 PM Apr 09, 2019 | sudhir |

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ಸೇರಿದ ಪಾರಂಪಳ್ಳಿ, ಹೆಗ್ಗಡ್ತಿಮಕ್ಕಿ ವಾರ್ಡ್‌ಗೆ ಹೊಂದಿಕೊಂಡಿರುವ ಸೀತಾನದಿಯ ಉಪನದಿ ನಾಯ್ಕನ್‌ಬೈಲು ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಬೇಕು ಎನ್ನುವುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದೆ. ಪ್ರತಿ ಬಾರಿ ಚುನಾವಣೆಗಳು ಬಂದಾಗ ಈ ಎರಡು ವಾರ್ಡ್‌ಗಳಲ್ಲಿ ಸೇತುವೆ ವಿಚಾರ ಪ್ರಮುಖವಾಗಿ ಚರ್ಚೆಯಾಗುತ್ತದೆ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ನೀಡಿದ ಆಶ್ವಾಸನೆಗಳೆಲ್ಲ ಮರೆತೇ ಹೋಗುತ್ತವೆ.

Advertisement

ಅಪಾಯಗಳ ನಡುವೆ ಸಂಚಾರ
ಪ್ರಸ್ತುತ ಇಲ್ಲಿ ಮರದ ಸೇತುವೆ ಇದೆ. ಇದು ಪ್ರತಿ ಮಳೆಗಾಲದಲ್ಲಿ ಶಿಥಿಲಗೊಳ್ಳುವುದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಾರೆ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ರೈತರು, ಮೀನುಗಾರರು, ಕೂಲಿ ಕಾರ್ಮಿಕರು ತಮ್ಮ ಚಟುವಟಿಕೆಗಳಿಗೆ ಅಪಾಯಗಳ ನಡುವೆ ಸಂಚರಿಸುತ್ತಾರೆ. ಹೀಗಾಗಿ ಸೇತುವೆ ನಿರ್ಮಿಸಿ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಚುನಾವಣೆಯ ಸರಕು
ಸ್ಥಳೀಯಾಡಳಿತದ ಪ.ಪಂ.ನಿಂದ ಹಿಡಿದು ಲೋಕಸಭಾ ತನಕದ ಹತ್ತಾರು ಚುನಾವಣೆಗೆ ಈ ಸೇತುವೆ ವಿಚಾರ ಪ್ರಮುಖ ಪ್ರಚಾರದ ಸರಕಾಗಿದೆ. ಸೇತುವೆ ಆಶ್ವಾಸನೆ ನೀಡಿ ಹಲವು ಮಂದಿ ಸ್ಥಳೀಯ ಚುನಾವಣೆಯನ್ನು ಜಯಿಸಿದ್ದಾರೆ. ಸೇತುವೆ ನಿರ್ಮಿಸದಿರುವುದರಿಂದ ಅಧಿಕಾರಿದಲ್ಲಿರುವವರು ಯಾವುದೇ ಕೆಲಸ ಮಾಡಿಲ್ಲ ಎಂದು ವಿರೋಧ ಪಕ್ಷದವರು ಆಡಳಿತ ಪಕ್ಷದ ವಿರುದ್ಧ ಪ್ರಚಾರ ನಡೆಸಿದ್ದೂ ಇದೆ. ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ ಎನ್ನುವ ಕಾರಣಕ್ಕೆ ಜನರು ತಿರುಗಿ ಬಿದ್ದು ಸೋಲಿನ ರುಚಿ ತೋರಿಸಿದ್ದಾರೆ. ಕ‌ಳೆದ ಪ.ಪಂ. ಚುನಾವಣೆಯಲ್ಲೂ ಇದೇ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಆದರೆ ಆಶ್ವಾಸನೆ ಇದುವರೆಗೆ ಈಡೇರಿಲ್ಲ.

ನಂಬಿಕೆ ಕಳೆದುಕೊಂಡ ಜನರು
ಸೇತುವೆ ನಿರ್ಮಿಸುವುದಾಗಿ ಸುಮಾರು 25-30 ವರ್ಷಗಳಿಂದ ಜನಪ್ರತಿನಿಧಿಗಳು ಜನರನ್ನು ಯಾಮಾರಿಸುತ್ತಿರುವುದರಿಂದ ಇದೀಗ ಇಲ್ಲಿನ ಸ್ಥಳೀಯರು ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.

ಆಶ್ವಾಸನೆ ನಂಬಲ್ಲ
ಸುಮಾರು ಐದು ದಶಕಗಳಿಂದ ಶಾಶ್ವತ ಸೇತುವೆಗಾಗಿ ಬೇಡಿಕೆ ಸಲ್ಲಿಸುತ್ತಿದ್ದೇವೆ. ಚುನಾವಣೆ ಬಂದಾಗ ಎಲ್ಲರೂ ಸೇತುವೆ ನಿರ್ಮಿಸುವುದಾಗಿಆಶ್ವಾಸನೆ ನೀಡುತ್ತಾರೆ. ಆದರೆ ಚುನಾವಣೆ ಬೆನ್ನಿಗೆ ಎಲ್ಲವನ್ನೂ ಮರೆಯುತ್ತಾರೆ. ಈ ಬಾರಿ ಮತ್ತೆ ಮಳೆಗಾಲ ಆರಂಭಗೊಳ್ಳುತ್ತಿದ್ದು, ಸಮಸ್ಯೆ ಕೂಡ ಮುಂದುವರಿಯಲಿದೆ. ಸೇತುವೆ ನಿರ್ಮಾಣವಾಗುವ ತನಕ ಈ ವಿಚಾರದಲ್ಲಿ ಎಷ್ಟೇ ಆಶ್ವಾಸನೆ ನೀಡಿದರೂ ನಾವು ನಂಬುವ ಸ್ಥಿತಿಯಲ್ಲಿಲ್ಲ.
-ಭಾಸ್ಕರ್‌, ಸ್ಥಳೀಯ ನಿವಾಸಿ

Advertisement

ಅಧಿಕೃತ ಮಾಹಿತಿ ಇಲ್ಲ
ಶಾಶ್ವತ ಸೇತುವೆಯ ಬೇಡಿಕೆ ಹಲವು ಸಮಯದಿಂದ ಇದೆ. ಈ ಕುರಿತು ಪ್ರಸ್ತಾವನೆ ಹಾಗೂ ಅಂದಾಜು ಪಟ್ಟಿ ಸಂಬಂಧಪಟ್ಟ ಇಲಾಖೆಗೆ ರವಾನೆಯಾಗಿದೆ. ಆದರೆ ಮಂಜೂರಾದ ಕುರಿತು ಯಾವುದೇ ಅಧಿಕೃತ ಆದೇಶ ಪ.ಪಂ.ಗೆ ಬಂದಿಲ್ಲ. ನೇರವಾಗಿ ಇಲಾಖಾ ಮಟ್ಟದಲ್ಲಿ ಮಂಜೂರಾತಿಯಾಗಿ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆಯೂ ಇವೆೆ.
-ಪದ್ಮನಾಭ, ಸಾಲಿಗ್ರಾಮ ಪ.ಪಂ. ಎಂಜಿನಿಯರ್‌

ಮಳೆಗಾಲಕ್ಕೆ ಮತ್ತದೇ ಗೋಳು
ಇಲ್ಲಿನ ನಿವಾಸಿಗಳು ಬೇರೆ ಮಾರ್ಗದ ಮೂಲಕ ಸಾಲಿಗ್ರಾಮ, ಕೋಟದ ಮುಖ್ಯ ಪೇಟೆ ತಲುಪಬೇಕಾದರೆ 8 ಕಿ.ಮೀ. ಸುತ್ತುವರಿದು ಸಂಚರಿಸಬೇಕು. ಆದರೆ ಈ ಮರದ ಸೇತುವೆ ಮೂಲಕ ಕೇವಲ 2-3 ಕಿ.ಮೀ. ಪ್ರಯಾಣಿಸಿ ಈ ಪ್ರದೇಶ ತಲುಪಬಹುದು. ಜತೆಗೆ ಈ ಸೇತುವೆಯ ಎರಡು ಕಡೆ ಮುಖ್ಯ ರಸ್ತೆ ತನಕ ಹಲವು ವರ್ಷದ ಹಿಂದೆ ರಸ್ತೆ ನಿರ್ಮಾಣಗೊಂಡಿದೆ. ಹೀಗಾಗಿ ಶಾಶ್ವತ ಸೇತುವೆ ನಿರ್ಮಾಣವಾದರೆ ನೇರವಾಗಿ ಸಂಚಾರ ಆರಂಭಗೊಳ್ಳುತ್ತದೆ.

  • ರಾಜೇಶ್ ಗಾಣಿಗ ಅಚ್ಲ್ಯಾಡಿ
Advertisement

Udayavani is now on Telegram. Click here to join our channel and stay updated with the latest news.

Next