Advertisement

ಉಸ್ತುವಾರಿ ಸಚಿವರ ಹೆಗಲಿಗೆ ಜಿಲ್ಲೆ ಜವಾಬ್ದಾರಿ

06:20 AM Mar 29, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯ ಪೂರ್ಣ ನೇತೃತ್ವ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Advertisement

ಬುಧವಾರ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಜತೆ ಪ್ರತಿ ಸಚಿವರ ಜತೆ ಪ್ರತ್ಯೇಕ ಸಭೆ ನಡೆಸಿದ ಅವರು, ಹೈಕಮಾಂಡ್‌ ಯಾರಿಗೆ ಟಿಕೆಟ್‌ ಕೊಟ್ಟರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಬೇಕು ಎಂದು ನಿರ್ದೇಶನ ನೀಡಿದರು.

ಚುನಾವಣಾ ಖರ್ಚು ವೆಚ್ಚಗಳಿಗಾಗಿ ಹೈಕಮಾಂಡ್‌ನ‌ತ್ತ ನೋಡದೆ ಸ್ಥಳೀಯವಾಗಿಯೇ ಸಂಪನ್ಮೂಲ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಪಾವತಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು ಎಂದು ತಿಳಿಸಲಾಗಿದೆ.

ಆಯಾ ಸಚಿವರ ಜಿಲ್ಲೆಗಳಲ್ಲಿ ಜಾತಿ ಲೆಕ್ಕಾಚಾರ, ಬಿಜೆಪಿ ಹಾಗೂ ಜೆಡಿಎಸ್‌ನ ಶಕ್ತಿ, ಆ ಪಕ್ಷಗಳಲ್ಲಿರುವ ಅಭ್ಯರ್ಥಿಗಳ ಬಗ್ಗೆ ಇರುವ ಅಭಿಪ್ರಾಯ ಕುರಿತು ಮಾಹಿತಿ ಸಂಗ್ರಹಿಸಿ, ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ವೇಳೆ ಸ್ಥಳೀಯವಾಗಿ ಅಸಮಾಧಾನಗೊಳ್ಳುವ ನಾಯಕರನ್ನು ಮನವೊಲಿಸುವ ಕೆಲಸವನ್ನು ನೀವೇ ಮಾಡಬೇಕು ಎಂದು ಎನ್ನಲಾಗಿದೆ.  ಸಚಿವರು ವಿವಾದಾತ್ಮಕ ಹೇಳಿಕೆ ನೀಡದಂತೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.

ಅಸಮಾಧಾನ
ಚಿತ್ರದುರ್ಗ ಜಿಲ್ಲೆಯ ಶಾಸಕರು ಉಸ್ತುವಾರಿ ಸಚಿವರ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಮುಖ್ಯಮಂತ್ರಿಯವರು ಸಚಿವ ಆಂಜನೇಯ ಅವರ ಗಮನಕ್ಕೆ ತಂದರು. ಎಲ್ಲರನ್ನೂ  ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಕೆಲಸ ಮಾಡವಂತೆ ಕಿವಿಮಾತು ಹೇಳಿದರು ಎನ್ನಲಾಗಿದೆ.

Advertisement

ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತು ಸಭೆ ಮಾಡಿದ್ದೇವೆ. ಆಯಾ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧ್ಯಕ್ಷರಿಂದ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಏ. 9,10 ರಂದು ಸ್ಕ್ರೀನಿಂಗ್‌ ಕಮಿಟಿ ಸಭೆ ಇದೆ. ಬಳಿಕ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ.
– ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next