ತನ್ನಾತ್ಮದ ನಾದದ ಗುಂಗಿನ ಎಳೆ ಹಿಡಿದು ಸಂಗೀತಗಾರನೊಬ್ಬ ನೇಯುವ ಸೂಕ್ಷ್ಮಾತಿಸೂಕ್ಷ್ಮ ನೇಯ್ಗೆ ಮೂಡಬಲ್ಲದೆ ಎಂದಾದರೂ ವೃಂದ ಮೇಳದಲ್ಲಿ?
Advertisement
ದೇವಲೋಕದಲ್ಲಿ ಮಿಡಿದ ತಂತಿಯ ನಾದವೇ ಕೇಳಿರಬೇಕು ಇವನಿಗೆ ಇವನೊಬ್ಬನಿಗೇ ಅದೇ ಮೂಡಿಸಿತೇನೋ ಈ ಹೊಸ ಸಂಚಾರ ಈ ರಾಗಕ್ಕೆ.
ಹಾಡು ಹಕ್ಕಿಯ ಉಲಿಯಲ್ಲಿ ಕಂಡ ಮೇರೆ ಮೀರಿದ ಭಾವ ಪರವಶತೆಯನ್ನು ಹೇಳಬಹುದಾದರೂ ಹೇಗೆ?
ಆದರೂ ಆಡುವ ಒಂದು ವ್ಯರ್ಥ ಪ್ರಯತ್ನದÇÉೇ ಸಂತುಷ್ಟರು ನಾವು ಸಂತುಷ್ಟರು ನಾವು,
ಕವಿದ ನೆರಳಿನಂಥ ಬದುಕÇÉೇ ಕ್ಷಣಮಾತ್ರ ಹೊಳೆದ ಈ ಸ್ಪಷ್ಟ, ಅನಿವರ್ಚನೀಯ, ದೈವಿಕವಾದ ಯಾವುದೋ ಬೆಳಕಿನ ಒಂದು ಕ್ಷೀಣ ಕಿರಣ ಹೀಗೆ ಕ್ಷಣಮಾತ್ರವಾದರೂ ಕಂಡಿದ್ದಕ್ಕೆ !
Related Articles
Advertisement
ನಾವಾಡುವ ನಮ್ಮ ಮಾತಾದರೂ ಇನ್ಯಾವುದೋ ಮಾತೊಂದಕ್ಕೇ ಮಿಡಿದು ಮೂಡಿದ್ದೇ. ಎಲ್ಲ ಮಾತೂ ಒಂದು ಅನುರಣನವೇ. ಒಂದೇ ಶೃತಿಯಲ್ಲಿ ಶೃತಿ ಮಾಡಿದ ಎರಡು ತಂಬೂರಿಗಳನ್ನು ಒಂದು ಗೊತ್ತಾದ ಅಂತರದಲ್ಲಿ ಇಟ್ಟು, ಒಂದು ತಂಬೂರಿಯನ್ನು ಮೀಟಲು ಪ್ರಾರಂಭಿಸಿದಾಗ ಇನ್ನೊಂದು ತಂಬೂರಿಯಲ್ಲೂ ನಾದವು ಅನುರಣನಗೊಳ್ಳುವುದು ತಿಳಿದಿರುವ ಸಂಗತಿ. ಮುಟ್ಟದೆಯೇ ಮೀಟದೆಯೇ ಮಿಡಿಯುವ ಈ ನಾದದ ಅನುರಣನದಂತೆಯೇ ಈ ಮಾತು ಕೂಡ.
ಯಾವುದೋ ಗೊತ್ತಾದ ಒಂದು ಶೃತಿಯಲ್ಲಿ ಶೃತಿಗೊಂಡ ಮನ, ಲೋಕಕ್ಕೆ ಮಿಡಿಯುತ್ತ ಅನುರಣನಗೊಳ್ಳುವಾಗ ಹುಟ್ಟಿಕೊಳ್ಳುವ ಈ ಮಾತಿಗೆ ಮಾತು ಅಂದರೆ ಅಷ್ಟೇ ಸಾಕೆ? ಎಲ್ಲಕ್ಕೂ ಹೆಸರಿಟ್ಟು ಗುರುತಿಸುವುದು ಸುಮ್ಮನೆ ನಮ್ಮ ಅನುಕೂಲಕ್ಕಷ್ಟೇ. ಈ ಅನುಕೂಲಕ್ಕಾದರೂ ಸಾಧ್ಯತೆಗಿಂತ ಮಿತಿಯೇ ಹೆಚ್ಚು. ಮಾತಿಗೆ ನಿಲುಕದ ಅನುಭವವೊಂದಕ್ಕೆ ಮಾತಿನ ಹಂಗಿಗೆ ಸಿಕ್ಕಿಬೀಳುವ ಮನಸ್ಸೇ ಇರದಿರುವಾಗ ಅದನ್ನು ಅದರ ಪಾಡಿಗೆ ಇರುವಂತೆ ಬಿಡುವುದೇ ಹೆಚ್ಚು ಸಮಂಜಸವಲ್ಲವೆ? ಹೀಗಾಗಿಯೇ ಆಡಿದ ಮಾತಿಗಿಂತ ಆಡದೇ ಉಳಿದ ಇನ್ನೊಂದು ಮಾತಿಗೇ ಹೆಚ್ಚು ಆಕರ್ಷಣೆ. ಮಾತಿನÇÉಾದರೂ ವಾಚ್ಯಾರ್ಥಕ್ಕಿಂತ ಧ್ವನ್ಯಾರ್ಥಕ್ಕೇ ಹೆಚ್ಚು ಸಾಧ್ಯತೆ.
ಮಾತು ಸುಳ್ಳಿನ ಹಾಗೆ, ಹೊಕ್ಕಲ್ಲಿ ಹೊಕ್ಕಷ್ಟು ಹರಡಿಕೊಳ್ಳುತ್ತ ಆಡಿದ್ದರ ಹೊರತಾದ ಇನ್ನೊಂದೇ ಸುಳಿವನ್ನು ಸೂಚಿಸುತ್ತ ಸಾಗುತ್ತದೆ. ಮಾತು ನೀರಿನ ಹಾಗೆ, ಸಿಕ್ಕ ಪಾತ್ರೆಯ ಆಕಾರವೇ ತಾನಾಗುತ್ತ ಪ್ರತಿಕ್ಷಣ ಬದಲಾಗುವ ಬೆರಗಾಗುತ್ತದೆ! ಹಾಗೆ ಕ್ಷಣಿಕವಾಗಿದ್ದಕ್ಕೇ ಅದು ಸುಂದರವೋ ರೂಕ್ಷವೋ ಮತ್ತೂಂದೋ ಆಗುವ ಬೆಡಗು. ಅದು ಹುಟ್ಟಿಸುವ ಧ್ವನಿಗೆ ಮಾತ್ರ ಅರ್ಥವನ್ನು, ಭಾವವನ್ನು, ಲೋಕವನ್ನು ಇನ್ನೊಂದೇ ಬಗೆಯಲ್ಲಿ ಕಾಣುವ, ಭಾವಿಸುವ ಮತ್ತು ಹಾಗೆ ಭಾವಿಸುತ್ತಲೇ ಮತ್ತೆ ನೂರು ಬಗೆಯ ಇನ್ನೊಂದೇ ಮಾತಾಗುವ ಸಾಧ್ಯತೆ!
ಮಾತು, ಭಾಷೆ ಮನುಷ್ಯ ನಿರ್ಮಿತ. ನಮಗೆ ಬೇಕಾದಂತೆ ನಮ್ಮ ನಮ್ಮ ದೇವರನ್ನು ಮಾಡಿಕೊಂಡಿರುವ ನಾವೇ ನಮ್ಮ ಮಾತುಗಳನ್ನೂ ಮಾಡಿಕೊಂಡಿದ್ದೇವೆ. ಹಾಗೆ ನಾವೇ ಮಾಡಿಕೊಂಡ ನಮ್ಮ ಮಾತು ನಮ್ಮನ್ನು ಅರಳಿಸುವ, ನರಳಿಸುವ, ಕೆರಳಿಸುವ, ಅರ್ಥದ ಹಂಗಿಗೆ ಸಿಗುವ-ಸಿಗದ ಸಂದರ್ಭಗಳಲ್ಲಿ, ನಾವೇ ನಿರ್ಮಿಸಿದ ಮಾತೇ ನಮ್ಮನ್ನು ಹೀಗೆಲ್ಲ ಆಡಿಸುವ ಕಾಡಿಸುವ ಬಗೆಯ ಅರಿಯಲಾರದೆ ಬೆರಗಾಗಿದ್ದೇವೆ.
ಬೇಂದ್ರೆಯವರ ಜೋಗಿ ಪದ್ಯದಲ್ಲಿ ಅದೊಂದು ಕಾಳ ರಾತ್ರಿ, ತಾರಪಂಚಮದಲ್ಲಿ ಕೂಗುವ ಕೋಗಿಲೆಯ ಸ್ವರದ ಸೆಳೆತಕ್ಕೆ ಸಿಕ್ಕ ಕವಿ ಅದನ್ನು ಹಿಂಬಾಲಿಸಿ, ಅದೇ ಒಂದು ಗೀಳಾಗಿ ಕಾಡಿ, ಅದನ್ನು ಹುಡುಕುತ್ತ ಕಳೆದುಹೋಗುತ್ತಾರೆ. ಅದೆಂಥ ಗೀಳೆಂದರೆ, ಕನಸಿನಲ್ಲಿಯೂ ಮತ್ತೆ ಆ ಕೋಗಿಲೆಯ ಸ್ವರವೇ ತಮ್ಮನ್ನು ಕರೆದಂತಾಗಿ ತಾನೇ ಎಲ್ಲಿ ಮಾಮರವಾಗಿಬಿಡುವೆನೋ ಎಂದು ಕವಿ ದಿಗಿಲು ಬೀಳುವಷ್ಟು! ಹೀಗೆ ಅಸರಂತ ಕೂಗುವ ಇದರ ಧ್ಯಾನಕ್ಕೆ ಬಿದ್ದು ಕಳೆದುಹೋಗುವ ವೇಳೆಯಲ್ಲಿ ಜೋಗಿಯೊಬ್ಬ ಬಂದು ಕವಿಯನ್ನು ಎಚ್ಚರಿಸಿ ಕಾಪಾಡುತ್ತಾನೆ. ಕೇಳಿದ ಯಾವುದೋ ಸ್ವರವೊಂದು ತಮ್ಮೊಳಗೇ ಮೂಡಿಸಿದ ಇನ್ಯಾವುದೋ ಅರಿವಿನ ಒಳಸುಳಿಗೆ ಸಿಕ್ಕಿ ಬೀಳುವ ವೇಳೆ ಕವಿಗೆ ಎಚ್ಚರ ಮೂಡಿಸಿ, ಅದರಿಂದ ತಪ್ಪಿಸುವ ಆ ಜೋಗಿ, ಕವಿಯ ಎದೆಯ ಮರುಳಸಿದ್ಧ ಕಾಪಾಡಿದ್ದು ಕವಿಯನ್ನೋ, ಅಥವಾ ಕವಿಯ ಎದೆಯೊಳಗೆ ರೂಪಾಂತರಗೊಳ್ಳುವ ಹವಣಿಕೆಯಲ್ಲಿದ್ದ ಮಾತೊಂದನ್ನೋ!
ಬೇಂದ್ರೆಯವರೇ ಹೇಳಿದ ಇನ್ನೊಂದು ಮಾತು ಮನ ತುಂಬುತ್ತಿದೆ. “ಮೌನದಲ್ಲಿರಲಿ ಮಾತಿನ ಧ್ವನಿ’ ಅಂದರಂತೆ ಅವರು! ಈ ಮಾತಿನ ಅರ್ಥವೇನಿರಬಹುದೆಂದು ಮನ ಧ್ಯಾನಿಸುತ್ತಿದೆ. ಅರ್ಥವೇಕೆ, ಸ್ವಾರ್ಥವೇಕೆ, ಸುಮ್ಮನೆ ಮಾತನ್ನು ಕೇಳಿ ಕುಣಿಯುದನ್ನು ಕಲಿಯುದ್ಯಾವಾಗ ಎಂದು ತಿಳಿವು ಎಚ್ಚರಿಸುತ್ತಿದೆ. ಮೌನಕ್ಕೆ ಮಾತಿನ ಧ್ವನಿಯ ಹಂಗೊಂದೇಕೆ ಬೇಕೆಂದು ತಿಳಿದವರನ್ನು ಕೇಳುವ ಹಂಬಲ. ಯಾರನ್ನೂ ಕೇಳದೆ ಅಂತರಂಗದಲ್ಲಿ ಮೂಡುವ ಮಾತು ಮೌನಗಳ ಸಂವಾದವನ್ನು ಸುಮ್ಮನೆ ಕೇಳುವ ಆಸೆ!
ಅಂತರಂಗದ ಮಾತಿನ ಕಥೆ ಬಿಡಿ, ಬಹಿರಂಗದಲ್ಲಿ ಆಡುವ ಮಾತಿಗೆ, ಆಡಲೇಬೇಕಾದ ಅನಿವಾರ್ಯದಲ್ಲಿ ಆಡಿ ಆಡಿ, ಆಡುವುದೇ ವ್ಯಸನವಾಗುವ ಅಪಾಯವಿದೆ, ದಣಿವಾಗುವ ಮಿತಿಯಿದೆ, ಕೇಳುವುದನ್ನೇ ಅನುರಣಿಸುವುದನ್ನೇ ಮರೆಸಿಬಿಡುವ ಸಾಧ್ಯತೆಯೂ ಇದೆ. ಇದರಿಂದ ತಪ್ಪಿಸಿಕೊಳ್ಳುವ ಏಕೈಕ ದಾರಿಯೆಂದರೆ ಮಾತಿಗೊಂದು ಬಿಡುವು ಕೊಡುವುದು. ಮೂರು ತಿಂಗಳ ಕಾಲ ಎಂಬ ನಿರ್ದಿಷ್ಟ ಅವಧಿಗಾಗಿಯೇ ಬರೆದ ಈ ಅಂಕಣ ಈಗ ಮುಗಿಯವ ಕಾಲ ಬಂದಿದೆ.
ಇಷ್ಟು ದಿನವೂ ಮಾತಿನ ಕುರಿತೇ ಆಡಿದ ಈ ಮಾತಿಗೆ ಜಾಗವಿತ್ತ ಉದಯವಾಣಿಗೆ ಮತ್ತು ಜೊತೆಗಿದ್ದ ಎಲ್ಲರಿಗೂ ಪ್ರೀತಿಯ ನಮನಗಳು. ಮಾತು-ಮೌನಗಳ ಸೌಖ್ಯವೂ ಸಂತೋಷವೂ ಬೆರಗೂ ನಮ್ಮೆಲ್ಲರಿಗೂ ಸದಾ ಸಿಗುತ್ತಿರಲಿ ಎಂಬ ಆಸೆಯಲ್ಲಿ, ಹಾರೈಕೆಯಲ್ಲಿ…(ಅಂಕಣ ಮುಕ್ತಾಯ) – ಮೀರಾ ಪಿ. ಆರ್., ನ್ಯೂಜೆರ್ಸಿ