Advertisement

ಇಡೀ ಜಗತ್ತನ್ನು ಹಿಂದುತ್ವದ ರಾಜಧಾನಿಯನ್ನಾಗಿಸುವ ಸಂಕಲ್ಪ ತೊಡಬೇಕು : ಅನಂತಕುಮಾರ್‌ ಹೆಗಡೆ

10:07 AM Feb 02, 2020 | sudhir |

ಬೆಂಗಳೂರು: ಹಿಂದುತ್ವ ಕೇವಲ ಪೂಜಾ ಪದ್ಧತಿ ಅಷ್ಟೇ ಅಲ್ಲ ಅದು ಬದುಕಿನ ಸಿದ್ಧಾಂತ. ಒಟ್ಟಾಗಿ ಬದುಕಬೇಕು ಎಂದು ಹೇಳಿದಂತಹ ಪರಂಪರೆ ನಮ್ಮದು ಆ ಹಿನ್ನೆಲೆಯಲ್ಲಿಯೇ ಭಾರತ ಅಷ್ಟೇ ಅಲ್ಲ, ಇಡೀ ಜಗತ್ತನ್ನೇ ಹಿಂದುತ್ವದ ರಾಜಧಾನಿಯನ್ನಾಗಿ ಮಾಡಲು ಸಂಕಲ್ಪ ತೊಡಬೇಕು ಎಂದು ಸಂಸದ ಅನಂತಕುಮಾರ್‌ ಹೆಗಡೆ ಕರೆ ನೀಡಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ಸಾವರ್ಕರ್‌ ಸಾಹಿತ್ಯ ಸಂಘ ಹಮ್ಮಿಕೊಂಡಿದ್ದ “ಮತ್ತೆ ಮತ್ತೆ ಸಾವರ್ಕರ್‌’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಪೌರತ್ವ ತಿದ್ದು ಪಡಿ ಕಾಯ್ದೆಯಲ್ಲಿ ಬಹಳಷ್ಟು ಉತ್ತಮವಾದ ಅಂಶಗಳು ಇವೆ ಎಂದು ತಿಳಿದವರು ಕೂಡ ಈ ಬಗ್ಗೆ ಬೀದಿ ಹೋರಾಟಕ್ಕಿಳಿದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಇಂತಹ ಆಂದೋಲನಗಳನ್ನು ಹತ್ತಿಕ್ಕಲು ತಾಕತ್ತು ಇಲ್ಲ ಎಂದು ತಿಳಿಯಬೇಡಿ. ಬಿಲದಲ್ಲಿರುವಂತಹ ಕೊನೆಯ ಇಲಿ ಹೊರಗೆ ಬರುವುದನ್ನು ಕಾಯುತ್ತಿರುವುದಾಗಿ ಹೇಳಿದರು.

ಮುಸ್ಲಿಂ ವಿಚಾರಧಾರೆ ಆಳಲು ಹೊರಟಿದೆ:
ಅಷ್ಟೋ ಸಾರಿ ನಾವು ಭಾವಿಸುತ್ತಿರುತ್ತೇವೆ ವ್ಯಕ್ತಿಗಳು ಜಗತ್ತನ್ನು ಆಳುತ್ತಾರೆ ಎಂದು. ಆದರೆ ಜಗತ್ತನ್ನು ಆಳುವುದು ವ್ಯಕ್ತಿಗಳಲ್ಲ, ವಿಚಾರಗಳು. ಒಂದು ಹಂತದ ವರೆಗೆ ಆಧ್ಯಾತ್ಮಿಕ ವಿಚಾರ ಈ ಜಗತ್ತನ್ನು ಆಳಿತು. ಆ ನಂತರ ವ್ಯಾಪಾರ, ಬಂಡವಾಳ ಶಾಹಿ ವಿಚಾರಧಾರೆಗಳು ಜತೆಗೆ ಕೆಲವು ಕಡೆ ಕಮ್ಯೂನಿಷ್ಟ್ ವಿಚಾರಧಾರೆಗಳು ಜಗತ್ತನ್ನು ಆಳಿವೆ. ಆದರೆ ಇದೀಗ ಇಸ್ಲಾಂ ವಿಚಾರಧಾರೆ ಜಗತ್ತನ್ನು ಆಳಲು ಹೊರಟಿದೆ ಎಂದು ದೂರಿದರು.

ಈ ಜಗತ್ತಿನಲ್ಲಿ ವೇದಗಳಷ್ಟು ಪ್ರಾಚೀನವಾದ ಸಾಹಿತ್ಯಗಳಿಲ್ಲ ಎಂದು ಇತಿಹಾಸಕಾರರು ಈಗಾಗಲೇ ಒಪ್ಪಿಕೊಂಡಿದ್ದಾರೆ.ಆದರೆ ನಮ್ಮಲ್ಲಿರುವ ಕೆಲವರು ಇದಕ್ಕೆ ಒಂದು ಚೌಕಟ್ಟನ್ನು ಹಾಕುವಂತಹ ಕೆಲಸ ಮಾಡುತ್ತಿದ್ದಾರೆ. ಜತೆಗೆ ಆರ್ಯರು ಮಧ್ಯೆ ಏಷಿಯಾದಿಂದ ಬಂದರು ಎಂದು ಸುಳ್ಳನ್ನು ಹರಿಬಿಟ್ಟಿದ್ದಾರೆ. ಆರ್ಯ ಮಧ್ಯೆ ಏಷಿಯಾದಿಂದ ಬಂದಿಲ್ಲ ಎಂಬುವುದನ್ನು ಜಗತ್ತೇ ಈಗ ಒಪ್ಪಿಕೊಂಡಿದೆ. ಆದರೂ ಕೆಲವರು ಈ ಬಗ್ಗೆ ಸುಳ್ಳುಗಳನ್ನು ಬಿತ್ತುತ್ತಿದ್ದಾರೆ ಎಂದು ಟೀಕಿಸಿದರು.

ಸಾವರ್ಕರ್‌ ಬಗ್ಗೆ ಅಪಪ್ರಚಾರ:
ಸಾವರ್ಕರ್‌ ಅವರು ಹಿಂದುತ್ವದ ಪ್ರತಿಪಾದಕರು ಅವರ ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಾ ಅಪ ಪ್ರಚಾರ ಮಾಡುತ್ತಿದ್ದಾರೆ.ಗಾಂಧೀಜಿ ಹತ್ಯೆ ಆದಾಗ ಪೊಲೀಸರು ಸಾವರ್ಕರ್‌ ಅವರನ್ನು ಬಂಧಿಸಲು ಹೊರಟಾಗ ಅಂಬೇಡ್ಕರ್‌ ಅವರು ಕೂಡ ಪೊಲೀಸರ ಕ್ರಮವನ್ನು ವಿರೋಧಿಸಿದ್ದರು.

Advertisement

ಅಂಬೇಡ್ಕರ್‌ ಮಾತಿಗೂ ಕೆಲವರು ಬೆಲೆ ಕೊಡಲಿಲ್ಲ. ಅಂತಹ ಮನಸ್ಥಿತಿಯವರು ಈಗ ಹಿಂದುತ್ವದ ನಾಶದ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.

ಈ ದೇಶದ ಸ್ವಾತಂತ್ರ್ಯಕ್ಕಾಗಿ ಕೆಲವೇ ಜನರು ಹೋರಾಟ ನಡೆಸಿದ್ದಾರೆ ಎಂಬ ರೀತಿಯಲ್ಲಿ ಪ್ರತಿ ಬಿಂಬಿಸಲಾಗುತ್ತಿದೆ. ಇದು ಒಪ್ಪುವಂತಹದ್ದಲ್ಲ. ಬ್ರಿಟಿಷರ ವಿರುದ್ಧ ಉಗ್ರವಾದ ಹೋರಾಟ ನಡೆಸಿ ಲಾಠಿ ಏಟು ತಿಂದು ಸೆರೆ ಮನೆಯ ಕತ್ತಲೆ ಕೋಣೆಯಲ್ಲಿ ಹಲವರು ಜೀವನ ಕಳೆದರು. ಅವರ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಆದರೆ ಬ್ರಿಟಿಷರ ಜತೆಗೆ ಹೊಂದಾಣಿಕೆ ಮಾಡಿ ಕೊಂಡಿದ್ದ ವ್ಯಕ್ತಿಗಳು ಈಗ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ ಎಂದು ದೂರಿದರು.

ಸಾವರ್ಕರ್‌ ಸಾಹಿತ್ಯ ಸಂಘದ ಅಧ್ಯಕ್ಷ ಹಾಗೂ ಸಾಹಿತಿ ಡಾ.ಬಿ.ಜಿ.ಹರೀಶ ಮಾತನಾಡಿ, ಐಟಿ-ಬಿಟಿ ಕೇಂದ್ರದ ಹಬ್‌ ಆಗಿರುವ ಬೆಂಗಳೂರು ಹಿಂದುತ್ವದ ಹಬ್‌ ಆಗಬೇಕಾಗಿದೆ ಎಂದು ಹೇಳಿದರು. ಪ್ರತಿಯೊಂದನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಸಾಹಿತ್ಯದ ಉದ್ದೇಶವಾಗಿದೆ. ಕೆಲವರು ಸಾವರ್ಕರ್‌ ಅವರ ಬಗ್ಗೆ ಸುಳ್ಳುಗಳನ್ನು ಬಿತ್ತುತ್ತಿದ್ದು ಸಾವರ್ಕರ್‌ ಕುರಿತು ಮತ್ತಷ್ಟು ಅಧ್ಯಯನ ಅಗತ್ಯವಾಗಿದೆ ಎಂದರು. ಇದೇ ವೇಳೆ “ಹಿಂದು’ ಕೃತಿ ಲೋಕಾರ್ಪಣೆ ಗೊಳಿಸಲಾಯಿತು. ಲೇಖಕ ಬಾಬು ಕೃಷ್ಣಮೂರ್ತಿ, ಸಮೃದ್ಧ ಸಾಹಿತ್ಯ ಪ್ರಕಾಶನದ ಹರ್ಷ ಕೆ.ಆರ್‌. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next