ಹಾವೇರಿ : ಬಡತನ, ಅನಕ್ಷರತೆ ಹಾಗೂ ನಿರುದ್ಯೋಗ ಜೀತ ಪದ್ಧತಿಗೆ ಕಾರಣವಾಗಿದೆ. ದುರ್ಬಲ ವರ್ಗದವರ ಮೇಲೆ ನಡೆಯುತ್ತಿರುವ ಶೋಷಣೆ ತಡೆದು, ಜೀತ ಪದ್ಧತಿಯಲ್ಲಿ ತೊಡಗಿದವರನ್ನು ಜೀತಮುಕ್ತಗೊಳಿಸಲು ಸಂಕಲ್ಪ ಮಾಡಲಾಗಿದೆ ಎಂದು ಬೆಂಗಳೂರು ಇಂಟರ್ ನ್ಯಾಶನಲ್ ಜಸ್ಟೀಸ್‌ನ ಸದಸ್ಯ ಪಿ.ವಿಲಿಯಂ ಕ್ರಿಸ್ಟೋಫರ್ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಬೆಂಗಳೂರು ಇಂಟರ್ ನ್ಯಾಶನಲ್ ಜಸ್ಟೀಸ್ ಸಹಯೋಗದಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ 1976ರ ಕಾನೂನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಕುರಿತ ಅಧಿ ಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಜೀತ ಕಾರ್ಮಿಕ ಪದ್ಧತಿ ರಾಜ್ಯದಿಂದ ತೊಲಗಿಸಲು ಹಾಗೂ ಜೀತ ಮುಕ್ತ ಕರ್ನಾಟಕಕ್ಕೆ ಮುಖ್ಯಮಂತ್ರಿಗಳು ಫೆ.9ರಂದು ಅಭಿಯಾನ ಹಾಗೂ ಮಾ.6ರಂದು ಕಾರ್ಮಿಕ ಪದ್ಧತಿ ವಿರೋಧಿ ದಿನ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಜೀತದಿಂದ ಮುಕ್ತರಾದವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ, ಉಪವಿಭಾಗ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಧಿಕಾರಿಗಳು, ವಿಭಾಗದಲ್ಲಿ ಉಪವಿಭಾಗಾಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ಸಮಿತಿ ಅಧ್ಯಕ್ಷರಾಗಿರುತ್ತಾರೆ ಎಂದರು. ಜೀತ ಪದ್ಧತಿ ಕಾರ್ಮಿಕರನ್ನು ಗುರುತಿಸುವ ಜವಾಬ್ದಾರಿಯನ್ನು ಉಪವಿಭಾಗಾಧಿ ಕಾರಿಗಳಿಗೆ ಮಾತ್ರ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜೀತ ಪದ್ಧತಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಸರ್ವೇ ಮೂಲಕ ಪತ್ತೆ ಹಚ್ಚಬೇಕು. ದುರ್ಬಲ ವರ್ಗದ ಜನತೆ ಆರ್ಥಿಕ ಹಾಗೂ ದೈಹಿಕ ಶೋಷಣೆಗೆ ಒಳಗಾಗುತ್ತಾರೆ. ಭಾರತ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಆದರೆ, ಜೀತ ಪದ್ಧತಿಯಲ್ಲಿ ಅವರ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತದೆ. ಮುಂಗಡ ಹಣ ಪಡೆದರೆ, ಹಿರಿಯರು ಮಾಡಿದ ಸಾಲಕ್ಕೆ ಇಡಿ ಕುಟುಂಬವನ್ನೇ ಜೀತ ಪದ್ಧತಿಯಲ್ಲಿ ದುಡಿಸಿಕೊಳ್ಳಲಾಗುತ್ತದೆ.
ಜೀತ ಪದ್ಧತಿಯಲ್ಲಿ ಅನೇಕ ದೌರ್ಜನ್ಯಗಳು ಹಾಗೂ ಮಾನವ ಕಳ್ಳ ಸಾಗಾಣಿಕೆ ಸಹ ನಡೆಯುತ್ತದೆ. ದಿನ ಪೂರ್ತಿ ದುಡಿಸಿಕೊಂಡು ಸಮಾನ ವೇತನ ನೀಡುವುದಿಲ್ಲ. ಕೆಲಸದ ಸಮಯದಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ. ಕಾರ್ಮಿಕರು ಏಳರಿಂದ ಏಳೂವರೆ ಗಂಟೆ ಮಾತ್ರ ಕೆಲಸ ಮಾಡಬೇಕು.
ಆದರೆ, ಜೀತ ಪದ್ಧತಿಯಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿಸಿಕೊಳ್ಳಲಾಗುತ್ತದೆ ಎಂದರು. ಇಟ್ಟಂಗಿ ಭಟ್ಟಿ, ಕಲ್ಲುಕ್ವಾರಿ, ಹೈವೇ ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಇತರ ಕಡೆಗಳಲ್ಲಿ ಜೀತ ಪದ್ಧತಿ ಕಂಡುಬಂದರೆ ಕೂಡಲೇ ಅವರನ್ನು ಜೀತದಿಂದ ಮುಕ್ತಗೊಳಿಸಿ ತಕ್ಷಣ 20 ಸಾವಿರ ರೂ. ಪರಿಹಾರ ಹಣವನ್ನು ಸಂತ್ರಸ್ತರ ಬ್ಯಾಂಕ್ ಕಾತೆಗೆ ಜಮೆ ಮಾಡಬೇಕೆಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಪ್ರಭಾರ ಅಪರ ಜಿಲ್ಲಾ ಧಿಕಾರಿ ವಿನೋದಕುಮಾರ ಹೆಗ್ಗಳಗಿ, ಹಾವೇರಿ ಉಪವಿಭಾಗಾ ಧಿಕಾರಿ ಉಳ್ಳಾಗಡ್ಡಿ, ಸವಣೂರ ಉಪವಿಭಾಗಾಧಿ ಕಾರಿ ಅನ್ನಪೂರ್ಣ ಮುದಕಮ್ಮನವರ, ವಿವಿಧ ತಾಲೂಕು ತಹಶೀಲ್ದಾರ್‌ರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.