ಕೋಲಾರ: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಆಂತರಿಕ ಕಲಹಗಳಿಂದ ಬೇಸತ್ತು 12ಕ್ಕೂ ಹೆಚ್ಚು ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾದಾಗಿನಿಂದ ಅಧಿಕಾರಕ್ಕಾಗಿ ಎರಡೂ ಪಕ್ಷಗಳ ಶಾಸಕರು ಕಿತ್ತಾಟ ನಡೆಸುತಿದ್ದಾರೆ, ಇವರ ಜಗಳದಿಂದ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದು ಹೇಳಿದರು.
ವೈಫಲ್ಯವೇ ಕಾರಣ: ಕಾಂಗ್ರೆಸ್, ಜೆಡಿಎಸ್ ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ, ಬಿಜೆಪಿಗೆ ಬಹುಮತ ದೊರೆತ್ತಿದ್ದು, ಕಾರಣಾಂತರಗಳಿಂದ ಅವಕಾಶ ಸಿಗಲಿಲ್ಲ.
ಜನ ಸಾಮಾನ್ಯರ ಕೆಲಸ ಆಗಬೇಕಾದರೆ ಸದೃಢ ಸರ್ಕಾರ ರಚನೆಯಾಗಬೇಕು, ಸರ್ಕಾರಿ ಕಚೇರಿಗಳಲ್ಲಿ ಆಡಳಿತ ಯಂತ್ರ ಕುಸಿದಿದೆ, ಇದಕ್ಕೆಲ್ಲಾ ಸರ್ಕಾರದ ವೈಫಲ್ಯತೆಯೇ ಕಾರಣ ಎಂದು ಆರೋಪಿಸಿದರು. ಅಧಿಕಾರದ ದಾಹದಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡವು, ಆದರೆ, ಅದೇ ಮೈತ್ರಿ ಸರ್ಕಾರ ಜನರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಶಾಸಕರ ರಾಜೀನಾಮೆ ವಿಚಾರಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೇ ಸ್ವಯಂ ಪ್ರೇರಿತರಾಗಿ ರಾಜ್ಯಪಾಲರಿಗೆ ಹಾಗೂ ವಿಧಾನ ಸಭಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮನ್ಸೂಚನೆ ಎಂದು ಹೇಳಬಹುದು ಎಂದು ಅಭಿಪ್ರಾಯಪಟ್ಟರು.
ಕೋಲಾರ ನಗರಸಭೆ ಹಿಂದೆ ಕ್ಲಿನ್ ಸಿಟಿ ಎಂದು ಹೆಸರು ಪಡೆದಿತ್ತು, ಆದರೆ, ಈಗ ಪೌರಾಯುಕ್ತರಿಂದ ಗ್ಯಾಬರೇಜ್ ಸಿಟಿಯಾಗಿದೆ, ಕೋಲಾರದಲ್ಲಿ ಸರಿಪಡಿಸಬೇಕಾದುದು ಹೆಚ್ಚಾಗಿದೆ, ಎಲ್ಲಾ ಇಲಾಖೆಗಳಿಗೂ ಭೇಟಿ ನೀಡಿ ಸೌಕರ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.