ಮಾಗಡಿ: ಹಲ್ಲಿದ್ದವರಿಗೆ ಕಡ್ಲೆಯಿಲ್ಲ, ಕಡ್ಲೆ ಇದ್ದವರಿಗೆ ಹಲ್ಲಿಲ್ಲ ಎಂಬ ಗಾದೆ ನಮ್ಮ ಪುರಸಭೆಗೆ ಅನ್ವಯವಾಗುತ್ತದೆ. ಏಕೆಂದರೆ ಮಂಚನಬೆಲೆ ಜಲಾಶಯದಲ್ಲಿ ನೀರು ತುಂಬಿ ತುಳುಕುತ್ತಿದೆ. ಆದರೆ, ಮಾಗಡಿ ಜನತೆ ಮಾತ್ರ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೂ ಸಹ ಪುರಸಭೆ ಅಧಿಕಾರಿಗಳು ಮಾತ್ರ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ.
ತಾಲೂಕಿನ ಮಂಚನಬೆಲೆ ಜಲಾಶಯದಲ್ಲಿ ನೀರು ತುಂಬಿ ತುಳುಕುತ್ತಿದೆ. ಎಂಜಿನಿಯರ್ ಪ್ರಕಾರ 5 ವರ್ಷಗಳಿಗಾಗುವಷ್ಟು ಜಲಾಶಯದಲ್ಲಿ ನೀರಿದೆ. ಇದೇ ಜಲಾಶಯದಿಂದ ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಆದರೂ ಸಹ ಕಳೆದ 6 ತಿಂಗಳಿನಿಂದಲೂ ಮಾಗಡಿ ಪಟ್ಟಣದ ಜನತೆ ನೀರಿಗಾಗಿ ಪರದಾಡುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲ್ತ ಕ್ರಮ ಕೈಗೊಂಡಿಲ್ಲ.
ಜಲಾಶಯದ ನೀರು ಪೋಲು: ಜನರು ಕುಡಿಯುವ ನೀರಿಗಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೂ ಮಂಚನಬೆಲೆ ಜಲಾಶಯದಲ್ಲಿನ ನೀರು ಮಾತ್ರ ದಿನೇ ದಿನೆ ಪೋಲಾಗುತ್ತಿದೆ. ಸಮರ್ಪಕವಾಗಿ ನೀರು ಪೂರೈಸುವಂತೆ ಹಲವು ಭಾರಿ ಮಹಿಳೆಯರು ಪುರಸಭೆ ಜಮಾಯಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಸಹ ಇಲ್ಲಿಯವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಪೈಪ್‌ಲೈನ್ ಅಳವಡಿಕೆ: ಕಳೆದ ವರ್ಷವೇ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಗೆ ಪಟ್ಟಣದಲ್ಲೆಡೆ ಕೆಎಂಆರ್‌ಪಿ ಯೋಜನೆಯಡಿ ಪೈಪ್‌ಲೈನ್ ಅಳವಡಿಸಿದೆ. ಮನೆಗಳಿಗೆಲ್ಲ ಮೀಟರ್‌ಗಳನ್ನು ಅಳವಡಿಸಲಾಗಿದೆ. ಕನಿಷ್ಠ ವಾರಕ್ಕೊಮ್ಮೆಯಾದರೂ ನೀರು ಬರುತ್ತಿಲ್ಲ. ಕುಡಿಯುವ ನೀರಿನ ಪೈಪ್‌ಗೆ ಒಳಚರಂಡಿ ನೀರು ಸೇರುತ್ತಿರುವುದರಿಂದ ಬರುವ ನೀರು ಸಹ ಕಲುಷಿತವಾಗಿರುತ್ತದೆ. ಅದನ್ನು ಜನರು ಕುಡಿದರೆ ಸಾಂಕ್ರಾಮಿಕ ರೋಗ ಕಟ್ಟಿಟ್ಟ ಬುತ್ತಿ. ಜಲಾಶಯದ ಬಳಿ ಪಿಲ್ಟರ್ ಬೆಡ್ ಸಹ ದುರಸ್ತಿಪಡಿಸಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಕೆಎಂಆರ್‌ಪಿ ಯೋಜನೆ ಅಧಿಕಾರಿಗಳಿಗೆ ತಿಳಿದಿಲ್ಲ: ಕೆಎಂಆರ್‌ಪಿ ಯೋಜನೆಯ 24/7 ಎನ್ನುವುದಕ್ಕೆ ಪುರಸಭೆ ಅಧಿಕಾರಿಗಳಿಗೆ ಅರ್ಥವೇ ತಿಳಿದಿಲ್ಲ ಎನ್ನುವಂತಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, 24/7 ಕೆಎಂಆರ್‌ಪಿ ಯೋಜನೆಯ ಟೆಂಡರ್ ಪಡೆದವರು ಇನ್ನೂ ನಮಗೆ ವರ್ಗಾಯಿಸಿಲ್ಲ, ಕಾಮಗಾರಿಯೂ ಸಹ ಇನ್ನೂ ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ, ಹೆಚ್ಚುವರಿಯಾಗಿ 8.50 ಕೋಟಿ ರೂ. ಅನುದಾನ ಸಹ ಬಂದಿದೆ. ಅದನ್ನು ಸಹ ಕೆಎಂಆರ್‌ಪಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುವುದು. ಅಲ್ಲಿಯವರೆವಿಗೂ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ಸಾಮಾನ್ಯವಾಗಿದೆ ಎಂಬ ಉತ್ತರ ಅಧಿಕಾರಿಗಳಿಂದ ಕೇಳಿಬರುತ್ತಿದೆ.