ಈಗಾಗಲೇ ಹಲವು ಸಿನಿಮಾಗಳು ತಮ್ಮ ಕಥೆ ಮೂಲಕ ಸಾರ್ವಜನಿಕರಿಗೆ ತಿಳಿ ಹೇಳುವ, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿವೆ. ಸಮಾಜದಲ್ಲಿ ನಡೆಯುತ್ತಿರುವ ಹಲವು ಅಂಶಗಳನ್ನು ಬಿಂಬಿಸಿವೆ. ಈಗ ಹೊಸ ಸಿನಿಮಾವೊಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳಲು ಬರುತ್ತಿದೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರುವುದು ಈ ವಾರ ತೆರೆಕಾಣುತ್ತಿರುವ ಸಿನಿಮಾ ಬಗ್ಗೆ. ಹೌದು, “ಸಾರ್ವಜನಿಕರಲ್ಲಿ ವಿನಂತಿ’ ಎಂಬ ಚಿತ್ರವೊಂದು ಇಂದು ತೆರೆಕಾಣುತ್ತಿದೆ. ಚಿತ್ರದಲ್ಲಿ ಒಂದಷ್ಟು ಸಾಮಾಜಿಕ ಕಾಳಜಿ ಇರುವ ಅಂಶಗಳನ್ನು ಹೇಳಲಾಗಿದೆಯಂತೆ. ಮುಖ್ಯವಾಗಿ ಸಾರ್ವಜನಿಕರು ಪೊಲೀಸರ ಜೊತೆ ಕೈ ಜೋಡಿಸಿದಾಗ ಅಪರಾಧವನ್ನು ತಡೆಗಟ್ಟಬಹುದು ಎಂಬ ಅಂಶವನ್ನು ಹೇಳಲಾಗಿದೆ. ಜೊತೆಗೆ ನಮ್ಮ ಮೊಬೈಲ್ ಅನ್ನು ಬೇರೆಯವರ ಕೈಗೆ ಕೊಟ್ಟಾಗ ಅದರಿಂದ ಏನೆಲ್ಲಾ ತೊಂದರೆಗಳಾಗುತ್ತದೆ, ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡಬೇಡಿ. ಅದನ್ನು ಸಂರಕ್ಷಿಸುವ ಹೊಣೆ ಪ್ರತಿಯೊಬ್ಬರ ನಾಗರಿಕರದ್ದು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಕೃಪಾ ಸಾಗರ್ ಈ ಚಿತ್ರದ ನಿರ್ದೇಶಕರು. ಕ್ರೈಮ್ ಥ್ರಿಲ್ಲರ್ ಕಥಾಹಂದರವೊಂದಿರುವ ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶಗಳು ಸಾಕಷ್ಟಿವೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರವನ್ನು ಉಮಾ ನಂಜುಂಡ ರಾವ್ ನಿರ್ಮಿಸಿದ್ದಾರೆ. ಚಿತ್ರದ ಡಬ್ಬಿಂಗ್ ಹಕ್ಕುಗಳು ತೆಲುಗು ಹಾಗೂ ತಮಿಳಿಗೆ ಮಾರಾಟವಾಗಿವೆಯಂತೆ. ಮದನ್ ನಾಯಕ, ಮೈಸೂರು ಮೂಲದ ಅಮೃತಾ ಕೆ. ನಾಯಕಿ. ಉಳಿದಂತೆ ಚಿತ್ರದಲ್ಲಿ ರಮೇಶ್ ಪಂಡಿತ್, ಮಂಡ್ಯ ರಮೇಶ್ ನಟಿಸಿದ್ದಾರೆ. ಚಿತ್ರಕ್ಕೆ ಅನಿಲ್ ಸಂಗೀತ ನೀಡಿದ್ದು, ಚಿತ್ರದ ಒಂದು ಹಾಡನ್ನು ಪೊಲೀಸ್ ಇಲಾಖೆಗೆ ಅರ್ಪಿಸಲಾಗಿದೆ. ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್ ಹಾಗೂ ಹೊಸ ಪ್ರತಿಭೆ ಚೇತನ್ ಸಾಹಿತ್ಯವಿದೆ. ಚಿತ್ರ ಸುಮಾರು 30ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಕಾಣುತ್ತಿದೆ.