ಬಳ್ಳಾರಿ/ಹೊಸಪೇಟೆ: ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುವುದು ಕಾಂಗ್ರೆಸ್‌ನವರ ನಾಟಕದ ಮಾತು. ಗಣಿಗಾರಿಕೆ ವಿರುದ್ಧ ಬೊಬ್ಬೆ ಹೊಡೆದು ನಮ್ಮದು ಸಮರ ಎಂದೆಲ್ಲ ಸುಳ್ಳು ಹೇಳಿ ಅಧಿಕಾರ ಪಡೆದ ಕಾಂಗ್ರೆಸ್ ಆಮೇಲೆ ಮಾಡಿದ್ದು ಏನು ಎಂಬುದು ರಾಜ್ಯ, ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ’ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಬದ್ಧ ವೈರಿಗಳಂತೆ ಇದ್ದವರು ಈಗ ಮೈತ್ರಿ ಮಾಡಿಕೊಂಡಿದ್ದಾರೆ. ಅಂತಹವರ ಮಾತಿಗೆಲ್ಲ ಬೆಲೆ ಇದೆಯೇ ಎಂದು ತಿರುಗೇಟು ನೀಡಿದರು. ಬಳ್ಳಾರಿ ಜಿಲ್ಲೆಗೆ ರಾಮುಲು ಕೊಡುಗೆ ಏನೂ ಇಲ್ಲ ಎನ್ನುವ ಕಾಂಗ್ರೆಸ್ ಮುಖಂಡರು ಸಂಸದರ ಅನುದಾನ ಬಳಕೆಯಲ್ಲಿ ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆ ನಂ.1 ಸ್ಥಾನದಲ್ಲಿದೆ ಎಂಬುದನ್ನು ಮೊದಲು ಅರಿತುಕೊಳ್ಳಲಿ ಎಂದರು.
ಚುನಾವಣಾ ಆಯೋಗಕ್ಕೆ ದೂರು:ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಪರ ಮತ ಹಾಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ಜಿಲ್ಲಾಡಳಿತದ ಮೇಲೆ ರಾಜ್ಯ ಮೈತ್ರಿ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ ಬಿ.ಶ್ರೀರಾಮುಲು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.
ಆಡಳಿತ ಯಂತ್ರ ದುರ್ಬಳಕೆ: ಜಲಸಂಪನ್ಮೂಲ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವುಕುಮಾರ್ ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಸರ್ಕಾರಿ ಅಧಿಕಾರಿಗಳಿಗೆ ಇಂತಿಷ್ಟು ಮತ ಹಾಕಿಸುವಂತೆ ಟಾರ್ಗೆಟ್ ನೀಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಜೆ. ಶಾಂತಾ ಪರ ರೋಡ್ ಶೋ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಮೆಚ್ಚಿಸಲು ಡಿಕೆಶಿ ಇಂತಹದ್ದೊಂದು ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಡಿಕೆಶಿ ಅವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಡಿಕೆಶಿ ಅವರ ವಿರುದ್ಧ ಅವರ ಪಕ್ಷದವರೇ ಆದ ರಮೇಶ್ ಜಾರಕಿಹೊಳಿ ವಾಗ್ಧಾಳಿ ನಡೆಸುತ್ತಿ ದ್ದಾರೆ. ಅವರೊಳಗೆ ಕಚ್ಚಾಟವೇ ಜೋರಾಗಿ ನಡೆ ದಿದೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಹುಟ್ಟು ಹಾಕಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಯಾರಿಗೆ ಬೇಕಿತ್ತು? ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.