Advertisement

ಪ್ರತಿಪಕ್ಷಗಳ ಗೈರಿನಲ್ಲಿ ವರದಿ ಅಂತಿಮ!

08:06 AM Nov 08, 2017 | Team Udayavani |

ಬೆಂಗಳೂರು: ವಿದ್ಯುತ್‌ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ವಿಚಾರಣೆ ಪೂರ್ಣಗೊಳಿಸಿರುವ ಸದನ ಸಮಿತಿ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರ ಗೈರು ಹಾಜರಿಯಲ್ಲಿ ತನ್ನ ವರದಿ ಅಂತಿಮಗೊಳಿಸಿದೆ.

Advertisement

ಸದನ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮಂಗಳವಾರ ಸಮಿತಿಯ ಕಾಂಗ್ರೆಸ್‌ ಸದಸ್ಯರಾದ ಕೆ.ಎನ್‌.ರಾಜಣ್ಣ, ಪಿ.ಎಂ.ನರೇಂದ್ರಸ್ವಾಮಿ ಮತ್ತು ಶಿವಾನಂದ ಪಾಟೀಲ್‌ ಅವರು ವಿದ್ಯುತ್‌ ಖರೀದಿ ಅಕ್ರಮಕ್ಕೆ ಸಂಬಂಧಿಸಿದ ವರದಿ ಅಂತಿಮಗೊಳಿಸಿ ಸಹಿ ಹಾಕಿದ್ದಾರೆ. ವಿದ್ಯುತ್‌ ಖರೀದಿ ಅಕ್ರಮ ಕುರಿತ ವರದಿ ಅಂತಿಮ ಗೊಳಿಸಲು ಸಮಿತಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ಅ. 30ರಂದು ಸಭೆ ಕರೆದಿದ್ದರು. ಆದರೆ, ಈ ಸಭೆಗೆ ಜೆಡಿಎಸ್‌, ಬಿಜೆಪಿ ಸದಸ್ಯರು ಕಾರಣಗಳನ್ನು ನೀಡಿ ಗೈರು ಹಾಜರಾಗಿದ್ದರು. ಹೀಗಾಗಿ ಅಂದಿನ ಸಭೆಯಲ್ಲಿ ವರದಿ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಮಂಗಳವಾರ ಸಮಿತಿಯ ಅಂತಿಮ ಸಭೆ ಕರೆದಿದ್ದ ಸಚಿವರು, ಈ ಕುರಿತು ಎಲ್ಲಾ ಸದಸ್ಯರಿಗೆ ಮಾಹಿತಿ ಕಳುಹಿಸಿದ್ದರು. ವರದಿ
ಅಂತಿಮಗೊಳಿಸಿ ಸಹಿ ಹಾಕುವಂತೆ ಕೋರಿದ್ದರು.

ಪ್ರತಿಪಕ್ಷ ಸದಸ್ಯರು ಗೈರು: ಮಂಗಳವಾರ ನಡೆದ ಸಭೆಗೆ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ನ ಮೂವರು ಸದಸ್ಯರು
ಮಾತ್ರ ಹಾಜರಿದ್ದು, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಗೈರು ಹಾಜರಾಗಿದ್ದರು. ಈ ಪೈಕಿ ಜೆಡಿಎಸ್‌ ಸದಸ್ಯರಾಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡ ಅವರು ಪತ್ರ ಕಳುಹಿಸಿ, ಕಳೆದ ಜೂ.13 ಮತ್ತು ಜೂ. 20ರಂದು ನಡೆದ ಸಭೆಗಳಲ್ಲಿ ತಾವು ಅನೇಕ ಸ್ಪಷ್ಟೀಕರಣ ಮತ್ತು ಅಭಿಪ್ರಾಯಗಳನ್ನು ತಿಳಿಸಿದ್ದೇವೆ. ಇದುವೇ ನಮ್ಮ ಅಭಿಪ್ರಾಯ ಎಂದು ಹೇಳಿದ್ದರು. ಆದರೆ, ಬಿಜೆಪಿ ಸದಸ್ಯರಾದ ಬಸವರಾಜ ಬೊಮ್ಮಾಯಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಯಾವುದೇ ಮಾಹಿತಿ ನೀಡಿರಲಿಲ್ಲ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ, ವಿದ್ಯುತ್‌ ಖರೀದಿ ಹಗರಣಕ್ಕೆ ಸಂಬಂಧಿಸಿದ ಸದನ
ಸಮಿತಿಯ ಕೊನೆಯ ಸಭೆ ಮುಗಿಸಿದ್ದೇನೆ. ಈ ಹಿಂದಿನ ಸಭೆಗಳಲ್ಲಿ ಎಲ್ಲಾ ಸದಸ್ಯರೂ ಅಭಿಪ್ರಾಯ, ವಿವರಣೆಗಳನ್ನು ತಿಳಿಸಿದ್ದಾರೆ. ಜತೆಗೆ ಅನೇಕ ಪತ್ರಗಳನ್ನೂ ಬರೆದಿದ್ದಾರೆ. ಅವೆಲ್ಲವನ್ನೂ ದಾಖಲೆಗೆ ತೆಗೆದುಕೊಳ್ಳಲಾಗಿದ್ದು, ಸದಸ್ಯರು ನೀಡಿದ್ದ ಅಭಿಪ್ರಾಯಗಳನ್ನು ವರದಿಯಲ್ಲಿ ಸೇರಿಸಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದರು. 

21 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟ
2008ರಿಂದ 20013ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನೇ ವಿದ್ಯುತ್‌ ಖರೀದಿ ಅಕ್ರಮದ ಕುರಿತ ವರದಿಯಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 21 ಸಾವಿರ ಕೋಟಿ ರೂ. ಹೆಚ್ಚು ನಷ್ಟವಾಗಿದೆ ಎಂದು ವರದಿ ಹೇಳಿರುವುದಾಗಿ ತಿಳಿದುಬಂದಿದೆ. ಆದರೆ, ವರದಿಯಲ್ಲಿ ಯಾರ ಬಗ್ಗೆಯೂ ನೇರವಾಗಿ ಆರೋಪ ಮಾಡಿಲ್ಲ. ಸಂಪುಟ ಸಭೆಯ ತೀರ್ಮಾನವನ್ನು ಪ್ರಸ್ತಾಪಿಸಲಾಗಿದೆ.

ಡಿಕೆಶಿ ಟಾಂಗ್‌
“ಕೆಲವರು ವರದಿ ಕೊಟ್ಟರೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗಿದ್ದರೆ ಈ ಹಿಂದೆ ಸಮಿತಿ ಸಭೆಯಲ್ಲಿ ವರದಿ, ಮಾಹಿತಿ, ದಾಖಲೆ, ಅಭಿಪ್ರಾಯಗಳನ್ನು ಏಕೆ ಕೊಟ್ಟರು’ ಎಂದು ಪ್ರಶ್ನಿಸುವ ಮೂಲಕ ಸಚಿವ ಡಿಕೆಶಿ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next