Advertisement

ಪಾಳು ಬಿದ್ದಿದ್ದ ಮಕ್ಕಳ ಪಾರ್ಕ್‌ಗೆ ಹೊಸ ರೂಪ

01:32 AM May 05, 2019 | Team Udayavani |

ಮಹಾನಗರ: ಪಾಂಡೇಶ್ವರ ಪೊಲೀಸ್‌ಲೇನ್‌ನಲ್ಲಿ ಪಾಳು ಬಿದ್ದಿದ್ದ ಮಕ್ಕಳ ಪಾರ್ಕ್‌ ಇದೀಗ ನವೀಕರಣಗೊಂಡು ಮಕ್ಕಳನ್ನು ಆಕರ್ಷಿಸುತ್ತಿದೆ. ರಾಮಕೃಷ್ಣ ಮಠದ ಸ್ವಚ್ಛ ಮಂಗಳೂರು ಸಹಯೋಗ ದಲ್ಲಿ ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ ನ ನವೀಕರಣ ಕಾರ್ಯ ನಡೆದಿದ್ದು, ಮೇ 5ರಂದು ಉದ್ಘಾಟನೆಗೊಳ್ಳಲಿದೆ.

Advertisement

ಪಾರ್ಕ್‌ನ ಒಳಭಾಗದಲ್ಲಿ ಹುಲ್ಲು, ಗಿಡಗಂಟಿ ಬೆಳೆದು ಮಕ್ಕಳಿಗೆ ಆಟವಾಡಲಾಗದ ಸ್ಥಿತಿಯಲ್ಲಿ ಈ ಪಾರ್ಕ್‌ ಇತ್ತು. ಅಲ್ಲದೆ, ಆಟಿಕೆಗಳೆಲ್ಲ ತುಕ್ಕು ಹಿಡಿದು ಮುರಿದು ಹೋಗಿದ್ದವು. ಇದರಿಂದ ಪಾರ್ಕ್‌ನಲ್ಲಿ ಕುಡುಕರು, ಮಾನಸಿಕ ಅಸ್ವಸ್ಥರು ಮಲಗಲಷ್ಟೇ ಪಾರ್ಕ್‌ ಸೀಮಿತವಾಗಿತ್ತು. ಆದರೆ, ನಶಿಸಿ ಹೋಗಲಿದ್ದ ಪಾರ್ಕ್‌ನ್ನು ರಾಮಕೃಷ್ಣ ಮಠದ ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ಇದೀಗ ನವೀಕರಣಗೊಳಿಸಿದ್ದು, ಮಕ್ಕಳ ಬೇಸಗೆ ರಜೆಗೆ ಹೊಸ ಕಳೆ ಬರಲಿದೆ.

ಮಕ್ಕಳ ಸ್ನೇಹಿಯಾಗಿ ಪಾರ್ಕ್‌ ನವೀಕರಣ
ಪಾರ್ಕ್‌ನ ಒಳ ಪ್ರವೇಶಿಸುವ ಪ್ರವೇಶ ದ್ವಾರ ತೀರಾ ಚಿಕ್ಕದಾಗಿತ್ತು. ಈ ದ್ವಾರ ವನ್ನು ಬದಲಿಸಿ ಸರಾಗವಾಗಿ ಪಾರ್ಕ್‌ ಪ್ರವೇಶಿಸುವಂತೆ ಪ್ರವೇಶದ್ವಾರವನ್ನು ವ್ಯವಸ್ಥೆ ಗೊಳಿಸಲಾಗಿದೆ.

ಮುರಿದು ಹೋಗಿದ್ದ ಜಾರುಬಂಡಿ, ಇತರ ಆಟಿಕೆ ಗಳನ್ನು ತೆಗೆದು ಬದಲಿ ಆಟಿಕೆಗಳನ್ನು ಹಾಕಲಾಗಿದೆ. ಆದಿತತ್ವ ಆರ್ಟ್ಸ್ ಪಾರ್ಕ್‌ಗೆ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸುವ ಕೆಲಸ ನಿರ್ವಹಿಸಿದೆ. 300ಕ್ಕೂ ಹೆಚ್ಚು ಮನೆಗಳು ಇಲ್ಲಿದ್ದು, ಮಕ್ಕಳ ಸ್ನೇಹಿ ಪಾರ್ಕ್‌ ಆಗಿ ನವೀಕರಣಗೊಳಿಸಲಾಗಿದೆ. ಪರಿಸರ ಸ್ವಚ್ಛತೆಯನ್ನು ಸಾರುವ ಸಂದೇಶಗಳನ್ನೂ ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಪಾರ್ಕ್‌ನಲ್ಲಿ ಮಾಡಲಾಗಿದೆ.

ಇಂದು ಉದ್ಘಾಟನೆ
ನವೀಕರಣಗೊಂಡ ಮಕ್ಕಳ ಪಾರ್ಕ್‌ ಮೇ 5ರಂದು ಬೆಳಗ್ಗೆ 7.30ಕ್ಕೆ ಪಾಂಡೇಶ್ವರ ಪೊಲೀಸ್‌ ಲೇನ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜೀ ಅವರು ಉದ್ಘಾಟಿಸಲಿದ್ದಾರೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next