Advertisement

ಬಸವ ನಾಡಲ್ಲಿ ಧರ್ಮ ದುಂದುಬಿ

01:42 PM Dec 11, 2017 | |

ವಿಜಯಪುರ: ಲಿಂಗಾಯತ ಧರ್ಮದ ಸಸಿಯನ್ನು ನಾವು ನೆಟ್ಟು, ಅದು ಹಣ್ಣು ನೀಡಿದಾಗ ನಮ್ಮನ್ನು ಟೀಕಿಸುವ ನಮ್ಮೆಲ್ಲ
ಅಣ್ಣ-ತಮ್ಮಂದಿರಿಗೆ ಹಂಚೋಣ. ಆಗ ಅವರೆಲ್ಲ ನಮ್ಮ ಹಿಂದೆ ಬರುತ್ತಾರೆ ಎಂದು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ನೇತೃತ್ವ ವಹಿಸಿರುವ ರಾಷ್ಟ್ರೀಯ ಬಸವಸೇನೆಯ ರಾಷ್ಟ್ರಾಧ್ಯಕ್ಷ, ಸಚಿವ ವಿನಯ ಕುಲಕರ್ಣಿ ಹೇಳಿದರು.

Advertisement

ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಲಿಂಗಾಯತ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಯಾರ ವಿರುದ್ಧವೂ ಅಲ್ಲ. ಯಾವುದೇ ರಾಜಕೀಯ ಪಕ್ಷದ ವಿರೋಧವಲ್ಲ. ನಮ್ಮ ಹಕ್ಕುಗಳನ್ನು ಪಡೆಯಲು ಲಿಂಗಾಯತ ಪ್ರತ್ಯೇಕ ಸ್ವತಂತ್ರ ಧರ್ಮದ ಮಾನ್ಯತೆಯ ಹೋರಾಟ ನಡೆಸಿದ್ದೇವೆ. ನಾವು ನಡೆಸಿರುವ ಈ ಹೋರಾಟದ ಸಸಿ ಈಗಷ್ಟೇ ಚಿಗುರುತ್ತಿದೆ. ಸ್ವತಂತ್ರ ಧರ್ಮ ಮಾನ್ಯತೆ ಸಿಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. 

ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತ ನಂತರ ನಮ್ಮನ್ನು ಟೀಕಿಸುವ, ನಮ್ಮ ಹೋರಾಟವನ್ನು ವಿರೋಧಿಸುವ ನಮ್ಮ ಎಲ್ಲ ಅಣ್ಣ-ತಮ್ಮಂದಿರು ತಾವೇ ನಮ್ಮೊಂದಿಗೆ ಬರುತ್ತಾರೆ. ನಾವೆಲ್ಲ ಮುನ್ನುಗ್ಗೊಣ ಎಂದರು.

ಜನತೆಯ ಒಳಿತಿಗೆ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ದೊರಕಿಸಿ ಕೊಡಲು, ನಮ್ಮ ಲಿಂಗಾಯತ ಧರ್ಮದ ಭವಿಷ್ಯದ ಪೀಳಿಗೆಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಹಗಲಿರುಳು ಶ್ರಮಿಸುತ್ತಿರುವ ಸಚಿವ ಡಾ| ಎಂ.ಬಿ. ಪಾಟೀಲ, ಡಾ| ಎಸ್‌.ಎಂ. ಜಾಮದಾರ ಅವರ ಪರಿಶ್ರಮಕ್ಕೆ ನಾನು ಋಣಿ ಆಗಿರಬೇಕಿದೆ. ನಮ್ಮ ಭವಿಷ್ಯದ ಜನರ ಒಳಿತಿಗೆ ಹೋರಾಡುತ್ತಿರುವ ಡಾ|ಎಂ.ಬಿ.ಪಾಟೀಲ ಅವರನ್ನು ಸೋಲಿಸಲು ಕೆಲವರು ಹುನ್ನಾರ ನಡೆಸಿದ್ದಾರೆ. ಆದರೆ ಇಂಥ ಹುನ್ನಾರಗಳಿಗೆ ಡಾ|ಎಂ.ಬಿ.ಪಾಟೀಲ ಅವರು ಹೆದರುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.

ಪ್ರಾಣ ಹೋದರೂ ಹೋರಾಟ ಬಿಡಲ್ಲ 
ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವ ನಾವು ನಮ್ಮ ಪ್ರಾಣ
ಹೋದರೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕೇ ಸಿಗುತ್ತದೆ. ಇದರಲ್ಲಿ ಅನುಮಾನವಿಲ್ಲ ಎಂದು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದ ಮುಂಚೂಣಿಯಲ್ಲಿರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಸಿಕ್ಕೇ ಸಿಗುತ್ತದೆ. ಕೆಲವರು ನಮ್ಮ ಹೋರಾಟವನ್ನು ಟೀಕಿಸುವುದಕ್ಕಾಗಿ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದೀರಿ. ಈಗ ನಿಮಗೆ ಧರ್ಮದ ನೆನಪಾಗಿದೆ ಎಂದೆಲ್ಲ ಟೀಕಿಸುವ ಮೂಲಕ ಹೋರಾಟದಿಂದೆ ಹಿಂದೆ ಸರಿಸುವ ಹುನ್ನಾರ ನಡೆಸಿದ್ದು, ಇಂಥದ್ದಕ್ಕೆಲ್ಲ ನಾವು ಅಂಜುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿರುವ ಉಮೇಶ ಕತ್ತಿ ಸೇರಿದಂತೆ ಅನೇಕ ನಾಯಕರು ಇದೀಗ ಸತ್ಯದ ಹೋರಾಟದಲ್ಲಿ ನಡೆದಿರುವ ನಮ್ಮ ಹೋರಾಟದ ಕುರಿತು ಮನವರಿಕೆ ಆಗಿದ್ದು, ಇಂಥ ಸಾವಿರಾರು ನಾಯಕರು ಮಾನಸಿಕವಾಗಿ ನಮ್ಮ ಜೊತೆಗಿದ್ದಾರೆ. ಇನ್ನೂ ಸಾವಿರಾರು ಜನರು ನಮ್ಮೊಂದಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಲಿಂಗಾಯತ ಹೋರಾಟಕ್ಕೆ ವಿರೋಧ ಬೇಡ: ಜಾಮದಾರ ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ನಮಾನಕ್ಕಾಗಿ
ನಡೆದಿರುವ ಹೋರಾಟಕ್ಕೆ ವಿರೋ ಧಿಸುವವರು ಕೂಡಲೇ ತಮ್ಮ ವಿರೋಧವನ್ನು ಬಿಡಬೇಕು. ನಮ್ಮ ಜೊತೆ ಕೈ
ಜೋಡಿಸಬೇಕು ಎಂದು ನಿವೃತ್ತ ಐಎಎಸ್‌ ಅಧಿಕಾರಿ ಡಾ| ಎಸ್‌.ಎಂ. ಜಾಮದಾರ ಮನವಿ ಮಾಡಿದರು.

ನಗರದಲ್ಲಿ ನಡೆದ ಲಿಂಗಾಯತ ರ್ಯಾಲಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಅಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಸಚಿವ, ಶಾಸಕರಿಂದ ಒಕ್ಕೋರಲ ಬೆಂಬಲ ವ್ಯಕ್ತವಾಗಿದೆ. ಆದರೆ ಕರ್ನಾಟಕದಲ್ಲಿ ನಮ್ಮ ಹೋರಾಟಕ್ಕೆ ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನಡೆದಿರುವ ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ ಎಂದರು.

ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ವಿಶ್ವಸಂಸ್ಥೆ ಮಾನ್ಯ ಮಾಡಿರುವ ಮಾನವ ಹಕ್ಕುಗಳ ಅಂಶಗಳು ಅಡಕವಾಗಿವೆ. ಮನುಕುಲದ ಎಲ್ಲ ಅಭ್ಯುದಯದ ಆಶಯಗಳನ್ನು ಹೊಂದಿರುವ ಲಿಂಗಾಯತ ಧರ್ಮ 12ನೇ ಶತಮಾನದಲ್ಲಿ ಬಸವಣ್ಣ ಅವರಿಂದ ಸ್ಥಾಪನೆಗೊಂಡ ಬಳಿಕ ಹದಿನೆಂಟನೆ ಶತಮಾನದವರೆಗೂ ಸ್ವತಂತ್ರ ಧರ್ಮವಾಗಿತ್ತು. ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ. ಅವೈದಿಕ ಧರ್ಮವಾಗಿದೆ. ಹಾಗಂತ ನಾವು ಹಿಂದೂ ಧರ್ಮದ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದರು. 

ಲಿಂಗಾಯತ ಕರ್ನಾಟಕದಲ್ಲಿ ಜನ್ಮತಾಳಿದ ಧರ್ಮ: ಸಿದ್ಧರಾಮ ಶ್ರೀ ವಿಜಯಪುರ: ಭಾರತೀಯ ಧರ್ಮಗಳಲ್ಲಿ
ವೈದಿಕ ಹಾಗೂ ಅವೈದಿಕತೆ ಆಚರಣೆಯ ಎರಡು ಸ್ವರೂಪದ ಧರ್ಮಗಳಿದ್ದು, ಕರ್ನಾಟಕದಲ್ಲಿ ಜನ್ಮತಾಳಿದ ಪ್ರಥಮ ಧರ್ಮ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಕನ್ನಡ ನೆಲದ ಧರ್ಮ ಎಂದು ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಶ್ರೀಗಳು ಹೇಳಿದರು.

ನಗರದಲ್ಲಿ ಪ್ರತ್ಯೇಕ ಧರ್ಮ ರ್ಯಾಲಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ಅವೈದಿಕ ಸ್ವಂತಂತ್ರ ಧರ್ಮವಾಗಿದೆ. ವೈದಿಕ ಹಿಂದೂ ಧರ್ಮ ಭಾಗವಾಗಿರುವವರು ವೀರಶೈವರು. ಲಿಂಗಾಯತ, ಬೌದ್ಧ, ಸಿಖ್‌ ಅವೈದಿಕ ಧರ್ಮಗಳು. ವರ್ಣಭೇದ, ಲಿಂಗ ಭೇದ, ವರ್ಗ ಭೇದ ಇಲ್ಲದ ಧರ್ಮವೇ ಲಿಂಗಾಯತ. 

ಕರ್ನಾಟಕದಲ್ಲಿ ಜನ್ಮತಾಳಿದ ಪ್ರಥಮ ಧರ್ಮ ಲಿಂಗಾಯತ ಧರ್ಮ, ಲಿಂಗಾಯತ ಧರ್ಮ ಕನ್ನಡ ನೆಲದ ಧರ್ಮ. ಕಾಲಾಂತರದಲ್ಲಿ ಅಣ್ಣ ಬಸವಣ್ಣನವರನ್ನು ವೀರಶೈವರು ಅನುಸರಿಸಿದರು. ಆದರೆ ಪೂರ್ಣ ಪ್ರಮಾಣದಲ್ಲಿ ಲಿಂಗಾಯತ ಧರ್ಮದ ತತ್ವಗಳನ್ನು ಬಿಡಲಿಲ್ಲ, ಹಿಡಿಯಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿಗದಿದ್ದರೆ ಉದ್ಯೋಗ, ಶೈಕ್ಷಣಿಕ ಅವಕಾಶಗಳು ವಿದ್ಯಾರ್ಥಿಗಳಿಗೆ ಲಭಿಸುವುದಿಲ್ಲ. ಹೀಗಾಗಿ ಮುಂದಿನ ಪೀಳಿಗೆ ನಮಗೆ ಶಪಿಸುತ್ತದೆ ಎಂದರು 

ವೀರಶೈವ ಎಂದು ಹೇಳಿಕೊಂಡು ಹೊರಟಿರುವ ಪಂಚಪೀಠದ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿ ಹೊತ್ತು ಮೆರೆಸಿದವರೇ ನಾವು. ಅವರ ಬಗ್ಗೆ ನಮಗೆ ಗೌರವವಿದೆ. ಅವರೂ ನಮ್ಮವರೇ. ಲಿಂಗಾಯತರಾದ ನಾವು ಪ್ರತ್ಯೇಕ ಧರ್ಮದವರು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ. ಅದಕ್ಕಾಗಿಯೇ ಜನಜಾಗೃತಿ ಮೂಡಿಸುವ ಕೆಲಸ ನಡೆಸಿದ್ದೇವೆ. ನಮ್ಮ ಈ ಪ್ರಯತ್ನದಲ್ಲಿ ನಾವು ಯಶಸ್ವಿ ಆಗುತ್ತೇವೆ. ಆನುಮಾನ ಬೇಡ.  ವಿನಯ ಕುಲಕರ್ಣಿ, ರಾಷ್ಟ್ರೀಯ ಬಸವಸೇನೆಯ ರಾಷ್ಟ್ರಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next