Advertisement

ಇನ್ನಷ್ಟು ಗಟ್ಟಿಯಾಗಲಿ ಭಾರತ-ರಷ್ಯಾ ನಡುವಿನ ಸಂಬಂಧ

12:52 AM Dec 07, 2021 | Team Udayavani |

ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಕಾಲದಿಂದಲೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ. ಇಂದಿಗೂ ಭಾರತದ ಪರಮಾಪ್ತ ದೇಶ ಎಂಬ ಸಾಲಿನಲ್ಲಿ ಮೊದಲಿಗೆ ನಿಲ್ಲುವುದು ರಷ್ಯಾ ದೇಶವೇ. ಈ ವರ್ಷ ಜಿನೇವಾ ಸಮ್ಮೇಳನ ಬಿಟ್ಟರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ಬೇರೆ ದೇಶಕ್ಕೆ ಹೋಗಿಯೇ ಇಲ್ಲ. ಆದರೆ ಭಾರತದ ಜತೆಗಿನ ದ್ವಿಪಕ್ಷೀಯ ಮಾತುಕತೆಗಾಗಿ ವ್ಲಾದಿಮಿರ್‌ ಪುತಿನ್‌ ಭಾರತಕ್ಕೆ ಬಂದಿಳಿದಿದ್ದಾರೆ.

Advertisement

ಅಂದ ಹಾಗೆ ಇದು ಕೇವಲ ಒಂದು ದಿನದ ಭೇಟಿ. ಪುತಿನ್‌ ಅವರಿಗಿಂತಲೂ ಮುಂಚೆಯೇ ಬಂದಿರುವ ಅಲ್ಲಿನ ರಕ್ಷಣ ಸಚಿವ ಸಗೇì ಶಿಯಾಗು ಅವರು ಸೋಮವಾರ ಇಲ್ಲಿನ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗೆ ಮುಖಾಮುಖೀ ಚರ್ಚೆ ನಡೆಸಿದ್ದಾರೆ. ಜತೆಗೆ ಭಾರತದ ರಕ್ಷಣ ಪಡೆಗಳಿಗೆ ಬಲ ತುಂಬುವ ಎಕೆ-203 ರೈಫ‌ಲ್‌ ಒಪ್ಪಂದಕ್ಕೆ ಇವರಿಬ್ಬರೂ ಸಹಿ ಹಾಕಿದ್ದಾರೆ. ಈ ರೈಫ‌ಲ್‌ ಅನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಲಾಗುತ್ತದೆ. ಉತ್ತರ ಪ್ರದೇಶದ ಅಮೇಠಿಯಲ್ಲಿ ರಷ್ಯಾ ಮತ್ತು ಭಾರತದ ಜಂಟಿ ಸಹಭಾಗಿತ್ವದಲ್ಲಿ ಇವುಗಳನ್ನು ಉತ್ಪಾದಿಸಲಾಗುತ್ತದೆ. ಹಾಗೆಯೇ 2031ರ ವರೆಗೂ ಮಿಲಿಟರಿ ತಂತ್ರಜ್ಞಾನದ ಸಹಾಯವನ್ನೂ ರಷ್ಯಾ ಭಾರತಕ್ಕೆ ನೀಡಲಿದೆ. ಹಾಗೆಯೇ ಎರಡೂ ದೇಶದ ರಕ್ಷಣ ಸಚಿವರು ಎಸ್‌-400 ಕ್ಷಿಪಣಿ ತಂತ್ರಜ್ಞಾನದ ಕುರಿತಂತೆಯೂ ಚರ್ಚೆ ನಡೆಸಿದ್ದಾರೆ.

ಈ ಹಿಂದೆ ಭಾರತದ ಕಷ್ಟದ ಸಂದರ್ಭಗಳಲ್ಲಿ ನೆರವಾಗಿದ್ದು ರಷ್ಯಾ ದೇಶವೇ. ಇತ್ತೀಚಿನ ದಿನಗಳಲ್ಲಿ ಮಾತ್ರ ಅಮೆರಿಕದ ಜತೆಗಿನ ಭಾರತದ ಸಂಬಂಧ ಅಷ್ಟಕ್ಕಷ್ಟೆ ಎಂಬಂತೆಯೇ ಇತ್ತು. ಅದರಲ್ಲೂ 1971ರಲ್ಲಿ ನಡೆದ ಭಾರತ- ಪಾಕಿಸ್ಥಾನದ ನಡುವಿನ ಯುದ್ಧದಲ್ಲಿ ರಷ್ಯಾ ಭಾರತಕ್ಕೆ ಬೇಕಾದ ಅಗತ್ಯ ರಕ್ಷಣ ಸಾಮಗ್ರಿಗಳನ್ನು ಕಳುಹಿಸಿ ನೆರವಾಗಿತ್ತು.

ಇದನ್ನೂ ಓದಿ:ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಈಗಲೂ ಭಾರತ ಒಂದು ಕಡೆ ಚೀನ ಮತ್ತೂಂದು ಕಡೆ ಪಾಕಿಸ್ಥಾನದ ಕಳ್ಳಾಟಗಳನ್ನು ಎದುರಿಸಿಕೊಂಡೇ ಬರುತ್ತಿದೆ. ಈಗ ದಶಕಗಳಷ್ಟು ಹಳೆಯದಾಗಿರುವ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿಕೊಂಡು ಯುದ್ಧ ಮಾಡಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಭಾರತಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ಅಗತ್ಯ ಹೆಚ್ಚಾಗಿಯೇ ಇದೆ. ಹೀಗಾಗಿ ಭಾರತ-ರಷ್ಯಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಲೇ ಇರಬೇಕು.

Advertisement

ಅಲ್ಲದೆ ಇಂದಿಗೂ ಭಾರತಕ್ಕೆ ಶೇ.60ರಿಂದ ಶೇ.70ರಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವುದು ರಷ್ಯಾ ದೇಶವೇ. ಅಲ್ಲದೆ ಸ್ಥಳೀಯವಾಗಿ ಶಸ್ತ್ರಾಸ್ತ್ರಗಳ ತಯಾರಿಕೆಗೂ ರಷ್ಯಾದಿಂದಲೇ ಪೂರಕ ಸಾಮಗ್ರಿಗಳು ಬೇಕೇಬೇಕು.

ಈ ಮಧ್ಯೆ ಭಾರತ ಎರಡು ದೇಶಗಳೊಂದಿಗೆ ಮಾತ್ರ ದ್ವಿಪಕ್ಷೀಯ ಔಪಚಾರಿಕ ಶೃಂಗವನ್ನು ಇರಿಸಿಕೊಂಡಿದೆ. ಒಂದು ಚೀನ, ಮಗದೊಂದು ರಷ್ಯಾ. ಇತ್ತೀಚಿನ ದಿನಗಳಲ್ಲಿ ಚೀನ ಗಡಿಯಲ್ಲಿ ಇಲ್ಲದ ಕಾಟ ನೀಡುತ್ತಿದೆ. ಹೀಗಾಗಿ ಭಾರತ ಚೀನಕ್ಕಿಂತ ರಷ್ಯಾವೇ ಹೆಚ್ಚು ಹತ್ತಿರವಾಗುತ್ತಿದೆ. ಇದಕ್ಕಿಂತ ಹೆಚ್ಚಾಗಿ ರಷ್ಯಾ ಜತೆಗಿನ ನಿಕಟ ಸಂಬಂಧ ಅಮೆರಿಕದ ಕೆಂಗಣ್ಣಿಗೂ ಕಾರಣವಾಗಬಹುದು. ಆದರೆ ಭಾರತ ಈ ಎರಡೂ ದೇಶಗಳ ಜತೆ ಸಮಾನ ಸ್ನೇಹಭಾಗಿತ್ವವನ್ನು ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ, ರಷ್ಯಾದಿಂದ ಎಸ್‌-400 ಕ್ಷಿಪಣಿ ತಂತ್ರಜ್ಞಾನ ಪಡೆಯಲು ಒಪ್ಪಂದ ಮಾಡಿಕೊಂಡರೂ ಅಮೆರಿಕದ ದಿಗ್ಬಂಧನದಿಂದ ಭಾರತ ಪಾರಾಗಿದೆ. ಒಂದು ರೀತಿಯಲ್ಲಿ ಅಮೆರಿಕ ಕೂಡ ಈ ಎರಡೂ ದೇಶಗಳ ನಿಕಟ ಸಂಬಂಧವನ್ನು ಒಪ್ಪಿಕೊಂಡಂತೆ ಆಗಿದೆ

Advertisement

Udayavani is now on Telegram. Click here to join our channel and stay updated with the latest news.

Next