Advertisement

ಅರಸು ಆಡಳಿತಾವಧಿ ಸ್ವರ್ಣಯುಗ

03:13 PM Aug 21, 2017 | |

ದಾವಣಗೆರೆ: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಆಡಳಿತಾವಧಿ ಅಕ್ಷರಶಃ ಸುವರ್ಣ ಯುಗ ಎಂದು ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ಬಣ್ಣಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸಂಯುಕ್ತಾಶ್ರಯದಲ್ಲಿ ಭಾನುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಡಿ. ದೇವರಾಜ ಅರಸುರವರ 102ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅರಸು ಅವರು ಅನೇಕ ನಿಮ್ನ ವರ್ಗದವರಿಗೆ ಧ್ವನಿಯಾಗಿ, ಸೌಲಭ್ಯ ಒದಗಿಸಿದವದು, ತಲೆ ಮೇಲೆ ಮಲಹೊರುವ, ಜೀತದಂತಹ ಅನೇಕ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಿದವರು ಎಂದರು.

Advertisement

ಅರಸುರವರು ಕ್ರಾಂತಿ ರಂಗ ಕಟ್ಟಿದವರು. ಅವರ ಬದುಕೇ ಮುಂದಿನ ಪೀಳಿಗೆಗೆ ಒಂದು ದಾರಿ ದೀಪ. ಹೆಣ್ಣು ಮಕ್ಕಳಿಗೆ ವಿಶೇಷ ಮೀಸಲಾತಿ, ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿದವರು ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಕಾನೂನು ಜಾರಿಗೆ ತರುವ ಮೂಲಕ ಅನೇಕರಿಗೆ ಭೂಮಿಯ ಒಡೆತನದ ಹಕ್ಕು ದೊರಕಿಸಿಕೊಟ್ಟವರು. ಒಕ್ಕಲು ಮನೆತನದ ಅರಸುರವರ ನುಡಿಗಳು, ಬದುಕು, ಸಾಧನೆ ನಮ್ಮೆಲ್ಲರಿಗೆ ಒಂದು ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಕಲ್ಲಮರಳ್ಳಿ, ಡಿ. ದೇವರಾಜ ಅರಸುರವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟವರು. ಹಿಂದುಳಿದ ಇಲಾಖೆ ಇರುವುದೇ ಅವರಿಂದಲೇ. ಹಿಂದುಳಿದ ವರ್ಗಗಳ ಸಮುದಾಯ ಬುಡಕಟ್ಟುಗಳ ಅನೇಕ ಲಕ್ಷಾಂತರ ಜನರ ಪಾಲಿಗೆ ಬಾಳಿಗೆ ಬೆಳಕಾದವರು. ದೇವರಾಜು ಅರಸು ಅವರ ಕಾರ್ಯ ಚಟುವಟಿಕೆಗಳನ್ನು ಇಂದಿನ ಯುವ ಜನಾಂಗದವರೆಲ್ಲರು ಮೈಗೂಡಿಸಿಕೊಂಡು ಸದೃಢ ಸಮಾಜವ ಕಟ್ಟಬೇಕು ಎಂದು ತಿಳಿಸಿದರು.

8 ವರ್ಷಗಳ ಕಾಲ ಮುಖ್ಯಮಂತ್ರಿ ಪದವಿಯಲ್ಲಿದ್ದ ಅರಸು ಎಲ್ಲಾ ಸಮುದಾಯಗಳನ್ನು ಮೇಲಕ್ಕೆ ಬರಲು ಕಾರಣರಾದವರು. ಅನೇಕ ಸಾಮಾಜಿಕ ಸುಧಾರಣಾ ಕಾರ್ಯಕ್ರಮ ಪ್ರಾರಂಭಿಸಿ, ಎಲ್ಲ ಸಮುದಾಯ, ಜನಾಂಗದವರು ಮುಂದೆ ಬರಲು ಕಾರಣರಾದವರು. ಸರ್ಕಾರಿ ನೌಕರರ ಸೇವಾವಧಿಯನ್ನು 55 ವರ್ಷದಿಂದ 58 ವರ್ಷದವರೆಗೆ ಮುಂದುವರೆಸಿ ಎಲ್ಲ ಸರ್ಕಾರಿ ನೌಕರರಿಗೂ ಒಳಿತನ್ನೆ ಬಯಸಿದವರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ನೆರವಾದವರು ಎಂದು ಸ್ಮರಿಸಿದರು.

ದೇವರಾಜ ಅರಸು ಅವರ ಆಡಳಿತದಲ್ಲಿ ಹೊಗಳಿಕೆಗಿಂತ ಜನರ ಟೀಕೆಗೆ ಕೆಂಗಣ್ಣಿಗೆ ಗುರಿಯಾಗಿದ್ದೇ ಹೆಚ್ಚು. ಆದರೂ, ಒಂದು ಹೆಜ್ಜೆ ಕೂಡಾ ಹಿಂದೆ ಸರಿಯದೆ ಅಭಿವೃದ್ಧಿ ಯೋಜನೆಗಳಿಗೆ ಶ್ರಮ ವಹಿಸಿದವರು. ಭಾರತದ ಪೃಥ್ವಿ ವಲ್ಲಭ ಮತ್ತು ಭಾರತದ ಎರಡನೇ ಚಾಣುಕ್ಯ…ಎಂದೇ ಕೀರ್ತಿ ಗಳಿಸಿದವರು. 20 ಅಂಶಗಳ ಕಾರ್ಯಕ್ರಮ ಪ್ರಾರಂಭಿಸಿದವರು. ಅಂಬೇಡ್ಕರ್‌ ಭಾರತದ ಕಣ್ಣಾದರೆ, ದೇವರಾಜುಅರಸು ಕರ್ನಾಟಕದ ಕಣ್ಣು ಎಂದು ಬಣ್ಣಿಸಿದರು. ಜಿಲ್ಲಾ ಪಂಚಾಯತ್‌ ಸದಸ್ಯರಾದ ಶೈಲಾ ಬಸವರಾಜ್‌, ಜಿ.ಸಿ. ನಿಂಗಪ್ಪ, ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಅಲೆಮಾರಿ ಸಂಘದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಎಸ್‌. ಆರ್‌. ರಂಗಪ್ಪ, 
ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ, ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next