ಉಡುಪಿ: ಶ್ರೀ ಪಲಿಮಾರು ಮಠದ 31ನೇ ಪೀಠಾಧಿಪತಿಯಾಗಿ ನಿಯೋಜನೆಗೊಳ್ಳಲಿರುವ ಕೊಡವೂರು ಕಂಬಳಕಟ್ಟದ ಶೈಲೇಶ್ ಉಪಾಧ್ಯಾಯ ಅವರ ಸನ್ಯಾಸಾಶ್ರಮ ಸ್ವೀಕಾರದ ಪೂರ್ವಭಾವಿ ಪ್ರಕ್ರಿಯೆಗಳು ಅಕ್ಷಯ ತೃತೀಯಾದಂದು ಆರಂಭಗೊಂಡಿವೆ.
ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶೈಲೇಶರ ಉಪಸ್ಥಿತಿಯಲ್ಲಿ ನಡೆಸಿದರು. ಇದಕ್ಕೂ ಮುನ್ನ ಶೈಲೇಶರು ಹಿರಿಯ ವಿದ್ವಾಂಸ
ಡಾ| ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಅಂಬಲಪಾಡಿಯ ನಿವಾಸದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.
ಏಳು ಶತಮಾನಗಳ ಹಿಂದೆ ಆಚಾರ್ಯ ಮಧ್ವರ ಶಾಸ್ತ್ರ ವಿಚಾರಗಳನ್ನು ಲಿಪಿಬದ್ಧಗೊಳಿಸಿದ ಪಲಿಮಾರು ಮಠದ ಮೂಲ ಯತಿ ಶ್ರೀ ಹೃಷಿಕೇಶತೀರ್ಥರ “ಸರ್ವಮೂಲಗ್ರಂಥ’ವನ್ನು ಅಧ್ಯಯನ, ಸಂಶೋಧನೆಯನ್ನು ನಡೆಸಿದ ಗೋವಿಂದಾಚಾರ್ಯರು ಶೈಲೇಶರಿಂದ ಶುದ್ಧ ತಣ್ತೀಜ್ಞಾನ ಪ್ರಸಾರದ ಕೆಲಸ ನಡೆಯುವಂತಾಗಲಿ ಎಂದು ಭಾವಪೂರ್ಣವಾಗಿ ಹಾರೈಸಿದರು.
ಶ್ರೀಕೃಷ್ಣ ಮಠದಲ್ಲಿ ಮೇ 9ರಂದು ಪ್ರಾಯಶ್ಚಿತ್ತಾದಿ ಹೋಮಗಳು, ವಿರಜಾ ಹೋಮ, ಆತ್ಮಶ್ರಾದ್ಧ, ಮೇ 10ರಂದು ಸನ್ಯಾಸಾಶ್ರಮ ಸ್ವೀಕಾರ, ಪ್ರಣವ ಮಂತ್ರೋಪದೇಶ, ಮೇ 11ರಂದು ವಿವಿಧ ಮಂತ್ರಗಳ ಉಪದೇಶ, ಮೇ 12ರಂದು ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ.