ಶಿವಮೊಗ್ಗ: “ತಲೆ ತಿರುಕ ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದು ಪ್ರಾಮಾಣಿಕ ಸರ್ಕಾರ ಎಂದು ಸಿದ್ದರಾಮಯ್ಯ
ಹೇಳಿಕೊಳ್ಳುತ್ತಿದ್ದರು. ಆದರೆ ಮುಖ್ಯಮಂತ್ರಿ ಸೇರಿ ಇತರೆ ಸಚಿವರ ಭ್ರಷ್ಟಾಚಾರದ ದಾಖಲೆಗಳು ಲಭ್ಯವಾಗಿವೆ. ಇನ್ನೆರಡು ದಿನದಲ್ಲಿ ಬೆಂಗಳೂರಿನಲ್ಲಿ ಭ್ರಷ್ಟಾಚಾರದ ಚಾರ್ಜ್ ಶೀಟ್ ಬಿಡುಗಡೆ ಮಾಡಲಾಗುವುದು ಎಂದರು.
ದಾಖಲೆ ಬಿಡುಗಡೆ ನಂತರ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ ಎಂದು ಹೇಳಿದರು. ಡಿವೈಎಸ್‌ಪಿ ಗಣಪತಿ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿದ ಹಿನ್ನೆಲೆಯಲ್ಲಿ ಜಾರ್ಜ್ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತನಿಖೆಗೆ ಸಹಕಾರ ನೀಡುವ ನೈತಿಕ ಹೊಣೆಗಾರಿಕೆ ಅವರ ಮೇಲಿದೆ ಎಂದರು.
ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಶಾಸಕ ಜೀವರಾಜ್ ನೀಡಿರುವ ಹೇಳಿಕೆ ಕೇಳಿದ್ದೇನೆ. ಅವರು ಎಲ್ಲಿಯೂ ತಪ್ಪು ಅಥವಾ ಅಪರಾಧವಾಗುವಂತಹ ಹೇಳಿಕೆ ನೀಡಿಲ್ಲ ಎಂದು ಸಮಜಾಯಿಷಿ ನೀಡಿದರು.