Advertisement

8 ವರ್ಷ ಡಿಜಿಪಿ ಆಗಿ ದಾಖಲೆ ಬರೀತಾರಾ ಸೂದ್‌?

03:45 AM Jan 02, 2017 | Team Udayavani |

ಬೆಂಗಳೂರು: ರಾಜಧಾನಿನಗರಿಯ ಖಾಕಿ ಪಡೆ ದಂಡನಾಯಕರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನೂತನ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರ ಅಧಿಕಾರಾವಧಿ ಕುರಿತು ಇಲಾಖೆಯಲ್ಲಿ ಚರ್ಚೆ ಪ್ರಾರಂಭವಾಗಿದೆ.

Advertisement

ನಗರ ಪೊಲೀಸ್‌ ಆಯುಕ್ತರಾಗಿ 10 ತಿಂಗಳು ಮಾತ್ರವಷ್ಟೇ ಪ್ರವೀಣ್‌ ಸೂದ್‌ ಅವರು ಕಾರ್ಯನಿರ್ವಹಿಸಲಿದ್ದು, ಮುಂದಿನ ಆಕ್ಟೋಬರ್‌ ತಿಂಗಳಾಂತ್ಯಕ್ಕೆ ಸೇವಾ ಹಿರಿತನ ಆಧಾರದ ಮೇರೆಗೆ ಡಿಜಿಪಿ ಹುದ್ದೆಗೆ ಮುಂಬಡ್ತಿ ಹೊಂದಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇದಕ್ಕೆ ಪೂರಕವಾಗಿ ಪ್ರಸ್ತುತ ಡಿಜಿಪಿ ಹುದ್ದೆಯಲ್ಲಿರುವ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಆರ್‌.ಕೆ.ದತ್ತಾ ಹಾಗೂ ಸತ್ಯನಾರಾಯಣ್‌ ರಾವ್‌ ಅವರು ಅಕ್ಟೋಬರ್‌ ಮತ್ತು ಜುಲೈ ವೇಳೆಗೆ ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಹುದ್ದೆಗೆ ಸೇವಾ ಹಿರಿತನದಲ್ಲಿ ಪ್ರವೀಣ್‌ ಸೂದ್‌ ಅವರು ಪ್ರಥಮ ಸಾಲಿನಲ್ಲಿದ್ದಾರೆ.

ಎಂಟು ವರ್ಷ ಡಿಜಿಪಿ ಹುದ್ದೆಯಲ್ಲಿ ಸೂದ್‌?:
ಒಂದೊಮ್ಮೆ ಹಾಗೇನಾದರೂ ಆದರೆ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಡಿಜಿಪಿ ಹುದ್ದೆಯಲ್ಲಿ ಸುದೀರ್ಘ‌ ಅವಧಿ ಸೇವೆ ಸಲ್ಲಿಸಿದ ಕೀರ್ತಿಗೂ ಪ್ರವೀಣ್‌ ಸೂದ್‌ ಅವರು ಪಾತ್ರವಾಗಲಿದ್ದಾರೆ. 1986 ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಆಗಿರುವ ಅವರು, 2024ಕ್ಕೆ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ ಸೇವಾ ಹಿರಿತನ ಆಧಾರದಡಿ ಕಿರಿಯ ವಯಸ್ಸಿನಲ್ಲಿ ಡಿಜಿಪಿ ಹುದ್ದೆಯಲ್ಲಿ 8 ವರ್ಷ ಕಾರ್ಯನಿರ್ವಹಿಸಬಹುದು. ಹಾಗೆಯೇ ರಾಜ್ಯ ಪೊಲೀಸ್‌ ಮುಖ್ಯಸ್ಥರಾಗಿ ಕೂಡ ಅವರಿಗೆ ಸುದೀರ್ಘ‌ ಕಾಲ ಆಡಳಿತ ನಡೆಸಿ ಇತಿಹಾಸ ಬರೆಯುವ ಅವಕಾಶವೂ ಇದೆ ಎನ್ನಲಾಗಿದೆ.

ರಾಜ್ಯ ಗೃಹ ಮಂಡಳಿ ಡಿಜಿಪಿ ಸುಶಾಂತ್‌ ಮಹಾಪಾತ್ರ ಅವರು ಡಿ. 31ರಂದು ನಿವೃತ್ತರಾಗಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಡಿಜಿ-ಐಜಿಪಿ ಓಂಪ್ರಕಾಶ್‌ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಈ ಇಬ್ಬರು ಹಿರಿಯ ಅಧಿಕಾರಿಗಳ ನಿವೃತ್ತಿಯಿಂದ ಎರಡು ಡಿಜಿಪಿ ಹುದ್ದೆಗಳು ತೆರಳವಾಗಲಿವೆ. ಈಗಾಗಲೇ ಸುಶಾತ್‌ ಮಹಾಪಾತ್ರ ಅವರ ನಿವೃತ್ತಿಯಿಂದ ಕಾರಾಗೃಹ ಡಿಜಿಪಿ ಸತ್ಯನಾರಾಯಣ್‌ ರಾವ್‌ ಅವರು ಖಾಯಂ ಡಿಜಿಪಿ ಹುದ್ದೆಗೆ ಮೇಲೆರ್ಜೆಗೇರಿದ್ದಾರೆ. ಓಂಪ್ರಕಾಶ್‌ ಅವರಿಂದ ತೆರವಾಗುವ ಡಿಜಿಪಿ ಹುದ್ದೆಗೆ ಸೇವಾ ಹಿರಿತನದಲ್ಲಿ ಹಿರಿಯ ಎಡಿಜಿಪಿ ಎ.ಎಂ.ಪ್ರಸಾದ್‌ ಮುಂಬಡ್ತಿ ಹೊಂದಲಿದ್ದಾರೆ ಎಂದು ರಾಜ್ಯ ಗೃಹ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

Advertisement

2017ರ ಜುಲೈ ತಿಂಗಳಲ್ಲಿ ಸತ್ಯನಾರಾಯಣ್‌ ರಾವ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಕರ್ನಾಟಕ ಕೇಡರ್‌ನ ಕೇಂದ್ರ ಸೇವೆಯಲ್ಲಿರುವ ಆರ್‌.ಕೆ.ದತ್ತಾ ನಿವೃತ್ತರಾಗಲಿದ್ದಾರೆ. ಹೀಗಾಗಿ ಅವರಿಂದ ತೆರವಾಗಲಿರುವ ಡಿಜಿಪಿ ಹುದ್ದೆಗೆ ಸೇವಾ ಹಿರಿತನದಲ್ಲಿ ಪ್ರವೀಣ್‌ ಸೂದ್‌ ಮೊದಲ ಹಕ್ಕುದಾರರಾಗಿದ್ದಾರೆ. ನಂತರ ಪಿ.ಕೆ.ಗರ್ಗ್‌ ಇದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವೀಣ್‌ ಸೂದ್‌ ಅವರು ಬೆಂಗಳೂರು ಆಯುಕ್ತರಾಗಿ ಅಲ್ಪಾವಧಿಯಷ್ಟೇ ಆಡಳಿತ ನಡೆಸಬಹುದು ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next