Advertisement

ದೇವೇಗೌಡರ ಸ್ಫರ್ಧೆಗೆ ಬಂಡಾಯದ ಬಿಸಿ

01:04 PM Mar 26, 2019 | Lakshmi GovindaRaju |

ತುಮಕೂರು: ರಾಷ್ಟ್ರದ ಗಮನ ಸೆಳೆಯುತ್ತಿರುವ ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ತುಮಕೂರು ಲೋಕಸಭಾ ಕ್ಷೇತ್ರ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುವ ಹಿನ್ನೆಲೆಯಲ್ಲಿ ಮಹತ್ವ ಪಡೆದಿದ್ದು, ದೇವೇಗೌಡರನ್ನು ಮಣಿಸಲು ಬಿಜೆಪಿ ಒಂದು ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ.

Advertisement

ದೋಸ್ತಿ ಪಕ್ಷದ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಬಂಡಾಯವಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಖಾಡ ರಂಗೇರಿಸಿದ್ದಾರೆ. ತುಮಕೂರಿನಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು. ಈಗಾಗಲೇ ತುಮಕೂರು ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಒಂದೆಡೆ ಮೈತ್ರಿ ಪಕ್ಷದಿಂದ ದೊಡ್ಡಗೌಡರೇ ಅಖಾಡಕ್ಕೆ ಇಳಿದಿದ್ದರೂ ಅವರಿಗೂ ಬಂಡಾಯದ ಬಿಸಿ ತಟ್ಟುತ್ತಿದೆ. ಮಂಡ್ಯದಲ್ಲಿ ನಿಖೀಲ್‌ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗಿಯಾದ ದೇವೇಗೌಡರು ಮಧ್ಯಾಹ್ನ 1 ಗಂಟೆಗೆ ತುಮಕೂರಿಗೆ ಆಗಮಿಸಿದರು.

ನಗರದ ಆರ್‌ಟಿಓ ಕಚೇರಿ ಪಕ್ಕದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ‌ ನಗರದ ಜೂನಿಯರ್‌ ಕಾಲೇಜು ಮೈದಾನದಿಂದ ಸಾವಿರಾರು ಕಾರ್ಯಕರ್ತರಿದ್ದ ಮೆರವಣಿಗೆಯಲ್ಲಿ ಸಾಗಿ ಬಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಅಮೃತಘಳಿಗೆ: ಮೊದಲೇ ನಿಗದಿಯಾಗಿದ್ದ ಅಮೃತಘಳಿಗೆ ಸಮಯದಲ್ಲೇ ನಾಮಪತ್ರ ಸಲ್ಲಿಸಲು ಎಂ.ಜಿ.ರಸ್ತೆ ಬಳಿ ಮೆರವಣಿಗೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಾರಿನಲ್ಲೇ ತೆರಳಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಅವರಿಗೆ ಮಧ್ಯಾಹ್ನ 2.15 ರಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

Advertisement

ಮೆರವಣಿಗೆಯಿಂದಲೂ ದೊಡ್ಡಗೌಡರಿಗೆ ಸಾಥ್‌ ನೀಡಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್‌, ಸಚಿವ ಶ್ರೀನಿವಾಸ್‌, ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲೂ ಭಾಗವಹಿಸಿದ್ದರು.

ಇನ್ನೂ ದೊಡ್ಡಗೌಡರ ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪತ್ನಿ ಚನ್ನಮ್ಮ, ಪೊಲೀಸರ ಸಹಾಯದಿಂದ ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಿ ಪತಿ ದೇವೇಗೌಡರಿಗೆ ಶುಭ ಹಾರೈಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಹೊರಬಂದ ದೇವೇಗೌಡರು ಕಚೇರಿ ಆವರಣದಲ್ಲಿದ್ದ ಕಾರ್ಯಕರ್ತರ ಒತ್ತಾಯದ ಮೇರೆಗೆ ಅಲ್ಲೇ ತೆರೆದ ವಾಹನದಲ್ಲಿ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಬಂಡಾಯವಾಗಿ ಸಂಸದರಿಂದ ನಾಮಪತ್ರ: ಇತ್ತ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ದೇವೇಗೌಡರು ಅಖಾಡಕ್ಕೆ ಇಳಿದರೆ, ದೇವೇಗೌಡರ ಸ್ಪರ್ಧೆ ವಿರುದ್ಧ ತೊಡೆತಟ್ಟಿ ಇನ್ನಿಬ್ಬರು ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಹಾಲಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಸೋಮವಾರವೇ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಶೆಟ್ಟಿಹಳ್ಳಿ ಆಂಜನೇಯ ದೇವಾಲಯದಲ್ಲಿ ಮುಂಜಾನೆಯೇ ಪೂಜೆ ನಡೆಸಿದ ಬಳಿಕ ಮುದ್ದಹನುಮೇಗೌಡರು, ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ-ಫಾರಂ ರಹಿತ ನಾಮಪತ್ರ ಸಲ್ಲಿಸಿದರು. ಆ ಬಳಿಕ ಟೌನ್‌ ಹಾಲ್‌ ನಿಂದ ಕಾರ್ಯಕರ್ತರ ಮೆರವಣಿಗೆಯಲ್ಲಿ ಆಗಮಿಸಿ, ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಎರಡನೇ ನಾಮಪತ್ರ ಸಲ್ಲಿಸಿದ್ದಾರೆ.

ಜಿದ್ದಾಜಿದ್ದಿನ ಅಖಾಡ: ಪರಮೇಶ್ವರ್‌ ಮನವೊಲಿಕೆ ನಡುವೆಯೂ ಮುದ್ದಹನುಮೇಗೌಡರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಬಂಡಾಯದ ಬಿಸಿ, ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನದ ನಡುವೆಯೇ ದೇವೇಗೌಡರು ಅಖಾಡಕ್ಕೆ ಧುಮುಕ್ಕಿದ್ದಾರೆ. ಒಟ್ಟಾರೆ ಜಿದ್ದಾಜಿದ್ದಿನ ಅಖಾಡಕ್ಕೆ ಸಜ್ಜಾಗಿರೋ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆ ಎನ್ನುವುದೇ ಕುತೂಹಲ.

ಗೋ ಬ್ಯಾಕ್‌ ದೇವೇಗೌಡ: ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ದೇವೇಗೌಡರಿಗೆ ಪ್ರತಿಭಟನೆ ಬಿಸಿ ತಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಬಳಿಯ ಗಾಜಿನ ಮನೆ ಮುಂಭಾಗ ಕೆಲ ಮಹಿಳೆಯರು ಗೋ ಬ್ಯಾಕ್‌ ದೇವೇಗೌಡ ಅಂತಾ ಬೋರ್ಡ್‌ ಹಿಡಿದು ಖಾಲಿಕೊಡ ಪ್ರರ್ದಶಿಸಿದ್ದಾರೆ. ಇದೇ ವೇಳೆ ಪೊಲೀಸರು ಪ್ರತಿಭಟನಾನಿರತರನ್ನು ಎಳೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದರು.

* ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next