ನಿರ್ದೇಶಕ ಮುಸ್ಸಂಜೆ ಮಹೇಶ್ ಈ ಬಾರಿ ನಟಿಯರ ಹಿಂದೆ ನಿಂತಿದ್ದಾರೆ! ಅಂದರೆ ನಾಯಕಿಯರನ್ನೇ ಸೇರಿಸಿಕೊಂಡು ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಸ್ಟಾರ್ ನಟರಿಂದ ಹಿಡಿದು ಯುವ ನಟರುಗಳ ಚಿತ್ರಗಳನ್ನು ಮಾಡಿಕೊಂಡು ಬಂದಿದ್ದ ಮುಸ್ಸಂಜೆ ಮಹೇಶ್, ಸದ್ದು ಮಾಡದೆಯೇ ನಾಲ್ವರು ನಾಯಕಿಯರಿರುವ ಸಿನಿಮಾ ಮಾಡಿ ಮುಗಿಸಿದ್ದಾರೆ. ಇದಕ್ಕೆ ಕಾರಣ, ನೈಜ ಘಟನೆ. ಈ ಹಿಂದೆಯೂ ಅವರು ನೈಜ ಘಟನೆಯ “ಜಿಂದಾ’ ಚಿತ್ರ ಮಾಡಿದ್ದರು.
ಈಗ ನಾಲ್ವರು ನಾಯಕಿಯರ ಮೂಲಕ ಯಾರಿಗೂ ತಿಳಿಯದ ಸತ್ಯ ಘಟನೆಯೊಂದನ್ನು ಬಿಚ್ಚಿಡಲು ಹೊರಟಿದ್ದಾರೆ. ಹೌದು, ಮುಸ್ಸಂಜೆ ಮಹೇಶ್ “ಎಂಎಂಸಿಎಚ್’ ಮೂಲಕ ಯಾರಿಗೂ ಗೊತ್ತಿಲ್ಲದ ಗುಟ್ಟನ್ನು ಹೇಳಲು ಅಣಿಯಾಗಿದ್ದಾರೆ. ಹಾಗಾದರೆ, “ಎಂಎಂಸಿಎಚ್’ ಅಂದರೇನು? ಅದರ ಅರ್ಥ ಸಿನಿಮಾದಲ್ಲೇ ತಿಳಿದುಕೊಳ್ಳಬೇಕು ಎನ್ನುತ್ತಾರೆ ನಿರ್ದೇಶಕ ಮುಸ್ಸಂಜೆ ಮಹೇಶ್.
ಈ ಚಿತ್ರದ ವಿಶೇಷವೆಂದರೆ, ನಾಲ್ವರು ಅಂದಿನ ನಾಯಕಿಯರ ಮಕ್ಕಳು ಇಲ್ಲಿ ನಾಯಕಿಯರಾಗಿರುವುದು. ಪ್ರಮೀಳಾ ಜೋಷಾಯ್ ಪುತ್ರಿ ಮೇಘನಾರಾಜ್, ವಿನಯಾ ಪ್ರಸಾದ್ ಪುತ್ರಿ ಪ್ರಥಮ, ಸುಧಾ ಬೆಳವಾಡಿ ಮಗಳು ಸಂಯುಕ್ತಾ ಹೊರನಾಡು ಹಾಗು ಸುಮಿತ್ರಮ್ಮ ಅವರ ಮಗಳು ದೀಪ್ತಿ (ನಕ್ಷತ್ರ) ಚಿತ್ರದ ನಾಯಕಿಯರು. ಇವರೊಂದಿಗೆ ರಾಗಿಣಿ ಕೂಡ ಕಾಣಿಸಿಕೊಂಡಿದ್ದಾರೆ. ನಾಲ್ವರು ನಾಯಕಿಯರ ಜತೆಗೆ ಪ್ಲಸ್ ಎಂಬಂತೆ ರಾಗಿಣಿಯೂ ನಟಿಸಿದ್ದಾರೆ.
ನಾಲ್ವರ ಜತೆಗೆ ಪ್ಲಸ್ ಆಗಿರುವ ರಾಗಿಣಿ ಪಾತ್ರವೂ ಇಲ್ಲಿ ಪ್ಲಸ್ ಎನ್ನುತ್ತಾರೆ ನಿರ್ದೇಶಕರು. ಶೀರ್ಷಿಕೆ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಿನಿಮಾ ನೋಡಿದ ಮೇಲೆ, ತುಂಬಾ ಸರಳ ಎನಿಸುವ ಅರ್ಥವದು. ಆದರೆ, ಸರಳ ಶೀರ್ಷಿಕೆಯಾದರೂ, ಮಜ ಎನಿಸುವ ಸಿನಿಮಾವಿದು. ಇಲ್ಲಿ ನಾಲ್ವರು ನಾಯಕಿಯರಷ್ಟೇ ಮುಖ್ಯ ಅಲ್ಲ, “ಅಸ್ತಿತ್ವ’ ಮೂಲಕ ಹೀರೋ ಆದ ಯುವರಾಜ್ ಮತ್ತು “ಸರ್ವಸ್ವ’ ಚಿತ್ರದ ಮೂಲಕ ನಾಯಕರಾದ ರಘುಭಟ್ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಅದೇನೆ ಇದ್ದರೂ, ಮುಸ್ಸಂಜೆ ಮಹೇಶ್ ಇಲ್ಲಿ ನಾಲ್ವರು ನಾಯಕಿಯರ ಸಿನಿಮಾ ಮಾಡಿದ್ದು ರಿಸ್ಕ್ ಅಲ್ಲವೇ? ಖಂಡಿತ ರಿಸ್ಕ್ ಹೌದು, ಇದು ಮೊದಲ ಪ್ರಯತ್ನವೂ ಹೌದು. ಆದರೆ, ಕಥೆ ಇಲ್ಲಿ ನೈಜವಾಗಿರುವುದರಿಂದ ಚಿತ್ರಕ್ಕೆ ಪ್ಲಸ್ ಆಗುತ್ತೆ ಎಂಬ ನಂಬಿಕೆ ಇದೆ. ಇದು ಮೈಸೂರಿನ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರ. ನಾನು ಕಾಲೇಜು ಓದುವ ಸಂದರ್ಭದಲ್ಲಿ ನಡೆದಂತಹ ಘಟನೆ ಎನ್ನಬಹುದು. ಆಗ ಅಲ್ಲಿ ನಡೆದ ಆ ಘಟನೆಯ ವಿಷಯ ಎಲ್ಲೂ ಹೊರಬರಲಿಲ್ಲ.
ಆಗಿನ ಹಿರಿಯ ಪೊಲೀಸ್ ಅಧಿಕಾರಿಗಳು ಸುದ್ದಿ ಹೊರಬರದಂತೆ ನೋಡಿಕೊಂಡಿದ್ದರು. ಆಗ ನಡೆದ ಘಟನೆ ಇಟ್ಟುಕೊಂಡು “ಎಂಎಂಸಿಎಚ್’ ಚಿತ್ರ ಮಾಡಿದ್ದೇನೆ. ಈಗಾಗಲೇ ಡಬ್ಬಿಂಗ್ ಮುಗಿದು, ಹಿನ್ನೆಲೆ ಸಂಗೀತ ನಡೆಯುತ್ತಿದೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದರೆ, ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ರವಿ ಸಂಕಲನ ಮಾಡುತ್ತಿದ್ದಾರೆ. ಚಿತ್ರ ಹೊರಬಂದಾಗಲಷ್ಟೇ, ಆ ನೈಜ ಘಟನೆ ಏನೆಂಬುದು ಎಲ್ಲರಿಗೂ ಗೊತ್ತಾಗುತ್ತೆ’ ಎಂದು ಹೇಳಿ ಸುಮ್ಮನಾಗುತ್ತಾರೆ ಮುಸ್ಸಂಜೆ ಮಹೇಶ್.