Advertisement

ಆರ್‌ಸಿಇಪಿ ಒಪ್ಪಂದ ಕೃಷಿ, ಹೈನುಗಾರಿಕೆಗೆ ಮಾರಕ

10:28 PM Nov 03, 2019 | Team Udayavani |

ಚಾಮರಾಜನಗರ: ದೇಶದ ಕೃಷಿ, ಹೈನುಗಾರಿಕೆಗೆ ಮಾರಕವಾಗಿರುವ ಆರ್‌ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದರೆ ಬಹುಜನ ಸಮಾಜ ಪಕ್ಷದಿಂದ ದೇಶದಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಸಿಇಪಿ ಒಪ್ಪಂದ ದಕ್ಷಿಣ ಏಷ್ಯದ 16 ರಾಷ್ಟ್ರಗಳು ಮಾಡಿಕೊಳ್ಳುತ್ತಿರುವ ಒಪ್ಪಂದವಾಗಿದ್ದು, ಈ ಒಪ್ಪಂದದಿಂದ ಪಾಶ್ಚಿಮಾತ್ಯರು ತಯಾರಿಸಿದ ಉತ್ಪನ್ನಗಳು ತೆರಿಗೆ ರಹಿತವಾಗಿ ಭಾರತಕ್ಕೆ ಬರುತ್ತವೆ. ಇದರಿಂದ ನಮ್ಮ ದೇಶದ ಕೃಷಿ ಮತ್ತು ಹೈನುಗಾರಿಕೆ ಸಂಪೂರ್ಣ ನಾಶವಾಗಲಿದೆ. ಹೀಗಾಗಿ ಇಡೀ ದೇಶವೇ ಈ ಒಪ್ಪಂದವನ್ನು ವಿರೋಧಿಸುತ್ತಿದೆ. ಬಹುಜನ ಸಮಾಜ ಪಕ್ಷ ಕೂಡ ಒಪ್ಪಂದದ ವಿರುದ್ಧವಿದೆ ಎಂದರು.

ಭಾರತಕ್ಕೆ ಯಾವುದೇ ಲಾಭವಿಲ್ಲ: ಆರ್‌ಸಿಇಪಿ ಒಪ್ಪಂದವು 15 ವರ್ಷಗಳ ಅವಧಿವರಗೆ ಒಂದೇ ರೀತಿಯ ದರವನ್ನು ನಿಗಧಿ ಮಾಡಲಿದ್ದು, ಎಷ್ಟು ಅಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿರುತ್ತೇವೆ ಅಷ್ಟನ್ನು ಅಮದು ಮಾಡಿಕೊಳ್ಳಲೇ ಬೇಕಿರುತ್ತದೆ. ಒಪ್ಪಂದವನ್ನು ಮುರಿಯುವಂತಿಲ್ಲ. ಇದರಿಂದ ಭಾರತದಲ್ಲಿ ಜಿಎಸ್‌ಟಿಯಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗಲಿದೆ. ಈ ಒಪ್ಪಂದದಿಂದ ಭಾರತಕ್ಕೆ ಯಾವುದೇ ಲಾಭವಿಲ್ಲ ಎಂದು ಹೇಳಿದರು.

ಸರ್ಕಾರ ರೈತರ ಹಿತ ಕಾಪಾಡಲಿ: ದೇಶದಲ್ಲಿ 100 ಕೋಟಿ ಜನರು ಕೃಷಿಯನ್ನೇ ಅವಲಂಬಿಸಿದ್ದು, 10 ಕೋಟಿ ಜನರು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಆರ್‌ಸಿಇಪಿ ಒಪ್ಪಂದದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು ತೆರಿಗೆ ರಹಿತವಾಗಿ ದೇಶಕ್ಕೆ ಬರುತ್ತವೆ. ಮುಂದುವರಿದ ದೇಶಗಳಲ್ಲಿ ಕೃಷಿ, ಹೈನುಗಾರಿಕೆ ಸರ್ಕಾರ ಸಂಪೂರ್ಣ ಸಬ್ಸಿಡಿ ನೀಡುತ್ತಿರುವುದರಿಂದ ಅಲ್ಲಿನ ರೈತರು ಅತ್ಯಂತ ಕಡಿಮೆ ಬೆಲೆಗೆ ಕೃಷಿ ಮತ್ತು ಹೈನು ಉತ್ಪನ್ನಗಳನ್ನು ಭಾರತದಲ್ಲಿ ತಂದು ಮಾರಾಟ ಮಾಡುತ್ತಾರೆ. ಇದು ಕಾರ್ಯರೂಪಕ್ಕೆ ಬಂದರೆ ಹೈನುಗಾರಿಕೆಯನ್ನು ನಂಬಿರುವ 10 ಕೋಟಿ ಜನರ ಜೀವನ ದುಸ್ತರವಾಗಲಿದೆ. ಸರ್ಕಾರ ರೈತರ ಹಿತವನ್ನು ಕಾಪಾಡಬೇಕಿದ್ದು, ಆರ್‌ಸಿಇಪಿ ಒಪ್ಪಂದ ಭಾರತ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಸರ್ವರಿಗೂ ಸಮಬಾಳು ತತ್ವ ನಾಶ: ಬಿಜೆಪಿ ಸರ್ಕಾರ ತರುತ್ತಿರುವ ಯೋಜನೆಗಳು ಕೆಲವೇ ಕೆಲವು ಜನರ ಪರವಾಗಿರುವ ಯೋಜನೆಗಳಾಗುತ್ತಿವೆ. ಇದರಿಂದ ಮಧ್ಯಮ ವರ್ಗದವರು ಆರ್ಥಿಕವಾಗಿ ದುರ್ಬಲಗೊಳಿಸಿ, ಬಡವರನ್ನಾಗಿ ಮಾಡಲಾಗುತ್ತದೆ. ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಸೃಷ್ಟಿ ಮಾಡುವ ಮೂಲಕ ಸರ್ವರಿಗೂ ಸಮಬಾಳು ಎಂಬ ತತ್ವವನ್ನು ನಾಶ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಟೀಕಿಸಿದರು.

Advertisement

ಕೇಂದ್ರ ಸರ್ಕಾರ ದೇಶದ ಬೆರಳೆಣಿಕೆಯಷ್ಟು ಜನ ಶ್ರೀಮಂತ ಉದ್ಯಮಿಗಳ ಪರವಾಗಿ ನಿಂತಿದೆ. ಆದಾನಿ, ಅಂಬಾನಿಯಂಥ ಉದ್ಯಮಿಗಳ ಕಂಪೆನಿಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಆ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸರ್ಕಾರದ ನೀತಿ ನಿಯಮಗಳನ್ನು ಜಾರಿಗೊಳಿಸಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ನಾಗಯ್ಯ, ಉಪಾಧ್ಯಕ್ಷ ಬೇಡಮೂಡ್ಲು ಬಸವಣ್ಣ, ತಾಲೂಕು ಅಧ್ಯಕ್ಷ ಮಹೇಶ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next