Advertisement

ಇಲಿ-ಹೆಗ್ಗಣಗಳಿಗೆ ಆಹಾರವಾಗ್ತಿದೆ ಶುಚಿ

11:12 AM Nov 25, 2019 | Suhan S |

ಹುನಗುಂದ: ಶಾಲಾ ಹೆಣ್ಣುಮಕ್ಕಳಿಗೆ ಮತ್ತು ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಹಾಗೂ ಗ್ರಾಮೀಣ ಪ್ರದೇಶದ ಕಿಶೋರಿಯರಿಗೆ ಆರೋಗ್ಯ ಇಲಾಖೆ ಮುಖಾಂತರ ಉಚಿತವಾಗಿ ವಿತರಿಸಬೇಕಾದ ಲಕ್ಷಾಂತರ ರೂಪಾಯಿಯ ಶುಚಿ ಸ್ಯಾನಿಟರಿ ನ್ಯಾಪ್ಕಿನ್(ವಿಸ್ಪರ್‌)ಗಳು ಇಲಿ ಹೆಗ್ಗಣಗಳಿಗೆ ಆಹಾರವಾಗಿವೆ.

Advertisement

ತಾಲೂಕು ವೈದ್ಯಾಧಿಕಾರಿ ಹಾಗೂ ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಂಟು ತಿಂಗಳಿಂದ ವಿತರಣೆಯಾಗಿಲ್ಲ. ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಧೂಳು ಹಿಡಿದು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಹೌದು, ಋತುಕಾಲ ಮತ್ತು ಮಾಸಿಕ ಋತುಸ್ರಾವ ಸಂದರ್ಭದಲ್ಲಿ ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ದೈಹಿಕ ಮತ್ತು ಮಾನಸಿಕ ಅಸುರಕ್ಷತೆ ಸಮಸ್ಯೆ ಮನಗಂಡ ಸರ್ಕಾರ 2017ರಲ್ಲಿ ಶುಚಿ ಯೋಜನೆ ಆರಂಭಿಸಿತ್ತು.

6ನೆಯ ತರಗತಿಯಿಂದ ಕಾಲೇಜು ಮಟ್ಟದವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಮಕ್ಕಳಿಗೆ ಉಚಿತವಾಗಿ ಶುಚಿ ಸ್ಯಾನಿಟರಿ ನ್ಯಾಪ್ಕಿನ್ (ವಿಸ್ಪರ್‌)ಗಳು ವಿತರಿಸಲು ಪ್ರತಿ ವರ್ಷ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ನ್ಯಾಪ್ಕಿನ್ (ಪ್ಯಾಡ್‌)ಗಳನ್ನು ಆಯಾ ಜಿಲ್ಲಾ ಆಸ್ಪತ್ರೆಯ ಮೂಲಕ ತಾಲೂಕಾ ಆರೋಗ್ಯ ಕೇಂದ್ರಕ್ಕೆ ಸರಬುರಾಜು ಮಾಡುತ್ತಿದ್ದರೂ ಕೂಡಾ ಇಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬಡ ಮಕ್ಕಳಿಗೆ ಅನುಕೂಲವಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿಸ್ಪರ್‌ ಪಾಕೇಟ್‌ಗಳು ಜೀಡು ಗಟ್ಟಿ ಧೂಳು ಹಿಡಿದು ಮೂಲೆ ಸೇರಿವೆ.

ಒಬ್ಬ ವಿದ್ಯಾರ್ಥಿನಿಗೆ 10 ಪ್ಯಾಕೇಟ್‌ ವಿತರಣೆ ಮಾಡುವ ಯೋಜನೆ-ಶುಚಿ ಯೋಜನೆ ಅಡಿಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ಒಂದು ವರ್ಷಕ್ಕೆ 10 ಪ್ಯಾಕೇಟ್‌ ನೀಡುವ ಮಹತ್ವದ ಯೋಜನೆ ಇದಾಗಿದ್ದು. ಆಯಾ ಶಾಲಾ ಮಕ್ಕಳ ಸಂಖ್ಯೆ ಆಧರಿಸಿ ಈ ಶುಚಿ ಪ್ಯಾಕೆಟ್‌ ನೀಡುವುದಿದೆ. ಎಂಟು ತಿಂಗಳು ಗತಿಸಿದರೂ ವಿದ್ಯಾರ್ಥಿಗಳ ಕೈ ಸೇರದ ಶುಚಿ ಪ್ಯಾಕೇಟ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ 554 ಶುಚಿ ಸ್ಯಾನಿಟರಿ ನ್ಯಾಪ್ಕಿನ್ (ವಿಸ್ಪರ್‌) ಬಾಕ್ಸ್‌ಗಳು ತಾಲೂಕು ಆಸ್ಪತ್ರೆಗೆ ಬಂದಿದ್ದರೂ ಅವುಗಳನ್ನು ತಾಲೂಕಿನ ವಿವಿಧ ಶಾಲೆಗಳಿಗೆ ವಿತರಣೆ ಮಾಡಿಲ್ಲ. ತಾಲೂಕಿನ ಹಳೆಯ ಆಸ್ಪತ್ರೆಯ ಕಟ್ಟಡ ಒಂದರಲ್ಲಿ ಸಂಗ್ರಹಿಸಿಟ್ಟಿವೆ.

Advertisement

ಸದ್ಯ ಅವುಗಳು ಇಲಿ ಹೆಗ್ಗಣಗಳಿಂದ ಹಾಳಾಗಿ ಹೋಗುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಅವುಗಳ ವಿತರಣೆಗಾಗಿ ಗಮನಹರಿಸುತ್ತಿಲ್ಲ. ಸರ್ಕಾರಿ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ತಲುಪಿಸಲು ಸಾವಿರಾರು ರೂಪಾಯಿ ಖರ್ಚಾಗಲಿದೆ. ಈ ವೆಚ್ಚ ಯಾರು ಭರಿಸುವುದು ಎನ್ನುವುದ್ದಕ್ಕೆ ಸ್ಪಷ್ಟ ಸರ್ಕಾರದ ಆದೇಶವಿಲ್ಲದೇ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ನಡುವಿನ ಈ ಮುಸುಕಿನ ಗುದ್ದಾಟದಲ್ಲಿ ಬಡ ಮಕ್ಕಳಿಗೆ ಅನೂಕೂಲವಾಗಬೇಕಿದ್ದ ನ್ಯಾಪ್ಕಿನ್ (ವಿಸ್ಪರ್‌)ಗಳು ವಿತರಣೆ ಮಾತ್ರ ನೆನೆಗುದಿಗೆ ಬಿದ್ದು ಸರ್ಕಾರದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾಳಾಗಿ ಹೋಗುತ್ತಿದೆ.

ಎರಡು ವರ್ಷಗಳಿಂದ ವಿತರಣೆಯಾಗಿಲ್ಲ: ಈ ಶುಚಿ ಯೋಜನೆ ಆರಂಭವಾಗಿ ಎರಡು ವರ್ಷಗಳು ಗತಿಸಿದರೂ ಇಲ್ಲಿವರೆಗೂ ನಮ್ಮ ಶಾಲೆಗಳಿಗೆ ಅವುಗಳು ವಿತರಣೆಯಾಗಿಲ್ಲ.  ಅವುಗಳು ಹೇಗಿವೆ ಎನ್ನುವುದು ಸಹ ಗೊತ್ತಿಲ್ಲ ಎನ್ನುತ್ತಿದ್ದಾರೆ ತಾಲೂಕಿನ ಬಹುತೇಕ ಶಾಲೆಯ ಮುಖ್ಯೋಪಾಧ್ಯಾರು. ಈ ರೀತಿ ವಿತರಣೆಯಾಗದಿರುವುದು ತಾಲೂಕಿನ ವೈದ್ಯಾಧಿಕಾರಿಗಳು ಮತ್ತು ಫಾರ್ಮಸಿಸ್ಟ್‌ರೇ ನೇರ ಹೊಣೆ ಎನ್ನುತ್ತಿದ್ದಾರೆ ಸಾರ್ವಜನಿಕರು. ಆರೋಗ್ಯ ಇಲಾಖೆಯ ಮೇಲಧಿಕಾರಿಗಳು  ಎಚ್ಚೆತ್ತುಕೊಂಡು ಕಟ್ಟಡದಲ್ಲಿ ಕೊಳೆಯುತ್ತಾ ಬಿದ್ದಿರುವ ಶುಚಿ ಸ್ಯಾನಿಟರಿ ನ್ಯಾಪ್ಕಿನ್ (ವಿಸ್ಪರ್‌)ಗಳನ್ನು ಉಪಯೋಗಿಸುವ ದಿನಾಂಕ ಮುಗಿಯುವ ಮುನ್ನವೇ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವಂತೆ ಕ್ರಮ ಕೈಕೊಳ್ಳಬೇಕಾಗಿದೆ.

 

-ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next