ಶಿವಮೊಗ್ಗ: ಭದ್ರಾವತಿ ತಾಲೂಕಿನ ಹಾಗಲಮನೆ ಎಂಬಲ್ಲಿ ವಿಜಯನಗರ ಕಾಲದ ಶಾಸನಗಳು ಪತ್ತೆಯಾಗಿವೆ.ಎರಡು ಮಾಸ್ತಿ ಶಿಲ್ಪವಿರುವ ಶಾಸನಗಳು ಸಿಸ್ಟ್ ಶಿಲೆಯಿಂದ ಕೆತ್ತಲ್ಪಟ್ಟಿದ್ದು ಒಂದು 75 ಸೆಂ.ಮೀ ಉದ್ದ ಹಾಗೂ 67 ಸೆಂ.ಮೀ ಆಗಲವಿದ್ದು ತುಂಡಾಗಿದೆ.
ಇನ್ನೊಂದು 1.20 ಸೆಂ.ಮೀ ಉದ್ದ ಆಗಲ 59 ಸೆಂ.ಮೀ ಇದೆ. ಎರಡು ಮಾಸ್ತಿಗಲ್ಲುಗಳು ಶಾಸನಗಳನ್ನು ಹೊಂದಿದ್ದು ಹಳೆಗನ್ನಡದಿಂದ ಕೂಡಿವೆ. ಒಂದು ಶಾಸನ ತುಂಬಾ ತೃಟಿತವಾಗಿರುವುದರಿಂದ ಓದಲು ಕಷ್ಟವಾಗಿದ್ದು ಇನ್ನೊಂದು ಶಾಸನ ಓದಬಹುದು. ಈ ಮಾಸ್ತಿಗಲ್ಲುಗಳು ಮೂರು ಪಟ್ಟಿಕೆಗಳಿಂದ ಕೂಡಿದ್ದು ಎರಡನೇ ಪಟ್ಟಿಕೆಯಲ್ಲಿ ಎರಡು ಸಾಲಿನ ಶಾಸನವನ್ನು ನೋಡಬಹುದಾಗಿದೆ.
ಮೊದಲ ಪಟ್ಟಿಕೆಯಲ್ಲಿ ಸ್ತ್ರೀಯು ಕೆದಿಗೆ ಹೂವನ್ನು ಮುಡಿದು ಒಂದು ಕೈಯಲ್ಲಿ ಕನ್ನಡಿ ಹಿಡಿದು ಇನ್ನೊಂದು ಕೈಯಲ್ಲಿ ಲಿಂಬೆಹಣ್ಣು ಹಿಡಿದಿರುವುದು ಕಂಡು ಬರುತ್ತದೆ. ಎರಡನೇ ಪಟ್ಟಿಕೆಯಲ್ಲಿ ಮಂಟಪ (ವಿಮಾನ)ದಲ್ಲಿ ಅಂಜಲಿ ಮುದ್ರೆಯಲ್ಲಿ ವೀರ ಮತ್ತು ಆತನ ಮಡದಿ ಕುಳಿತಿದ್ದು ಅಕ್ಕಪಕ್ಕದಲ್ಲಿ ಅಪ್ಸರೆಯರು ಚಾಮರ ಬೀಸುತ್ತಾ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ.
ಮೂರನೇ ಪಟ್ಟಿಕೆಯಲ್ಲಿ ಸ್ವರ್ಗಲೋಕದಲ್ಲಿ ಯತಿಯು ಶಿವಲಿಂಗ ಹಾಗೂ ನಂದಿಯನ್ನು ಪೂಜಿಸುತ್ತಿರುವುದು ವೀರ ಹಾಗೂ ಸ್ತ್ರೀಯು ಅಂಜಲಿ ಮುದ್ರೆಯಲ್ಲಿ ಕುಳಿತಿರುವುದು ಮೇಲ್ಭಾಗದಲ್ಲಿ ಸೂರ್ಯ ಚಂದ್ರರನ್ನು ನೋಡ ಬಹುದು. ಅಂದರೆ ಸೂರ್ಯಚಂದ್ರರಿರುವರೆಗೆ ಈ ಮಾಸ್ತಿಗಲ್ಲುಗಳು ಶಾಶ್ವತ ಎಂದು ತಿಳಿಯಬಹುದಾಗಿದೆ.
ಶಾಸನದ ಮಹತ್ವ: ಪ್ಲವ ಸಂವತ್ಸರದ ಅಶ್ವಯುಜ ಮಾಸ ಶುದ್ಧ 10 ರಂದು ಹೊಮಚರ ಭೈರಗೌಡನ ಮಗನಾದ ಜಕ್ಕ ಎಂಬುವವನು ಯುದಟಛಿದಲ್ಲಿ ಹೋರಾಡಿ ಮರಣವನ್ನುಪ್ಪತ್ತಾನೆ. ತನ್ನ ಪತಿ ಜಕ್ಕ ವೀರ ಮರಣ ಹೊಂದಿದ್ದರಿಂದ ಮಡದಿಯಾದ ಜಕ್ಕಿಯು ಬೆಂಕಿಯಲ್ಲಿ ಬಿದ್ದು ಸಾಯುತ್ತಾಳೆ. ಇವರ ನೆನಪಿಗೋಸ್ಕರ ಈ ಮಹಾಸತಿಗಲ್ಲನ್ನು ನಿಲ್ಲಿಸಿದ್ದಾರೆ ಎಂದು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್ ತಿಳಿಸಿದ್ದಾರೆ. ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಗ್ರಾಮಸ್ಥಾರದ ನಾಗೇಶ್, ಚಿನ್ನಪ್ಪ ಸಹಕರಿಸಿದ್ದಾರೆ.