Advertisement

ಅತ್ಯಾಚಾರಿಗೆ 10 ವರ್ಷ ಜೈಲು

12:03 PM May 31, 2018 | Team Udayavani |

ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಮಾಗಡಿ ತಾಲೂಕಿನ ಅಂಜಿನಪ್ಪ (58) ಎಂಬಾತನಿಗೆ ಹೈಕೋರ್ಟ್‌ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ಆರೋಪಿ ಆಂಜಿನಪ್ಪನಿಗೆ ಕೇವಲ 2 ವರ್ಷ 4 ತಿಂಗಳು ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕುದೂರು ಠಾಣೆ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಹಾಗೂ ನ್ಯಾಯಮೂರ್ತಿ ಬಿ.ಎ.ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ, ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿತು. ಅಲ್ಲದೆ, 10 ಸಾವಿರ ರೂ. ದಂಡವನ್ನೂ ವಿಧಿಸಿದ ನ್ಯಾಯಪೀಠ, ಈ ಮೊತ್ತದಲ್ಲಿ ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ 9 ಸಾವಿರ ರೂ. ನೀಡಬೇಕು. ಒಂದು ವೇಳೆ ದಂಡ ಪಾವತಿಸಲು ವಿಫ‌ಲವಾದರೆ ಹೆಚ್ಚುವರಿಯಾಗಿ 6 ತಿಂಗಳು ಜೈಲು ಶಿಕ್ಷೆ ಅನ್ವಯವಾಗುತ್ತದೆ ಎಂದು ಹೇಳಿತು.

ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂಬುದರ ಕುರಿತ ವೈದ್ಯಕೀಯ ವರದಿ, ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿಯ ಹೇಳಿಕೆ ಸೇರಿ ಇನ್ನಿತರೆ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್‌ ಪರ ವಕೀಲರು
ನ್ಯಾಯಾಲಯಕ್ಕೆ ಒದಗಿಸಿದ್ದು, ಇದನ್ನು ಪರಿಗಣಿಸಿದ ನ್ಯಾಯಪೀಠ, ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿ
ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಶನ್‌ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ್‌ ಕುಮಾರ್‌ ಮಜಗೆ ವಾದಿಸಿದ್ದರು.

ಪ್ರಕರಣ ಏನು?: ಕುದೂರು ಕಾಲೋನಿಯ ನಿವಾಸಿ ಅಂಜಿನಪ್ಪ ಮನೆಯ ಸಮೀಪದ 6 ವರ್ಷದ ಬಾಲಕಿಗೆ ಚಾಕೋಲೆಟ್‌ ನೀಡುವ ಆಮಿಷ ತೋರಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿದ್ದ ಕುದೂರು ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ರಾಮನಗರ ತ್ವರಿತ ನ್ಯಾಯಾಲಯ, ಅತ್ಯಾಚಾರ ಯತ್ನ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 2 ವರ್ಷ 4 ತಿಂಗಳು ಜೈಲು ಶಿಕ್ಷೆ ವಿಧಿಸಿ ಅಕ್ಟೋಬರ್‌ 10, 2012ರಲ್ಲಿ ಆದೇಶಿಸಿತ್ತು. ಅಧೀನ ನ್ಯಾಯಾಲಯದಲ್ಲಿ ಅತ್ಯಾಚಾರ ಆರೋಪ ಸಾಬೀತಾಗಿರಲಿಲ್ಲ. ಹೀಗಾಗಿ ಈ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಶನ್‌ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next