ಹರಿಹರ: ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಆದಷ್ಟು ಶೀಘ್ರ ಘೋಷಿಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ, ರಾಜ್ಯ ಸರ್ಕಾರದ ದೆಹಲಿಯ ಹೆಚ್ಚುವರಿ ವಿಶೇಷ ಪ್ರತಿನಿಧಿ ಸಲೀಂ ಅಹಮದ್ ಹೇಳಿದರು. ನಗರದ ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪರ ಮನೆಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಯಶಸ್ವಿ ಆಡಳಿತದಿಂದ ರಾಜ್ಯಾದ್ಯಂತ ಕಾಂಗ್ರೆಸ್ ವರ್ಚಸ್ಸು ಇಮ್ಮಡಿಗೊಂಡಿದೆ.ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ತೀವ್ರ ಪೈಪೋಟಿ ನಡೆಸಿದ್ದಾರೆ ಎಂದರು. ಪಕ್ಷದಲ್ಲಿ ಅಗತ್ಯ ಅರ್ಹತೆಗಳಿರುವ ಮುಖಂಡರ ಸಂಖ್ಯೆ ದೊಡ್ಡದಿದ್ದು,
ಪಕ್ಷದ ವರಿಷ್ಠರು ಕೂಲಂಕುಷವಾಗಿ ಪರಿಶೀಲಿಸಿ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಅಧಿಕೃತ ಪಟ್ಟಿ ಬಿಡುಗಡೆ ಮಾಡುವ ಮೂಲಕ ಅಭ್ಯರ್ಥಿಗಳ ಘೋಷಣೆ ಮಾಡಲಿದ್ದಾರೆ ಎಂದರು. ರೈತರ ಸಹಕಾರಿ ಸಂಘಗಳಲ್ಲಿನ ಬೆಳೆ ಸಾಲ ಮನ್ನಾ ಮಾಡುವ ಬಗ್ಗೆ ಪಕ್ಷದ ಹಿರಿಯ ಮುಖಂಡರೊಡನೆ ಸಿಎಂ ಚರ್ಚಿಸಿದ್ದಾರೆ.
ಮುಂಬರುವ ಬಜೆಟ್ ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವೂ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಭೀಕರ ಬರಗಾಲಕ್ಕೆ ತುತ್ತಾಗಿರುವ ಬಗ್ಗೆ ಸಿಎಂ ಸದ್ಯದಲ್ಲಿಯೇ ರೈತರಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಡಿ.ಬಸವರಾಜ್, ತಾಪಂ ಮಾಜಿ ಸದಸ್ಯ ಎಚ್.ಎಚ್. ಬಸವರಾಜ್, ರೇವಣಸಿದ್ದಪ್ಪ, ಪಕ್ಷದ ಗ್ರಾಮಾಂತರ ಘಟಕದ ಅಧ್ಯಕ್ಷ ಹಬಿದಲಿ, ಗೋವಾ ಮನಬ್ಸಾಬ್, ತಾಯರ್ಹುಸೇನ್, ಅಬ್ಬರ್ಗಫಾರ್, ನಗರಸಭಾ ಸದಸ್ಯ ವಸಂತ ಕುಮಾರ್, ಎಸ್.ಎಂ. ಭಾಷಾ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತಿತರರಿದ್ದರು.