Advertisement

ಪುಷ್ಪಗಿರಿ ತಪ್ಪಲಿನ ಜನತೆಗೆ ಮಳೆಗಾಲದ್ದೆ ಚಿಂತೆ

01:51 PM Apr 04, 2019 | pallavi |

ಸುಬ್ರಹ್ಮಣ್ಯ : ಕೊಡಗು ಮತ್ತು ದ.ಕ. ಜಿಲ್ಲೆಯ ಗಡಿ ಪ್ರದೇಶ ಪುಷ್ಪಗಿರಿ ಬೆಟ್ಟದ ತಪ್ಪಲಿನ ಕಲ್ಮಕಾರು ಭಾಗದಲ್ಲಿ ಕಳೆದ ಮಳೆಗಾಲದ ಅವಧಿ ಭೂಕುಸಿತ ಮತ್ತು ಜಲಪ್ರಳಯ ಸಂಭವಿಸಿತ್ತು. ಘಟನೆಯಲ್ಲಿ ಇಲ್ಲಿನ 11 ಕುಟುಂಬಗಳು ಭೂಮಿ, ಮನೆ ಕಳಕೊಂಡು ನಿರಾಶ್ರಿತರಾಗಿ ತಾತ್ಕಾಲಿಕ ಪರಿಹಾರ ಕೇಂದ್ರ ಸೇರಿದ್ದವು. ಪ್ರಾಕೃತಿಕ ವಿಕೋಪದ ಪರಿಹಾರ ನೀಡುವ ಭರವಸೆ ಸರಕಾರದಿಂದ ಅಂದು ದೊರಕಿತ್ತಾದರೂ ಇದುವರೆಗೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ.

Advertisement

ಮಳೆಯ ರುದ್ರ ನರ್ತನಕ್ಕೆ ಅಂದು ಪುಷ್ಪಗಿರಿ ತಪ್ಪಲಿನ ಕಲ್ಮಕಾರು ಗ್ರಾಮದ ಗುಳಿಕ್ಕಾನ ಎಂಬಲ್ಲಿ ಗುಡ್ಡ ಬಾಯ್ದೆರೆದುಕೊಂಡಿತ್ತು. ಇಲ್ಲಿನ ಕೆಲ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಗುಡ್ಡ ಕುಸಿದು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿರುವ ಕಾರಣಕ್ಕೆ ಗುಳಿಕ್ಕಾನ ಆಸುಪಾಸಿನ 11 ಕುಟುಂಬಗಳು ಮನೆ ತೊರೆದಿದ್ದವು. ಮನೆ, ಕೃಷಿ ಭೂಮಿ ಬಿಟ್ಟು ತಮ್ಮ ಪ್ರಾಣ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದರು.

ಪರಿಶಿಷ್ಟ ಜಾತಿಯ ಎಂಟು ಕುಟುಂಬಗಳ 32 ಮಂದಿ ಕೊಲ್ಲಮೊಗ್ರುನಲ್ಲಿ ಪಂಚಾಯತ್‌ ವತಿಯಿಂದ ನಿರ್ಮಿಸಿದ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ ಇನ್ನುಳಿದ ಮೂರು ಮನೆಯವರು ಸಂಬಂಧಿಕರ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದರು.

ಭರವಸೆ ಮಾತ್ರ
ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ಉಳಿದು ಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು, ಊಟಕ್ಕೆ ಅಕ್ಕಿ, ಧವಸ- ಧಾನ್ಯ, ಬಟ್ಟೆ ಎಲ್ಲವನ್ನೂ ಒದಗಿಸಲಾಗಿತ್ತು. ಈ ವೇಳೆ ಅಧಿಕಾರಿಗಳು, ಜನಪ್ರತಿನಿಧಿಗಳು ಗುಡ್ಡ ಜರಿದ ತಳಭಾಗದ ಜನವಸತಿ ಭೂಮಿ ವಾಸಕ್ಕೆ ಯೋಗ್ಯವೆ ಎಂಬ ಕುರಿತು ಭೂಗರ್ಭ ಶಾಸ್ತ್ರಜ್ಞರು ಹಾಗೂ ಪರಿಸರ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಲಿದೆ ಎಂದು ತಿಳಿಸಿದ್ದರು.. ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯ ಸುರಕ್ಷಿತ ಸ್ಥಳ, ಮನೆ ನೀಡುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ ಸಹಿತ ಜನಪ್ರತಿನಿಧಿಗಳು ಈ ಭಾಗಕ್ಕೆ ಭೇಟಿ ನೀಡಿ ಭರವಸೆ ಇತ್ತು ತೆರಳಿದ್ದರು.

ಜಾಗ, ಮನೆ ಬಿಡಿ ಬಿಡಿಗಾಸು ಪರಿಹಾರವೂ ಈ ಕುಟುಂಬಗಳಿಗೆ ಸಿಕ್ಕಿಲ್ಲ. ಮಳೆ ನಿಂತ ಬಳಿಕ ತಮ್ಮ ಮನೆಗಳಿಗೆ ಹಿಂದಿರುಗಿದ 11 ಕುಟುಂಬಗಳು ಹಾನಿಯಾಗಿದ್ದ ಮನೆಗಳನ್ನೇ ಅಷ್ಟಿಷ್ಟು ದುರಸ್ತಿ ಮಾಡಿಕೊಂಡು ವಾಸಯೋಗ್ಯ ಮಾಡಿಕೊಂಡಿದ್ದಾರೆ. ಮತ್ತೆ ಕೃಷಿ ಚಟುವಟಿಕೆ ಆರಂಭಿಸಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟು ದಿನ ಬೇಸಗೆ ಇದ್ದ ಕಾರಣ ಅದು ಹೇಗೋ ದಿನಗಳು ಕಳೆದು ಹೋದವು. ಮುಂಗಾರು ಆರಂಭವಾಗಲು ಇನ್ನೆರಡು ತಿಂಗಳು ಸಮಯವಕಾಶವಿದೆ ಅನ್ನುವಾಗಲೇ ಹಳೆಯ ನೆನಪು ಬಾಧಿಸಿ, ಚಿಂತೆ ಶುರುವಿಟ್ಟುಕೊಂಡಿದೆ.

Advertisement

ಕಳೆದ ಮಳೆನಗಾಲದಲ್ಲಿ ಅನುಭವಿಸಿದ ಯಾತನೆ, ಭಯ ಇವರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಮತ್ತದೇ ಮಳೆ, ಜಲಪ್ರಳಯ, ಭೂಕುಸಿತದ ತೊಂದರೆಗಳಿಗೆ ಸಿಲುಕಿದರೆ ಏನು ಗತಿ ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ.

ಸೇತುವೆ ಮರು ಜೋಡಣೆಯಾಗಿಲ್ಲ ವರ್ಷವೂ ಹೆಚ್ಚು ಮಳೆ ಬೀಳುವ ಈ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ರುದ್ರನರ್ತನವೇ ಆಗಿತ್ತು. ಗುಡ್ಡದ ಮೇಲಿಂದ ನೆರೆಯ ಜತೆಗೆ ಕಲ್ಲು, ಮರ ಬಂದು ಮೂರು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಹಲವು ಭಾಗಗಳಿಗೆ ಸಂಪರ್ಕ ಕಡಿತಗೊಂಡಿತ್ತು. ಹಲವಾರು ಮನೆಗಳ ಮೇಲೆ ಗುಡ್ಡ, ಬಂಡೆಕಲ್ಲು, ಮರ ಬಿದ್ದು ಹಾನಿಯಾಗಿತ್ತು. ಸೇತುವೆಗಳ ಮರು ಸಂಪರ್ಕ ಜೋಡಣೆಯೂ ಸಾಧ್ಯವಾಗಿಲ್ಲ.

 ಕಣ್ಣೀರಲ್ಲೇ ದಿನ ಕಳೆಯಬೇಕು
ನಮ್ಮ ಕಷ್ಟವನ್ನು ಯಾರಲ್ಲಿ ಹೇಳುವುದು? ಯಾರೂ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಕಣ್ಣಿರಲ್ಲಿ ದಿನ ಕಳೆಯಬೇಕು. ನಮ್ಮ ಹಣೆಬರಹ ಇಷ್ಟೆ. ಹುಟ್ಟುವಾಗಲೆ ಪಡಕೊಂಡು ಬಂದಿದ್ದೇವೆ.
 - ಚಿನ್ನು ಗುಳಿಕ್ಕಾನ ಸಂತ್ರಸ್ತೆ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next