Advertisement

ಮಳೆಗಾಲ ಬಂತು; ಎಚ್ಚೆತ್ತುಕೊಳ್ಳಲಿ ಆಡಳಿತ

09:06 AM Jun 14, 2019 | Team Udayavani |

ಮಳೆಗಾಲ ಬಂದಿದೆ. ಆದರೆ ಮಳೆಗಾಲಕ್ಕೂ ಮೊದಲೇ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಸಿದ್ಧವಾಗಬೇಕಿದ್ದ, ಸ್ಥಳೀಯಾಡಳಿತ, ಇಲಾಖೆಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಕಾರಣ ಸಮಸ್ಯೆಗಳು ಹಾಗೇ ಉಳಿದಿವೆ. ಹಲವೆಡೆ ಈ ಬಾರಿಯೂ ಚರಂಡಿ ಸಮಸ್ಯೆಯೇ ಬೃಹದಾಕಾರವಾಗಿ ಕಾಡಿದ್ದು, ಕೃತಕ ನೆರೆ ಸೃಷ್ಟಿಯ ಭೀತಿ ಕಾಡಿದೆ.

Advertisement

ಸಮಗ್ರ ಮುನ್ನೆಚ್ಚರಿಕೆ ವರದಿ ಸಿದ್ಧ ಮಾಡಿದ ಆಡಳಿತ
ಕುಂದಾಪುರ: ತಾಲೂಕಿನಾದ್ಯಂತ ಮುಂಗಾರಿಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ವ್ಯಾಪಕ ಅನಾಹುತಕ್ಕೆ ಕಾರಣವಾಗಿತ್ತು. ಆದ್ದರಿಂದ ಈ ಬಾರಿ ಕಂದಾಯ ಇಲಾಖೆ ಎಚ್ಚೆತ್ತುಕೊಂಡಿದೆ. ಮಳೆಗಾಲ ಎದುರಿಸಲು ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡಿದೆ.

ಈ ವರ್ಷದ ಸಿದ್ಧತೆ
ನೆರೆ ಮುನ್ನೆಚ್ಚರಿಕೆಯಾಗಿ ಈಗಾಗಲೇ ಕಂದಾಯ ಉಪ ವಿಭಾಗಾಧಿಕಾರಿ ಡಾ| ಎಸ್‌.ಎಸ್‌. ಮಧುಕೇಶ್ವರ್‌ ಅವರು ಅಧಿಕಾರಿಗಳ ಜತೆ ಸಭೆಗಳನ್ನು ನಡೆಸಿದ್ದಾರೆ. ಪ್ರಕೃತಿ ವಿಕೋಪ ಎದುರಿಸುವ ಕುರಿತು ಯೋಜನೆಯನ್ನೂ (ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ಪ್ಲಾನ್‌) ಮಾಡಿದ್ದಾರೆ. ದೋಣಿ, ಟಿಪ್ಪರ್‌, ಜೆಸಿಬಿ, ಸರಕುಸಾಗಾಟದ ವಾಹನಗಳ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ತುರ್ತು ಅವಶ್ಯಕತೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಗಂಜಿಕೇಂದ್ರಗಳನ್ನು ತೆರೆಯಲು ಅನುಕೂಲವಿರುವ ಶಾಲೆಗಳನ್ನು ಗುರುತಿಸಲಾಗಿದ್ದು ಅಲ್ಲಿಗೆ ಆಹಾರ ಪೂರೈಕೆ ನಡೆಸುವ ಕುರಿತೂ ಯೋಜನೆ ರೂಪಿಸಲಾಗಿದೆ.

ಪಟ್ಟಿ
ತುರ್ತು ಅವಶ್ಯಕತೆಯ ವಾಹನ ಚಾಲಕರ, ಮಾಲಕರ ಪಟ್ಟಿಯಷ್ಟೇ ಅಲ್ಲದೇ ಈಜು ಪರಿಣತರು ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭ ದಿಟ್ಟವಾಗಿ ಕಾರ್ಯಾಚರಣೆ ನಡೆಸಬಲ್ಲ ಸಾಹಸಿಗಳ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಅನಿವಾರ್ಯ ಸಂದರ್ಭ ಇವರನ್ನು ಆಡಳಿತ ಬಳಸಿಕೊಳ್ಳಲಿದೆ. ಜತೆಗೆ ಗ್ರಾಮಾಂತರ ಪ್ರದೇಶದ ಸ್ಥಳೀಯ ಮಾಹಿತಿದಾರರ ಸಂಖ್ಯೆಗಳನ್ನೂ ಸಂಗ್ರಹಿಸಲಾಗಿದೆ. ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟುಹೋಗದಂತೆ ಸೂಚಿಸಲಾಗಿದೆ.

ಸಭೆ
ಅಗ್ನಿಶಾಮಕ, ಪೊಲೀಸ್‌, ಅರಣ್ಯ, ಶಿಕ್ಷಣ, ತಾಲೂಕು ಪಂಚಾಯತ್‌, ಕಂದಾಯ, ಲೋಕೋಪಯೋಗಿ ಇಲಾಖೆ, ಜಿ.ಪಂ. ಎಂಜಿನಿಯರಿಂಗ್‌ ವಿಭಾಗ, ಮೆಸ್ಕಾಂ, ಬಂದರು, ಮೀನುಗಾರಿಕೆ, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಮೊದಲಾದ ಇಲಾಖೆಗಳ ಮುಖ್ಯಸ್ಥರ ಸಭೆ ಒಮ್ಮೆ ನಡೆಸಲಾಗಿದ್ದು ಇನ್ನೊಮ್ಮೆ ಸಭೆ ನಡೆಯಲಿದೆ.

Advertisement

ಪರಿಹಾರ
ಕಳೆದ ವರ್ಷ ಮಳೆ ಸಂದರ್ಭ ಉಂಟಾದ ಹಾನಿಗೆ ಸೂಕ್ತ ಪರಿಹಾರ ವಿತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 120 ಪ್ರಕರಣಗಳು ತಾಂತ್ರಿಕ ಕಾರಣದಿಂದ ಪರಿಹಾರ ವಿತರಣೆಯಾಗದೇ ಬಾಕಿಯಾಗಿದ್ದವು. ಇವುಗಳನ್ನು ಶೀಘ್ರ ವಿತರಿಸಲಾಗುವುದು ಎಂದು ಎಸಿ ಡಾ| ಎಸ್‌.ಎಸ್‌. ಮಧುಕೇಶ್ವರ್‌ ಅವರು ತಿಳಿಸಿದ್ದಾರೆ.

ಮೆಸ್ಕಾಂನಿಂದ ಸಿದ್ಧತೆ
ಮಳೆ ಬರುವ ಮೊದಲೇ ಬೇಸಗೆಯಲ್ಲೇ ಮೆಸ್ಕಾಂ ಅಪಾಯಕಾರಿ ಮರಗಳನ್ನು, ಗೆಲ್ಲುಗಳನ್ನು ತೆರವುಗೊಳಿಸಿ ಮಳೆಗಾಲಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಮೆಸ್ಕಾಂ ವತಿಯಿಂದ 24 ತಾಸು ಕಾರ್ಯನಿರ್ವಹಿಸುವ ಸಹಾಯವಾಣಿ ಒದಗಿಸಲಾಗಿದೆ. ಗುತ್ತಿಗೆದಾರರ ಜತೆಗೂ ಸಂಪರ್ಕ ಸಾಧಿಸಲಾಗಿದ್ದು ದೂರು ಬಂದಲ್ಲಿ ತತ್‌ಕ್ಷಣ ತೆರಳಿ ಟ್ರಾನ್ಸ್‌ಫಾರ್ಮರ್‌ ಬದಲಾವಣೆ ಸೇರಿದಂತೆ ಇತರ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿದೆ.

ಪುರಸಭೆ
ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಕೂಡಾ ಚರಂಡಿ ಸ್ವತ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ರಾ.ಹೆ. ಕಾಮಗಾರಿ ಅವ್ಯವಸ್ಥೆಯಿಂದ ನಗರದ ಜನತೆಗೆ ಸಂಕಷ್ಟವಾಗಿದೆ. ಹೆದ್ದಾರಿ ಬದಿ ಚರಂಡಿ ದುರಸ್ತಿಯಾಗದ್ದರಿಂದ ಒಂದೆರೆಡು ಮಳೆಗೆ ನೀರು ರಸ್ತೆಯಲ್ಲಿ ನಿಂತಿರುತ್ತದೆ. ರಾಜಕಾಲುವೆ ಸ್ವತ್ಛತೆ, ದುರಸ್ತಿಗೆ 18.16 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಕಳುಹಿಸಲಾಗಿದೆ.

ಮಳೆಗಾಲ ಎದುರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿದ್ದು ಆಡಳಿತ ಸಜ್ಜಾಗಿದೆ. ಕಂಟ್ರೋಲ್‌ ರೂಂ ತೆರೆಯಲಾಗಿದೆ. ಎಸಿಯವರು ಸಭೆ ನಡೆಸಿದ್ದಾರೆ. ತುರ್ತು ಸ್ಥಿತಿ ಎದುರಿಸಲು ಬೇಕಾದ ಸಿದ್ಧತೆಗಳನ್ನು ಕೂಡ ಮಾಡಲಾಗಿದೆ.
– ಇಂದು ಎಂ.,
ಮುಖ್ಯಾಧಿಕಾರಿ, ಪುರಸಭೆ

ಪ್ರಕೃತಿ ವಿಕೋಪ ಸಂದರ್ಭ ಜೀವಹಾನಿ, ಬೆಳೆಹಾನಿ ಕನಿಷ್ಟ ಪ್ರಮಾಣದಲ್ಲಿ ಆಗುವಂತೆ ಸಿದ್ಧತೆಗಳನ್ನು ಮಾಡಲಾಗಿದೆ. ಅಪಾಯಕಾರಿ ಮರಗಳ ತೆರವಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ತೆಂಗಿನ ಮರಗಳಿಂದ ಅಪಾಯ ಇದೆ ಎಂದು ಯಾರದರೂ ದೂರಿದಲ್ಲಿ ಅದರ ತೆರವಿಗೂ ಸೂಚಿಸಲಾಗಿದೆ. ಅದರ ಮಾಲಕರಿಗೆ ತೋಟಗಾರಿಕಾ ಇಲಾಖೆ ಮೂಲಕ ಮೌಲ್ಯಮಾಪನ ಮಾಡಿಸಿ ಬೆಳೆ ಪರಿಹಾರ ನೀಡಿ, ಮರ ಕಡಿಯುವ ಹಾಗೂ ಸಾಗಾಟದ ವೆಚ್ಚವನ್ನು, ಮೌಲ್ಯಮಾಪನವನ್ನು ದೂರುದಾರರಿಂದ ಭರಿಸಿ ತೆರವುಗೊಳಿಸಲಾಗುವುದು. ತಾಲೂಕು ಕಚೇರಿಯಲ್ಲಿ 24 ಗಂಟೆ ಸಹಾಯವಾಣಿ ಸ್ಥಾಪಿಸಲಾಗಿದೆ.
– ಡಾ| ಎಸ್‌.ಎಸ್‌. ಮಧುಕೇಶ್ವರ್‌, ಸಹಾಯಕ ಕಮಿಷನರ್‌, ಕುಂದಾಪುರ

ದೂರುಬಂದಲ್ಲಿಗೆ ತೆರಳಿ ತತ್‌ಕ್ಷಣ ಕಾಮಗಾರಿ ನಡೆಸಲಾಗುವುದು. ಅದಕ್ಕೆ ಬೇಕಾದ ಸಿಬಂದಿ, ಸೌಕರ್ಯ, ಸಲಕರಣೆಗಳು ನಮ್ಮ ಸಂಗ್ರಹದಲ್ಲಿದೆ. ಪುರಸಭೆ ವ್ಯಾಪ್ತಿಯಲ್ಲಿ ಕ್ರೇನ್‌ಗಳನ್ನು ಬಳಸಿ ಮಂಗಳವಾರ ಗೆಲ್ಲುಗಳನ್ನು ಕಡಿಯಲಾಗಿದೆ.
– ರಾಘವೇಂದ್ರ, ಸಹಾಯಕ ಎಂಜಿನಿಯರ್‌, ಮೆಸ್ಕಾಂ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next