Advertisement

ಭರಣಿ ಮಳೆಯ ಅಬ್ಬರಕ್ಕೆ ಜನ ತತ್ತರ

11:25 AM Apr 30, 2017 | Harsha Rao |

ಬೆಂಗಳೂರು: ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ರಾಮನಗರ, ದೊಡ್ಡಬಳ್ಳಾಪುರ ಸೇರಿ ರಾಜ್ಯದ ಹಲವೆಡೆ ಶನಿವಾರ ಭರಣಿ ಮಳೆ ಅಬ್ಬರಿಸಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಯಿತು. ಶನಿವಾರ ಮುಂಜಾನೆ
8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ 12 ಸೆಂ.ಮೀ.ಗಳಷ್ಟು ಮಳೆ ಸುರಿಯಿತು. ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ವೇಳೆ ಅಬ್ಬರಿಸಿದ ಗಾಳಿಸಹಿತ ಭಾರೀ ಮಳೆಗೆ 15ಕ್ಕೂ ಹೆಚ್ಚು ಮರಗಳು ಧರೆಗುರುಳಿದವು. ಕೆಂಗೇರಿ ಉಪನಗರದಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ.
ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿ, ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

Advertisement

ಶಿವಮೊಗ್ಗದಲ್ಲಿ ಮಧ್ಯಾಹ್ನ 2.30ರ ವೇಳೆಗೆ ಆರಂಭಗೊಂಡ ಮಳೆ ಸುಮಾರು ಒಂದೂವರೆ ತಾಸು ನಿರಂತರವಾಗಿ ಸುರಿಯಿತು. ಗುಡುಗು, ಸಿಡಿಲು, ಮಿಂಚಿನ ಅರ್ಭಟ ಕೂಡ ಜೋರಾಗಿತ್ತು. ರಾಮನಗರ ಜಿಲ್ಲೆ ಚನ್ನಪಟ್ಟಣ ಸುತ್ತಮುತ್ತ ಆಲಿಕಲ್ಲು ಸಹಿತ ಗಾಳಿ, ಮಳೆಗೆ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಮರಗಳು ಧರಾಶಾಯಿಯಾಗಿದ್ದು,
ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಮಗಳೂರಿನ ಹಲವೆಡೆ ಮಧ್ಯಾಹ್ನ 1.30ರ ನಂತರ ಆರಂಭವಾದ ಆಲಿಕಲ್ಲು ಸಹಿತ ಮಳೆ 1 ತಾಸಿಗೂ ಅಧಿಕ ಕಾಲ ಸುರಿಯಿತು. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು,
ರಾಜಕಾಲುವೆ ಅಂಚಿನ ಕೆಲವು ಮನೆಗಳಿಗೆ ನೀರು ನುಗ್ಗಿತು. ಬೆಳಗಾವಿಯಲ್ಲಿ ಮಧ್ಯಾಹ್ನದ ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಗುಡುಗು-ಸಿಡಿಲು ಮಿಶ್ರಿತ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಅಲ್ಲದೆ, ಬೈಲಹೊಂಗಲ, ಚಿಕ್ಕೋಡಿ, ಹುಕ್ಕೇರಿ, ಗೋಕಾಕ ಸೇರಿ ಜಿಲ್ಲೆಯ ಹಲವು ತಾಲೂಕಿನಲ್ಲಿ ಜಿಟಿಜಿಟಿ ಮಳೆಯಾಗಿದೆ. ಇದೇ
ವೇಳೆ, ರಾಣೆಬೆನ್ನೂರಿನಲ್ಲಿ 5, ಹಾವೇರಿ ಎಪಿಎಂಸಿ, ಚಿಂತಾಮಣಿಗಳಲ್ಲಿ ತಲಾ 3 ಸೆಂ.ಮೀ.ಗಳಷ್ಟು ಮಳೆಯಾದ ವರದಿಯಾಗಿದೆ.

ರಾಜ್ಯದ ಹಲವೆಡೆ ಇಂದೂ ಮಳೆ ಸಂಭವ
ರಾಜ್ಯದ ಕರಾವಳಿಯಲ್ಲಿ ಒಣಹವೆ ಇತ್ತು. ಉತ್ತರ ಒಳನಾಡಿನ ಕೆಲವೆಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಸಾಮಾನ್ಯವಾಗಿತ್ತು. ಕಲಬುರಗಿಯಲ್ಲಿ
ರಾಜ್ಯದಲ್ಲಿಯೇ ಗರಿಷ್ಠವೆನಿಸಿದ 41 ಡಿ.ಸೆ. ತಾಪಮಾನ ದಾಖಲಾಯಿತು. ಸೋಮವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ, ಉತ್ತರ ಒಳನಾಡು ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮಾರುತಗಳು ಚುರುಕುಗೊಂಡಿರುವುದು ಹಾಗೂ ತಮಿಳುನಾಡಿನಿಂದ ಪಶ್ಚಿಮ ಬಂಗಾಳವರೆಗೆ ಕಡಿಮೆ
ಒತ್ತಡದ ತಗ್ಗು ಪ್ರದೇಶ (ಟ್ರಫ್) ಉಂಟಾಗಿದ್ದು, ಅದು ರಾಜ್ಯದ ಮೇಲೂ ಹಾದುಹೋಗಿದೆ. ಇದರಿಂದ ಮಳೆಯಾಗುತ್ತಿದೆ ಎಂದು ಕೆಎಸ್‌ಎನ್‌ ಡಿಎಂಸಿ ವಿಜ್ಞಾನಿಗಳು ತಿಳಿಸಿದ್ದಾರೆ. 

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರಗಳು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ವಿವೇಕಾನಂದನಗರಗಳಲ್ಲಿ ತೆಂಗಿನ ತೋಟದಲ್ಲಿದ್ದ ತೆಂಗಿನಮರಗಳಿಗೆ ಸಿಡಿಲು ಬಡಿದಿದ್ದು, ಎರಡು
ತೆಂಗಿನ ಮರಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಆದರೆ, ಸುತ್ತಮುತ್ತಲ ಮನೆಗಳಲ್ಲಿದ್ದವರು ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next