Advertisement
ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಸುರಿದ ಧಾರಾಕಾರ ಮಳೆಯ ಪರಿಣಾಮ ನಗರದ ಹಲವಾರು ಬಡಾವಣೆಗಳು ಜಲಾವೃತಗೊಂಡವು. ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಅಂಜನಾಪುರ, ಗೊಟ್ಟಿಗೆರೆ, ಜೆ.ಪಿ.ನಗರ, ಎಚ್‌ಎಸ್‌ಆರ್ ಬಡಾವಣೆ, ಕೋರಮಂಗಲ ಸೇರಿ ಪ್ರಮುಖ ಬಡಾವಣೆಗಳ ಹಲವು ಭಾಗಗಳು ಬಹುತೇಕ ಜಲಾವೃತಗೊಂಡಿದ್ದವು. ಹಲವಾರು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಯಿತು.
Related Articles
Advertisement
ತುಂಬಿದ ಚಿತ್ರಾವತಿ:ಚಿಕ್ಕಬಳ್ಳಾಪುರ ಸುತ್ತಮುತ್ತ ಸುಮಾರು 4 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಸುಮಾರು ವರ್ಷಗಳಿಂದ ಬತ್ತಿಹೋಗಿದ್ದ ಚಿತ್ರಾವತಿ ನದಿ ತುಂಬಿ ಹರಿಯುತ್ತಿದೆ. ನದಿಯ ನೀರು ಉಕ್ಕಿ ಜಮೀನುಗಳಲ್ಲಿ ತುಂಬಿ ಹರಿದಿದೆ. ಕೆಲವು ಚೆಕ್ ಡ್ಯಾಂಗಳಲ್ಲಿ ಸಹ ನೀರು ಜೋರಾಗಿ ಹರಿದಿದೆ. ಸಂಪೂರ್ಣವಾಗಿ ಬತ್ತಿಹೋಗಿದ್ದ ನಗರದ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಕೂಡ ನೀರು ತುಂಬಿದೆ. ಕೆಲವೆಡೆ ಮನೆಗಳಿಗೆ ನುಗ್ಗಿದೆ. ಇದೇ ವೇಳೆ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ ಕೆಲವೆಡೆಯೂ ಮಳೆಯಾಯಿತು. ಈ ಮಧ್ಯೆ, ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಹೆಚ್ಚಿನೆಡೆ ಹಾಗೂ ಕರಾವಳಿಯ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಪ್ರಕಟಣೆ ತಿಳಿಸಿದೆ.