ಕೊಪ್ಪಳ: ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಮಳೆಯ ಸುಳಿವನ್ನೇ ಕಾಣದೇ ಕಂಗಾಲಾಗಿದ್ದ ಜನತೆಗೆ ಮಂಗಳವಾರ ಸ್ವಲ್ಪ ನಿರಾಳತೆಯ ಭಾವನೆ ಕಂಡಿದೆ. ಕೊಪ್ಪಳ ತಾಲೂಕಿನ ಕೆಲವೆಡೆ ಮಳೆಯಾಗಿದ್ದು ರೈತರಲ್ಲಿ ಖುಷಿ ತಂದಿದೆ.
ಸತತ ಬರದ ಪರಿಸ್ಥಿತಿಯಿಂದಾಗಿ ಜಿಲ್ಲೆಯ ರೈತರು ತುಂಬ ಸಂಕಷ್ಟ ಅನುಭವಿಸಿದ್ದರು. ಮಳೆ ಎಂದು ಬರಲಿದೆಯೋ ಎಂದು ಚಿಂತೆಯಲ್ಲಿ ಮುಳುಗಿದ್ದರು. ಪ್ರಸಕ್ತ ವರ್ಷ ಮುಂಗಾರಿನಲ್ಲಿ ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ ಸಕಾಲಕ್ಕೆ ಮಳೆಯಾಗಿರಲಿಲ್ಲ. ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಮಳೆಯಾಗಿದ್ದು ಬಿಟ್ಟರೆ ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನಲ್ಲಿ ಹೇಳಿಕೊಳ್ಳುವಂತ ಮಳೆಗಳೇ ಆಗಿರಲಿಲ್ಲ. ಇದರಿಂದ ಚಿಂತೆಯಲ್ಲಿ ಮುಳುಗಿದ್ದ ಜನರು ವರುಣನಿಗಾಗಿ ಹಗಲಿರುಳು ಜಪ ಮಾಡುತ್ತಿದ್ದರು, ಸ್ವತಃ ಸರ್ಕಾರವೇ ತಾಲೂಕಿನ ಹುಲಿಗೆಮ್ಮ ದೇವಸ್ಥಾನದಲ್ಲಿ ಪರ್ಜನ್ಯ ಜಪ, ಹೋಮ ಮಾಡಿಸಲಾಗಿತ್ತು. ಆದರೂ ಸಕಾಲಕ್ಕೆ ಮಳೆಯಾಗಿರಲಿಲ್ಲ.
ಮಳೆಗಾಗಿ ಎಲ್ಲೆಡೆ ಜಪ, ಹೋಮಗಳು ನಡೆದಿದ್ದವು. ಅಂತೂ ವರುಣ ರೈತರ ಕೂಗಿಗೆ ಕಣ್ತೆರೆದಂತೆ ಕಾಣುತ್ತಿದೆ. ಮಂಗಳವಾರ ವಿವಿಧ ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ಕೊಪ್ಪಳ ತಾಲೂಕಿನ ಕೆಲವು ಹೋಬಳಿಯಲ್ಲಿ ಮಾತ್ರ ಮಳೆಯಾಗಿದ್ದು, ಉಳಿದಂತೆ ಇನ್ನೂ ಸಮೃದ್ಧಿ ಮಳೆಯಾಗಿಲ್ಲ. ಇನ್ನೂ ಯಲಬುರ್ಗಾ ತಾಲೂಕಿನ ಕೆಲವೆಡೆ ತುಂತುರು ಮಳೆಯಾಗಿದ್ದು ಬಿಟ್ಟರೆ, ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿ ಹೋಬಳಿಯಲ್ಲಿ ಮಳೆಯ ಸುಳಿವು ಇಲ್ಲದಂತಾಗಿದೆ.
ಇನ್ನೂ ಮಂಗಳವಾರ ಕೊಪ್ಪಳ ಗ್ರಾಮೀಣ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಜನರು ಫುಲ್ ಖುಷಿಯಲ್ಲಿದ್ದರು, ಅಂತೂ ಮಳೆಯಾಯಿತಲ್ಲ. ನಮ್ಮ ನಿತ್ಯದ ಕಾರ್ಯಗಳಿಗೆ ತುಂಬ ಅನುಕೂಲವಾಗಲಿದೆ ಎಂದು ಖುಷಿಯಲ್ಲಿದ್ದರು. ಬಿತ್ತನೆಗೆ ಸದ್ದಿಲ್ಲದೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಇನ್ನೂ ಕೊಪ್ಪಳ ನಗರದಲ್ಲಿ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಮಳೆಯ ಆರ್ಭಟಕ್ಕೆ ಜನ ಖುಷಿಯಲ್ಲಿದ್ದರೆ, ರಸ್ತೆಗಳೆಲ್ಲವೂ ನೀರಿನಿಂದ ತುಂಬಿದ್ದವು. ಚರಂಡಿಗಳು ಭರ್ತಿಯಾಗಿ ಹರಿದವು. ಮಳೆಯ ಆರ್ಭಟದ ಮಧ್ಯೆಯೂ ಜನರು ವಾಹನದಲ್ಲಿ ಸಂಚಾರ ಮಾಡುತ್ತಿದ್ದರು.