Advertisement

ಮಳೆಗೆ ನೆನಪಾಗುವ ರಾಜಕಾಲುವೆ

11:37 AM May 06, 2017 | |

ಬೆಂಗಳೂರಿನ ಕೆಲ ಪ್ರದೇಶಗಳಿಗೆ ಮಳೆ ಎಂದರೆ ಅಕ್ಷರಶಃ ದುಸ್ವಪ್ನ!  ಕೆರೆ, ಕಾಲುವೆ, ರಾಜಕಾಲುವೆಗಳ ಸುತ್ತಲ ಪ್ರದೇಶಗಳು ಮಳೆಗೆ ಜಾಲಾವೃತಗೊಂಡು ಜನರ ಬದುಕು ದುಸ್ತರವಾಗುತ್ತದೆ. ಕಳೆದ ಬಾರಿ ಹೆಚ್ಚಿನ ಮಟ್ಟದಲ್ಲೇ ಅನಾಹುತ ಸಂಭವಿಸಿತ್ತು. ಹೀಗಾಗಿ ಆಡಳಿತ ವರ್ಗ ರಾಜಕಾಲುವೆ ಒತ್ತುವರಿ ತೆರವು, ಹೂಳೆತ್ತುವಿಕೆ, ಕಾಲುವೆಗೆ ತಡೆಗೋಡೆ ನಿರ್ಮಿಸುವಿಕೆಗೆ ಕೈ ಹಾಕಿತ್ತು.

Advertisement

ಆದರೆ, ಮಳೆ ನಿಂತಂತೆ ಪರಿಹಾರ ಕಾಮಗಾರಿಗಳೂ ನಿಂತು ಹೋಗಿವೆ. ಈ ಹಿನ್ನೆಲೆಯಲ್ಲಿ ನಗರದ ನಾಲ್ಕು ಕಣಿವೆಗಳಾದ ಕೋರಮಂಗಲ, ಚಲ್ಲಘಟ್ಟ, ಹೆಬ್ಟಾಳ ಹಾಗೂ ವೃಷಭಾವತಿ ಕಣಿವೆಗಳ ಸ್ಥಿತಿಗತಿ, ಅನಾಹುತ ಸಂಭಾವ್ಯ ಸ್ಥಳಗಳು, ಅಲ್ಲಿನ ತೊಂದರೆಗಳ ಕುರಿತು “ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ.
 

ಬೆಂಗಳೂರು: ರಾಜಧಾನಿಯಲ್ಲಿ ಮಳೆ ಬಂದರೆ ರಾಜಕಾಲುವೆಗಳಲ್ಲಿ ಪ್ರವಾಹ ಭೀತಿ ಎದುರಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಮಳೆಗಾಲದಲ್ಲಿ  ಜೋರು ಮಳೆ ಸುರಿದರೆ ರಾಜಕಾಲುವೆ ತುಂಬಿ ನೀರು ಸುತ್ತಮುತ್ತಲಿನ ಪ್ರದೇಶಗಳಿಗೆ ನುಗ್ಗಿ ಜನತೆ ತೊಂದರೆ ಅನುಭವಿಸುವುದು ಹಲವು ವರ್ಷಗಳಿಂದ ನಡೆದಿದೆ.

ರಾಜಕಾಲುವೆಗಳ ತಡೆಗೋಡೆಗಳ ನಿರ್ಮಾಣ, ಕಾಲುವೆಗಳಲ್ಲಿ ಹೂಳೆತ್ತುವುದು, ವಿನ್ಯಾಸ ನವೀಕರಿಸುಧಿವುದು ಮತ್ತು ತಂತಿಬೇಲಿ ಅಳವಡಿಕೆಗೆ ಬಿಬಿಎಂಪಿ ಹತ್ತು ವರ್ಷಗಳಲ್ಲಿ ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದರೂ ಸಮಸ್ಯೆ ಮಾತ್ರ ಸಂಪೂರ್ಣ ಬಗೆಹರಿದಿಲ್ಲ. ಇದರಿಂದ ಪ್ರತಿವರ್ಷ ಮಳೆಗಾಲ ಬಂದಾಗ ಕಾಲುವೆಯ ನೀರು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಿಯುವುದು, ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ನಾಗರಿಕರು ರಾತ್ರಿಯಿಡೀ ಜಾಗರಣೆ ಮಾಡುವುದು ತಪ್ಪಿಲ್ಲ.

 ನಗರದಲ್ಲಿನ 842 ಕಿಲೋ ಮೀಟರ್‌ ಉದ್ದದ ರಾಜಕಾಲುವೆಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಬಜೆಟ್‌ಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಮೀಸಲಿಟ್ಟಿವೆ. ಇಷ್ಟಾದರೂ ಪಾಲಿಕೆಯ ಅಧಿಕಾರಿಗಳು ಶೀಘ್ರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಕೈಗೆತ್ತಿಕೊಂಡು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಫ‌ಲವಾಗಿಲ್ಲ ಎಂಬ ಆರೋಪವಿದೆ. 

Advertisement

ಕಳೆದ ವರ್ಷ ನಗರದಲ್ಲಿ ಸುರಿದ ಭಾರಿ ಮಳೆಗೆ ಬೊಮ್ಮನಹಳ್ಳಿ ಭಾಗದ ಹಲವು ಪ್ರದೇಶಗಳು ಜಲಾವೃತಧಿಗೊಂಡಿದ್ದವು. ಪರಿಣಾಮ ಹಲವಾರು ಬಡಾವಣೆಗಳ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಈ ವೇಳೆ ಸ್ವತಃ ಮುಖ್ಯಮಂತ್ರಿಗಳು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಹಾಗೂ ರಾಜಕಾಲುವೆಗಳ ತಡೆಗೋಡೆಗಳ ನಿರ್ಮಾಣ ಹಾಗೂ ಹೂಳೆತ್ತುವ ಕಾರ್ಯಕ್ಕೆ ಆದ್ಯತೆ ಮೇಲೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಆದೇಶಿಸಿದ್ದರು. 

ರಾಜಕಾಲುವೆಗಳ ನಿರ್ವಹಣೆಗಾಗಿಯೇ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ. ಪಾಲಿಕೆಯಿಂದ ಕಳೆದ ಸಾಲಿಧಿನಲ್ಲಿ ಕೇಂದ್ರ ಭಾಗದಲ್ಲಿನ 224 ಸ್ಥಳಗಳು ಸೇರಿದಂತೆ ರಾಜಕಾಲುವೆಗಳ ಅಕ್ಕಪಕ್ಕದಲ್ಲಿ ಅನಾಹುತ ಎದುರಾಧಿಗುವ ಪ್ರದೇಶಗಳು ಸೇರಿ ಒಟ್ಟು 509 ಅನಾಹುತ ಸಂಭಾವ್ಯ ಪ್ರದೇಶಗಳನ್ನು ಗುರುತಿಸಲಾಗಿತ್ತು. 

ಕಳೆದ ಒಂದು ವರ್ಷದಿಂದ ಸುಮ್ಮನಿದ್ದ ಪಾಲಿಕೆಯ ಅಧಿಕಾರಿಗಳು ಕಳೆದ ಎರಡು ತಿಂಗಳಿಂದ 509 ಪ್ರದೇಶಗಳ ಪೈಕಿ 214 ಪ್ರದೇಶಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಆದರೆ, ಮಳೆಗಾಲ ಆರಂಭವಾಗುಧಿವುದರೊಳಗೆ ಕಾಮಗಾರಿಗಳು ಪೂರ್ಣಗೊಳ್ಳವುದೇ ಎಂಬ ಪ್ರಶ್ನೆ ಎದುರಾಗಿದೆ. ಜತೆಗೆ ರಾಜಕಾಲುವೆಗಳಲ್ಲಿ ಮಳೆ ಬಂದಾಗ ಪ್ರವಾಹ ಉಂಟಾಗಲು ಒತ್ತುವರಿ ತೆರವುಗೊಳಿಸದಿರುವುದು ಪ್ರಮುಖ ಕಾರಣ ಎಂಬುದು ಸತ್ಯ.

ಆದರೆ, ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದರೆ ರಾಜಕೀಯ ಒತ್ತಡ, ಸ್ಥಳೀಯರ ಪ್ರಭಾವ ಮತ್ತಿತರ ಕಾರಣಗಳಿಗೆ ಅಡ್ಡಿ ಯುಂಟಾಗುತ್ತಿದೆ. ನಗರದ ಹಲವು ಭಾಗಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತಾದರೂ ನಂತರ ಏಕಾಏಕಿ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿತು. ಹೀಗಾಗಿ, ಪ್ರಭಾವಿಗಳ ಒತ್ತುವರಿಗೆ ಬಡವರು ನಲುಗುವಂತಾಗಿದೆ. 

ಸ್ಥಿತಿ ಏನು?
ಬಿಬಿಎಂಪಿ ವ್ಯಾಪ್ತಿಯ 842 ಕಿ.ಮೀ. ಪೈಕಿ ಈವರೆಗೆ ಕೇವಲ 142 ಕಿ.ಮೀ. ಉದ್ದದ ಕಾಲುವೆಗಳಲ್ಲಿ ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 212 ಕಿ.ಮೀ. ಉದ್ದದ ಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಷ್ಟಾದರೂ ಇನ್ನೂ ಸುಮಾರು 388 ಕಿ.ಮೀ. ಉದ್ದದ ಕಾಂಕ್ರಿಟ್‌ ಕಾಲುವೆಗಳ ನಿರ್ಮಾಣ ಕಾರ್ಯ ಬಾಕಿಯಿದೆ. ಅನಾಹುತ ಸಂಭಾವ್ಯ ಪ್ರದೇಶಗಳಲ್ಲಿನ ತಡೆಗೋಡೆ  ಸದೃಢಗೊಳಿಸಲು ಅಧಿಕಾರಿಗಳು  ಇನ್ನೂ ಕ್ರಿಯಾ ಯೋಜನೆ ರೂಪಿಸಬೇಕಿದೆ.  

ನಿತ್ಯ 500 ಟನ್‌ ತ್ಯಾಜ್ಯ
ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ಎಲ್ಲ ರೀತಿಯ ತ್ಯಾಜ್ಯಗಳು ರಾಜಕಾಲುವೆಗೆ ಸೇರುತ್ತಿವೆ. ಇದರಿಂದಾಗಿ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ತೊಡಕು ಉಂಟಾಗಿದ್ದು, ಅಂದಾಜಿನ ಪ್ರಕಾರ ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ 4 ಸಾವಿರ ಟನ್‌ ತ್ಯಾಜ್ಯದ ಪೈಕಿ ಸುಮಾರು 500 ಟನ್‌ನಷ್ಟು ತ್ಯಾಜ್ಯ ಕಾಲುವೆಗಳಿಗೆ ಸೇರುತ್ತಿದೆ. ಇದರಿಂದಾಗಿ ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ.

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next