Advertisement

ಮಳೆ ನಿಂತರೂ ಮುಗಿದಿಲ್ಲ ಆತಂಕ

12:14 AM Aug 13, 2019 | mahesh |

ತಿರುವನಂತಪುರ/ಹೊಸದಿಲ್ಲಿ: ವಾರದಿಂದ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌ ಮತ್ತಿತರ ರಾಜ್ಯಗಳ ಜನರನ್ನು ಬೆಂಬಿಡದೇ ಕಾಡಿದ್ದ ಮಳೆ ಹಾಗೂ ಪ್ರವಾಹ ಸೋಮವಾರ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ವರುಣನ ಆರ್ಭಟ ತಗ್ಗಿದ ಕಾರಣ, ಪ್ರವಾಹವೂ ಕಡಿಮೆಯಾಗಿದ್ದು ಸಂತ್ರಸ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಕೇರಳ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಗೆ ಇದರ ನಡುವೆಯೇ ಮತ್ತೂಂದು ಆಘಾತ ಕಾದಿದೆ. ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ 48 ಗಂಟೆಗಳ ಅವಧಿಯಲ್ಲಿ ಮತ್ತೆ ವರುಣ ಅಬ್ಬರಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Advertisement

ಮಂಗಳವಾರ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಕೇಂದ್ರ ಹಾಗೂ ದಕ್ಷಿಣ ಕೇರಳಗಳಲ್ಲಿ ಅಂದರೆ ಇಡುಕ್ಕಿ, ಅಳಪ್ಪುಳ ಜಿಲ್ಲೆ, ಮೂವತ್ತುಪುಳ, ಎರ್ನಾಕುಳಂನ ಸುತ್ತಮುತ್ತಲಿನ ಪ್ರದೇಶಗಳು, ಕೊಟ್ಟಾಯಂನ ಪೂರ್ವ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ. ಹೀಗಾಗಿ, ಶುಕ್ರವಾರದವರೆಗೂ ಎಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ.

ಕೇರಳದಲ್ಲಿ ಸಾವಿನ ಸಂಖ್ಯೆ 83: ಕೇರಳದ ಬಹುತೇಕ ಭಾಗಗಳಲ್ಲಿ ಸೋಮವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹವೂ ಇಳಿಮುಖವಾಗಿದೆ. ಆದರೆ ಮಳಪ್ಪುರಂನ ಕವಲಪ್ಪಾರಾ ಮತ್ತು ಪುತ್ತುಮಾಲಾದಲ್ಲಿ ಉಂಟಾದ ಭೀಕರ ಭೂಕುಸಿತದ ಅವಶೇಷಗಳಡಿ ಇನ್ನೂ ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಮಳೆ, ಪ್ರವಾಹ, ಭೂಕುಸಿತ ಸಂಬಂಧಿ ಘಟನೆಗಳಿಂದ ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ ಸೋಮವಾರ 83 ತಲುಪಿದೆ. ಇನ್ನೂ 58 ಮಂದಿ ನಾಪತ್ತೆ ಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. 2.87 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸೋಮವಾರ ಎಲ್ಲ ಜಿಲ್ಲೆಗಳ ರೆಡ್‌ ಅಲರ್ಟ್‌ಗಳನ್ನೂ ವಾಪಸ್‌ ಪಡೆಯಲಾಗಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರವಿವಾರದಿಂದಲೂ ಸ್ವಕ್ಷೇತ್ರ ವಯನಾಡ್‌ನ‌ಲ್ಲೇ ಮೊಕ್ಕಾಂ ಹೂಡಿದ್ದು, ಸೋಮವಾರ ಬೆಳಗ್ಗೆ ತಿರುವಂಬಾಡಿಯ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ಸಂತ್ರಸ್ತರ ಪುನರ್ವಸತಿಗೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಜತೆಗೆ, ಪರಿಹಾರ ಸಾಮಗ್ರಿಗಳನ್ನೂ ವಿತರಿಸಿದ್ದು, ಸಂತ್ರಸ್ತರಿಗೆ ಸಾಧ್ಯವಾದಷ್ಟು ಸಹಾಯ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಈ ನಡುವೆ, ರವಿವಾರ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉದ್ದೇಶಪೂರ್ವಕವಾಗಿಯೇ ಕೇರಳಕ್ಕೆ ಭೇಟಿ ನೀಡಿಲ್ಲ ಎಂದು ಸಿಪಿಎಂ ಪಾಲಿಟ್‌ಬ್ಯೂರೋ ಆರೋಪಿಸಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಕ್ಕೆ ಮಾತ್ರ ಭೇಟಿ ನೀಡಿ, ಕೇರಳವನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದೆ.

Advertisement

ಬೀದಿಬದಿ ವ್ಯಾಪಾರಿಯ ಮಾನವೀಯ ಮುಖ
ಕೊಚ್ಚಿಯ ಬೀದಿಬದಿಯ ವ್ಯಾಪಾರಿಯೊಬ್ಬರ ಹೃದಯವು ಪ್ರವಾಹ ಸಂತ್ರಸ್ತರಿಗಾಗಿ ಮಿಡಿದಿದೆ. ಈ ವ್ಯಾಪಾರಿಯ ಹೃದಯ ವೈಶಾಲ್ಯತೆಯು ಜನರ ಮನ ತಟ್ಟಿದೆ. ಬಕ್ರೀದ್‌ ವೇಳೆ ಸಾಮಾನ್ಯವಾಗಿ ಬೀದಿಬದಿಯ ವ್ಯಾಪಾರಿಗಳಿಗೆ ಸುಗ್ಗಿ. ಹೆಚ್ಚಿನ ವ್ಯಾಪಾರ ಆಗುತ್ತದೆ ಎಂಬ ಉದ್ದೇಶದಿಂದಲೇ ನೌಶಾದ್‌ ಎಂಬ ವ್ಯಾಪಾರಿಯು ಹೊಸ ಹೊಸ ಉಡುಪುಗಳ ಬಂಡಲ್‌ಗ‌ಳನ್ನು ತಂದು ಗೋದಾಮಿನಲ್ಲಿ ಇಟ್ಟಿದ್ದರು. ಬೀದಿಬದಿಯಲ್ಲಿ ಬಟ್ಟೆಗಳನ್ನಿಟ್ಟು ಮಾರಾಟ ಮಾಡುವ ನೌಶಾದ್‌ ಈಗ ಈ ಬಟ್ಟೆಯ ಬಂಡಲ್‌ಗ‌ಳನ್ನೇ ನೆರೆ ಸಂತ್ರಸ್ತರಿಗೆ ದಾನವಾಗಿ ನೀಡಿದ್ದಾರೆ. ಗೋದಾಮಿನಿಂದ ಬಟ್ಟೆಗಳ ಬಂಡಲ್‌ಗ‌ಳನ್ನು ಪ್ಯಾಕ್‌ ಮಾಡಿ, ವಾಹನಗಳಿಗೆ ತುಂಬುತ್ತಿರುವ ನೌಶಾದ್‌ರ ವೀಡಿಯೋ ಈಗ ವೈರಲ್‌ ಆಗಿದ್ದು, ಅವರ ಮಾನವೀಯತೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಸಂಚಾರಕ್ಕೆ ಹೆದ್ದಾರಿ ಮುಕ್ತ
ಭಾರೀ ಮಳೆ, ಪ್ರವಾಹದಿಂದಾಗಿ 6 ದಿನಗಳಿಂದ ಮುಚ್ಚಲ್ಪಟ್ಟಿದ್ದ ಮುಂಬಯಿ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೋಮವಾರ ಸಂಚಾರಕ್ಕೆ ಮುಕ್ತವಾಗಿದೆ. ಪ್ರವಾಹ ಇಳಿಮುಖವಾದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಹೆದ್ದಾರಿಯನ್ನು ಭಾಗಶಃ(ಒಂದು ಲೇನ್‌ ಮಾತ್ರ) ತೆರೆಯಲಾಗಿದೆ.

ಉತ್ತರಾಖಂಡ, ಜಮ್ಮುವಿನ‌ಲ್ಲಿ 9 ಬಲಿ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಾಗೂ ಜಮ್ಮುವಿನಲ್ಲಿ ಭಾರೀ ಮಳೆಯಿಂದಾಗಿ ಸೋಮವಾರ ಸಂಭವಿಸಿದ ಭೂಕುಸಿತಕ್ಕೆ ಒಬ್ಬ ಮಹಿಳೆ, 9 ತಿಂಗಳ ಪುತ್ರಿ ಸೇರಿದಂತೆ 9 ಮಂದಿ ಬಲಿಯಾಗಿದ್ದಾರೆ. ಈ ನಡುವೆ, ಮ್ಯಾನ್ಮಾರ್‌ನಲ್ಲಿ ಶನಿವಾರ ಸಂಭವಿಸಿದ ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ ಸೋಮವಾರ 56ಕ್ಕೇರಿಕೆಯಾಗಿದೆ. ಅವಶೇಷಗಳಡಿ ಇನ್ನೂ ಹಲವರು ಮಂದಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲರ ಕಣ್ಣಂಚಲ್ಲೂ ನೀರು ತಂದ ದೃಶ್ಯ
ಸಾವಿನಲ್ಲೂ ಕಂದಮ್ಮನ ಕೈ ಬಿಟ್ಟಿರಲಿಲ್ಲ ಈ ತಾಯಿ!
ಎರಡು ದಿನಗಳ ಹಿಂದೆ ಭಯಾನಕ ಭೂಕುಸಿತಕ್ಕೆ ಸಾಕ್ಷಿಯಾದ ಕೇರಳದ ಕೊಟ್ಟಕ್ಕುನ್ನುವಿನಲ್ಲಿ ಅವಶೇಷಗಳಡಿ ಪತ್ತೆಯಾದ ಆ ತಾಯಿ-ಮಗುವಿನ ಮೃತದೇಹಗಳನ್ನು ನೋಡಿ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲಿಗಳೂ ತುಂಬಿ ಬಂದವು. 2 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಸೋಮವಾರ ಅವಶೇಷಗಳಡಿ ಇಬ್ಬರ ನಿಶ್ಚಲ ದೇಹಗಳು ರಕ್ಷಣಾ ಕಾರ್ಯಕರ್ತರ ಕಣ್ಣಿಗೆ ಬಿದ್ದವು. ಮಣ್ಣನ್ನು ಸರಿಸಿ ನೋಡಿ ದರೆ, ತನ್ನ ಕಂದಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದ ಸ್ಥಿತಿಯಲ್ಲೇ ತಾಯಿ-ಮಗುವಿನ ಮೃತದೇಹ ಕಂಡುಬಂದವು. 21 ವರ್ಷದ ಗೀತಾ, ತನ್ನ ಒಂದೂವರೆ ವರ್ಷದ ಗಂಡು ಮಗು ಧ್ರುವನನ್ನು ರಕ್ಷಿಸುವ ತವಕದಲ್ಲಿ ಗಟ್ಟಿಯಾಗಿ ಕೈಗಳನ್ನು ಹಿಡಿದಿದ್ದಳು. ಆದರೆ, ರಾಕ್ಷಸನಂತೆ ಎರಗಿದ ಮಣ್ಣಿನ ಗುಡ್ಡೆಯು ಆ ತಾಯಿಯ ಮೇಲೆ ಕರುಣೆ ತೋರಲೇ ಇಲ್ಲ. ಅಮ್ಮ-ಮಗುವಿನ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ, ರಕ್ಷಣಾ ಕಾರ್ಯಕರ್ತರು ಸೇರಿದಂತೆ ಸ್ಥಳೀಯರೆಲ್ಲರೂ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಈ ಭೂಕುಸಿತದಲ್ಲಿ ಗೀತಾರ ಪತಿ ಶರತ್‌ವೊಬ್ಬರೇ ಬದುಕುಳಿದಿದ್ದಾರೆ. ಪತ್ನಿ ಗೀತಾ, ಪುತ್ರ ಧ್ರುವ ಮತ್ತು ತಾಯಿ ಸರೋಜಿನಿ ಸಜೀವ ಸಮಾಧಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next